ರಾಜ್ಯ ಔಷಧ ಮಾರಾಟ ಪ್ರತಿನಿಧಿಗಳ ಫೆಡರೇಷನ್‌ನಿಂದ ಪ್ರಧಾನಿಗೆ ಮನವಿಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಕೇಂದ್ರ ಸರ್ಕಾರ ಕಾರ್ಮಿಕ ಮತ್ತು ರೈತ ವಿರೋಧಿ ನೀತಿಗಳನ್ನು ಜಾರಿಗೆ ತಂದಿದ್ದು, ಕೂಡಲೇ ಅವುಗಳನ್ನು ರದ್ದುಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಔಷಧ ಮಾರಾಟ ಪ್ರತಿನಿಧಿಗಳ ಫೆಡರೇಷನ್ ನೀಡಿದ ಮುಷ್ಕರಕ್ಕೆ ರಾಜ್ಯ ಔಷಧ ಮಾರಾಟ ಪ್ರತಿನಿಧಿಗಳು ಬುಧವಾರ ತಮ್ಮ ಸೇವೆ ಸ್ಥಗಿತಗೊಳಿಸಿ ಬೆಂಬಲ ಸೂಚಿಸಿದರು.ನಗರದ ಚೆನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡ ನೂರಾರು ಔಷಧ ಮಾರಾಟ ಪ್ರತಿನಿಧಿಗಳು, ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೊಶ ವ್ಯಕ್ತಪಡಿಸಿದರು. ನಂತರ ಪ್ರತಿಭಟನಾ ರ್‍ಯಾಲಿ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿದರು.
ಈ ವೇಳೆ ಸಂಘಟನೆಯ ರಾಜ್ಯ ಕಾರ್ಯದರ್ಶಿ ಪ್ರವೀಣಕುಮಾರ ಶಿವಶಿಂಪರ ಮಾತನಾಡಿ, ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳ ಮೇಲಿನ ಅಬಕಾರಿ ಸುಂಕ ಹೆಚ್ಚಳ ಮಾಡುವ ಮೂಲಕ ಕೇಂದ್ರ ಸರ್ಕಾರ ದೇಶದ ಜನರಿಗೆ ಅಚ್ಛೇ ದಿನ್ ಬದಲಾಗಿ, ದುಬಾರಿ ದಿನ್ ಜಾರಿಗೆ ತಂದಿದೆ. ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ಹಾಗೂ ಬೆಂಬಲ ನೀಡಬೇಕಾದ ಸರ್ಕಾರ ಔಷಧ ಮತ್ತು ಮಾತ್ರೆಗಳ ಮೇಲೆ ಜಿಎಸ್‌ಟಿ ಹೇರುವ ಮೂಲಕ ಬಡ ರೋಗಿಗಳಿಗೆ ಗಾಯದ ಮೇಲೆ ಬರೆ ಎಳೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಔಷಧ ಮಾರಾಟ ಪ್ರಚಾರದ ಉದ್ಯೋಗಿಗಳಿಗೆ ಶಾಸನಬದ್ಧ ಕೆಲಸದ ನಿಯಮ ಜಾರಿಗೆ ತರುವುದು. ಔಷಧಗಳ ಬೆಲೆಗಳನ್ನು ಕೂಡಲೇ ಕಡಿತಗೊಳಿಸುವುದು. ವೈದ್ಯಕೀಯ ಸೇವೆ ಮತ್ತು ಸಾಧನಗಳ ಮೇಲೆ ಹಾಕಿರುವ ಜಿಎಸ್‌ಟಿ ತೆರಿಗೆ ರದ್ದುಗೊಳಿಸುವುದು. ಔಷಧ ಮಾರಾಟಗಾರರ ರಕ್ಷಣೆ ಹಾಗೂ ಆರ್ಥಿಕ ಭದ್ರತೆಗೆ ಸರ್ಕಾರ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.
ನಂತರ ತಹಸೀಲ್ದಾರ್ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಸಂಘಟನೆಯ ಅಧ್ಯಕ್ಷ ರಮೇಶ ಹಿರೇಗೌಡರ, ಕಾರ್ಯದರ್ಶಿ ಮಂಜುನಾಥ ಹೊಸಮಠ, ಖಜಾಂಚಿ ಕಾರ್ತಿಕ ಹಚ್ಚೊಳ್ಳಿ, ಕರ್ನಾಟಕ ಪ್ರಾಂತ ರೈತಸಂಘದ ಉಪಾಧ್ಯಕ್ಷ ಬಿ.ಎಸ್. ಸೊಪ್ಪಿನ, ಸಿಐಟಿಯು ಜಿಲ್ಲಾಧ್ಯಕ್ಷ ಬಿ.ಐ. ಈಳಗೇರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.