ಡಿಸೆಂಬರ್‌ 23ರಂದು ಬೆಳಗಾವಿಯಲ್ಲಿ ಭಗವದ್ಗೀತೆ ಮಹಾ ಸಮರ್ಪಣೆ

KannadaprabhaNewsNetwork | Published : Dec 21, 2023 1:15 AM

ಸಾರಾಂಶ

ಬೆಳಗಾವಿ ಜಿಲ್ಲೆಯಾದ್ಯಂತ 159 ಶ್ಲೋಕ ಕೇಂದ್ರಗಳು ನಡೆಯುತ್ತಿದ್ದು, ನೂರಾರು ಶಾಲೆಗಳ 28 ಸಾವಿರಕ್ಕೂ ಹೆಚ್ಚು ಮಕ್ಕಳು ಭಗವದ್ಗೀತೆ ಕಲಿತಿದ್ದಾರೆ.

ಶಿರಸಿ:

ಕಳೆದ ಒಂದು ತಿಂಗಳಿನಿಂದ ಬೆಳಗಾವಿ ಕೇಂದ್ರಿತವಾಗಿ ರಾಜ್ಯಾದ್ಯಂತ ನಡೆಯುತ್ತಿರುವ ಭಗವದ್ಗೀತೆ ಅಭಿಯಾನದ ಮಹಾಸಮರ್ಪಣೆ ಶನಿವಾರ ಬೆಳಗಾವಿಯಲ್ಲಿ ನಡೆಯಲಿದೆ ಎಂದು ಸೋಂದಾ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ತಿಳಿಸಿದ್ದಾರೆ.

ಈ ಕುರಿತು ಬೆಳಗಾವಿಯಲ್ಲಿ ಶ್ರೀಗಳು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಬೆಳಗಾವಿಯ ಕಾಲೇಜು ರಸ್ತೆಯ ಲಿಂಗರಾಜ ಕಾಲೇಜು ಮೈದಾನದಲ್ಲಿ ಅಂದು ಸಂಜೆ 4ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಸಾನ್ನಿಧ್ಯ ವಹಿಸುವರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ವಿಪ ಸಭಾಪತಿ ಬಸವರಾಜ ಹೊರಟ್ಟಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು. ರಾಜ್ಯಸಭಾ ಸದಸ್ಯ ಸುಧಾಂಶು ತ್ರಿವೇದಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ಗಣ್ಯರು ಸಹ ಭಾಗವಹಿಸಲಿದ್ದಾರೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ. ಹಾಗಾಗಿ ಸಾರ್ವಜನಿಕರು ತಪ್ಪದೆ ಭಾಗವಹಿಸಬೇಕು ಎಂದು ಹೇಳಿದ್ದಾರೆ.ನ. 21ರಂದು ಬೆಳಗಾವಿ ಕೇಂದ್ರಿತವಾಗಿ ರಾಜ್ಯಾದ್ಯಂತ ಭಗವದ್ಗೀತೆ ಅಭಿಯಾನ ಉದ್ಘಾಟನೆಯಾಗಿದೆ. ಬೆಳಗಾವಿ ಜಿಲ್ಲೆಯಾದ್ಯಂತ 159 ಶ್ಲೋಕ ಕೇಂದ್ರಗಳು ನಡೆಯುತ್ತಿದ್ದು, ನೂರಾರು ಶಾಲೆಗಳ 28 ಸಾವಿರಕ್ಕೂ ಹೆಚ್ಚು ಮಕ್ಕಳು ಭಗವದ್ಗೀತೆ ಕಲಿತಿದ್ದಾರೆ. 50ಕ್ಕೂ ಹೆಚ್ಚು ಉಪನ್ಯಾಸ, ಭಗವದ್ಗೀತೆ ಮತ್ತು ಕಾನೂನು, ಭಗವದ್ಗೀತೆ ಮತ್ತು ಮ್ಯಾನೇಜ್ಮೆಂಟ್ ಹಾಗೂ ಗೀತಾ ಸಮನ್ವಯ ಎನ್ನುವ 3 ಪ್ರಮುಖ ಕಾರ್ಯಕ್ರಮಗಳು ನಡೆದಿವೆ ಎಂದು ಶ್ರೀಗಳು ವಿವರಿಸಿದ್ದಾರೆ.ಇಂದಿನ ಜೀವನಕ್ಕೆ ಭಗವದ್ಗೀತೆ ಕೊಡುವ ಜೀವನ ಕ್ರಮ ಅಗತ್ಯವಿದೆ. ಶಾಂತಿ ಕಾಣದೆ ಮನುಷ್ಯ ಚಡಪಡಿಸುತ್ತಿದ್ದಾನೆ. ವಿಜ್ಞಾನದಲ್ಲಿ ನಾವು ಪ್ರಗತಿ ಸಾಧಿಸುತ್ತಿದ್ದೇವೆ. ಆದರೆ ಮಾನಸಿಕ ಆರೋಗ್ಯದಲ್ಲಿ ಹಿಂದೆ ಹೋಗುತ್ತಿದ್ದೇವೆ. ವಿಶ್ವದ ಬೇರೆ ದೇಶಗಳಲ್ಲಿ ಕೂಡ ಪರಿಸ್ಥಿತಿ ಗಂಭೀರವಾಗಿದೆ. ನಮ್ಮ ಸಂಸ್ಕೃತಿಯ ಪ್ರಭಾವದಿಂದಾಗಿ ಬೇರೆ ದೇಶಗಳಷ್ಟು ನಮ್ಮಲ್ಲಿ ಕೆಟ್ಟಿಲ್ಲ. ಸಣ್ಣ ವಯಸ್ಸಿನಲ್ಲೇ ಹೃದಯಾಘಾತ ಪ್ರಮಾಣ ಕೂಡ ಹೆಚ್ಚಾಗುತ್ತಿದೆ. ವೈಜ್ಞಾನಿಕವಾಗಿ ಮುಂದೆ ಹೋದಷ್ಟೇ ಮಾನಸಿಕವಾಗಿ ಹಿಂದೆ ಹೋಗುತ್ತಿದ್ದೇವೆ. ಇದಕ್ಕೆಲ್ಲ ಔಷಧ ಭಗವದ್ಗೀತೆಯಲ್ಲಿದೆ. ಹಾಗಾಗಿ ಭಗವದ್ಗೀತೆ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಸ್ವಾಮಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

Share this article