- ಹುಬ್ಬಳ್ಳಿಯಲ್ಲಿ ಜ. 22ರಂದು ಜನಪದ ಕಲಾಬಳಗದಿಂದ ದೊಡ್ಡಾಟ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಅಯೋಧ್ಯೆಯಲ್ಲಿ ಜ. 22ರಂದು ಶ್ರೀರಾಮಮಂದಿರ ಉದ್ಘಾಟನೆಯಾಗಲಿದ್ದು, ಶ್ರೀರಾಮನ ದರ್ಶನಕ್ಕೆ ದೇಶದ ಜನರು ಎದುರು ನೋಡುತ್ತಿದ್ದಾರೆ. ಆದರೆ, ಅದೇ ದಿನ ಹುಬ್ಬಳ್ಳಿ ಜನತೆಗೆ ಜನಪದ ಕಲಾ ಬಳಗ ಟ್ರಸ್ಟ್ ಶ್ರೀರಾಮನ ದರ್ಶನಕ್ಕೆ ಮುಂದಾಗಿದೆ.ದೊಡ್ಡಾಟ ಪ್ರದರ್ಶನದ ಮೂಲಕ ಶ್ರೀರಾಮನ ದರ್ಶನ ಮಾಡಲಿಸಲಿದೆ ಜಾನಪದ ಕಲಾ ಬಳಗ ಟ್ರಸ್ಟ್. ಕಳೆದ ಒಂದು ತಿಂಗಳಿಂದ ತರಬೇತಿ ನಡೆಯುತ್ತಿದ್ದು, ಬಳಗದ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಹುಬ್ಬಳ್ಳಿಯಲ್ಲಿರುವ ಜನಪದ ಕಲಾ ಬಳಗ ಟ್ರಸ್ಟ್ ಹಲವು ವರ್ಷಗಳಿಂದ ದೊಡ್ಡಾಟ ಉಳಿವಿಗಾಗಿ ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿದೆ. ಈ ಸಂಸ್ಥೆಯಲ್ಲಿರುವ ಬಹುತೇಕರು ಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದರೊಂದಿಗೆ ಈ ದೊಡ್ಡಾಟ ಕಲಿಕೆ, ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಇದೇ ಕಲಾ ಸಂಸ್ಥೆ ಈಗಾಗಲೇ ಏಳು ಬಾರಿ "ಕರ್ಣಪರ್ವ " ದೊಡ್ಡಾಟ ಪ್ರದರ್ಶಿಸಿದೆ. ಈಗ ಹುಬ್ಬಳ್ಳಿಯಲ್ಲಿ 8ನೇ ಪ್ರದರ್ಶನವಾಗಿ "ಶ್ರೀರಾಮಚಂದ್ರ " ದೊಡ್ಡಾಟ ಪ್ರದರ್ಶನಕ್ಕೆ ಮುಂದಾಗಿದೆ. ಇದರೊಂದಿಗೆ ಕಳೆದ 5-6 ತಿಂಗಳಿಂದ ಮಕ್ಕಳಿಗೆ, ಉತ್ಸಾಹಿಗಳಿಗೆ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ.
ನಶಿಸಿ ಹೋಗುತ್ತಿರುವ ದೊಡ್ಡಾಟ ಕಲೆಯನ್ನು ಉಳಿಸಿ ಬೆಳೆಸುವುದರೊಂದಿಗೆ ಇಂದಿನ ಯುವಪೀಳಿಗೆಗೆ ಅದರ ಪ್ರಾಮುಖ್ಯತೆ, ಮಹತ್ವ ತಿಳಿಸಿಕೊಡುವ ನಿಟ್ಟಿನಲ್ಲಿ ಈ ಜನಪದ ಕಲಾ ಬಳಗ ನಿರಂತರವಾಗಿ ಶ್ರಮಿಸುತ್ತಿದೆ. ಸಾಮಾನ್ಯ ನಾಟಕಗಳಂತೆ ಇದರಲ್ಲಿ ಭಾಷೆ ಇರುವುದಿಲ್ಲ. ಪೌರಾಣಿಕ, ದೊಡ್ಡಾಟದ ಹಿನ್ನೆಲೆಗೆ ತಕ್ಕಂತೆ ಭಾಷೆ ಬಳಸಬೇಕಾಗುತ್ತದೆ. ಹಾಗೆಯೇ ಜನರಿಗೆ ಅರ್ಥವಾಗುವಂತೆ ದೊಡ್ಡಾಟದ ಪರಿಭಾಷೆಯಲ್ಲಿ ತಿಳಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಅಲ್ಲದೇ ನೇಪಥ್ಯಕ್ಕೆ ಸರಿದ ಹಿರಿಯ ದೊಡ್ಡಾಟದ ಕಲಾವಿದರನ್ನು ಗುರುತಿಸಿ ಅವರಿಂದಲೇ ಮಕ್ಕಳಿಗೆ, ಆಸಕ್ತರಿಗೆ ತರಬೇತಿ ನೀಡಲಾಗುತ್ತಿದೆ.ಕೆ.ಎಸ್. ಶರ್ಮಾ ಹಾಲ್‌ನಲ್ಲಿ ತರಬೇತಿ:
ಜ. 2ರಂದು ಪ್ರಯೋಗಾರ್ಥ ಪ್ರದರ್ಶನ:
ಕಲಾ ತಂಡದಿಂದ ಜ. 2ರಂದು ಅರವಿಂದ ನಗರದಲ್ಲಿ ಪ್ರಯೋಗಾರ್ಥವಾಗಿ ದೊಡ್ಡಾಟ ಪ್ರದರ್ಶನ ಮಾಡಲಾಗುತ್ತಿದೆ. ನಂತರ ಜ. 22ರಂದು ಇದೇ "ಶ್ರೀರಾಮಚಂದ್ರ " ದೊಡ್ಡಾಟ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಕಲಾ ಬಳಗದ ಸರ್ವ ಸದಸ್ಯರ ಸಭೆ ಕರೆದು ನಿರ್ಧರಿಸಲಾಗಿದ್ದು, ಜ. 22ರಂದು ಸಂಜೆ 6 ಗಂಟೆಗೆ ದೇಶಪಾಂಡೆ ನಗರದಲ್ಲಿರುವ ಸವಾಯಿ ಗಂಧರ್ವ ಸಭಾಂಗಣ ಇಲ್ಲವೇ ನೆಹರು ಕ್ರೀಡಾಂಗಣದಲ್ಲಿ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಂಡದ ಸದಸ್ಯ ರಮೇಶ ಕರಿಬಸಮ್ಮನವರ ಕನ್ನಡಪ್ರಭಕ್ಕೆ ತಿಳಿಸಿದರು.ನೇಪಥ್ಯಕ್ಕೆ ಸರಿದ ದೊಡ್ಡಾಟ ಕಲೆಯನ್ನು ಎಲ್ಲರಿಗೂ ಪರಿಚಯಿಸುವುದರೊಂದಿಗೆ ಮುನ್ನಲೆಗೆ ತರುವ ಉದ್ದೇಶ ಹೊಂದಲಾಗಿದೆ. ದೊಡ್ಡಾಟದ ಮೂಲಕ ಶ್ರೀರಾಮನ ಜೀವನ ಚರಿತ್ರೆಯನ್ನು ಜನತೆಗೆ ತಿಳಿಸುವ ಚಿಕ್ಕ ಪ್ರಯತ್ನಕ್ಕೆ ಕಲಾ ಬಳಗ ಮುಂದಾಗಿದೆ ಎನ್ನುತ್ತಾರೆ ಜನಪದ ಕಲಾ ಬಳಗದ ಸಹಕಾರ್ಯದರ್ಶಿ ಶಿವರುದ್ರಪ್ಪ ಬಡಿಗೇರ.