ಜೀವನ ಪಥವನ್ನು ದರ್ಶನ ಮಾಡಿಸುವುದೇ ಭಗವದ್ಗೀತೆ: ನಿವೃತ್ತ ನ್ಯಾ. ಎಚ್. ಬಿಲ್ಲಪ್ಪ

KannadaprabhaNewsNetwork |  
Published : Nov 19, 2025, 12:30 AM IST
ಪೋಟೋ: 18ಎಸ್‌ಎಂಜಿಕೆಪಿ08ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದಲ್ಲಿ ಶಿವಮೊಗ್ಗದ ಸ್ವರ್ಣರಶ್ಮಿ ಟ್ರಸ್ಟ್ ಹಾಗೂ ಶ್ರೀ ಭಗವದ್ಗೀತಾ ಅಭಿಯಾನ-2025 ರ ಜಿಲ್ಲಾ ಸಮಿತಿಗಳ ಸಂಯು ಕ್ತಾಶ್ರಯದಲ್ಲಿ ಆಯೋಜಿಸಿದ್ದ ಭಗವ ದ್ಗೀತೆ ಮತ್ತು ಅಪರಾಧ ನಿಯಂತ್ರಣ ಕುರಿತ ಒಂದು ದಿನದ ವಿಚಾರ ಸಂಕಿರಣದಲ್ಲಿ ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಮಾತನಾಡಿದರು. | Kannada Prabha

ಸಾರಾಂಶ

ಜೀವನ ಪಥವನ್ನು ದರ್ಶನ ಮಾಡಿಸುವುದೇ ಭಗವದ್ಗೀತೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯ ನಿವೃತ್ತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ ಬಣ್ಣಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜೀವನ ಪಥವನ್ನು ದರ್ಶನ ಮಾಡಿಸುವುದೇ ಭಗವದ್ಗೀತೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯ ನಿವೃತ್ತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ ಬಣ್ಣಿಸಿದರು.

ಕುವೆಂಪು ವಿಶ್ವವಿದ್ಯಾಲಯದಲ್ಲಿ ಶಿವಮೊಗ್ಗದ ಸ್ವರ್ಣರಶ್ಮಿ ಟ್ರಸ್ಟ್ ಹಾಗೂ ಶ್ರೀ ಭಗವದ್ಗೀತಾ ಅಭಿಯಾನ-2025ರ ಜಿಲ್ಲಾ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ ಕುರಿತ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಜ್ಞಾನಯೋಗ, ಭಕ್ತಿಯೋಗ, ಕರ್ಮ ಯೋಗ, ಧ್ಯಾನಯೋಗಗಳ ದಾರಿಗಳ ಮೂಲಕ ಮನುಷ್ಯನ ಜೀವನಕ್ಕೆ ಉತ್ತಮ ಗ್ರಾಸವನ್ನು ಒದಗಿಸುವ ಶ್ರೇಷ್ಠಗ್ರಂಥ ಭಗವದ್ಗೀತೆಯಾಗಿದೆ. ಸುಖ-ದುಃಖ, ಜಯ-ಅಪಜಯಗಳನ್ನು ಸಮಚಿತ್ತತೆಯಿಂದ ನೋಡುವುದೇ ಭಗವದ್ಗೀತೆಯ ಸಾರವಾಗಿದೆ. ನಾವು ನಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುತ್ತಿದ್ದೇವೆಯೇ ಎಂಬ ಪ್ರಶ್ನೆಗಳಿಗೆಲ್ಲಾ ಭಗವದ್ಗೀತೆ ಉತ್ತರ ಕೊಡುವ ಗ್ರಂಥವಾಗಿದೆ ಎಂದರು.

ಇಂದ್ರೀಯ ಸಮೇತವಾದ ದೃಷ್ಟಿಯಲ್ಲಿ ಸಮಾಜವನ್ನು ಶ್ರೇಷ್ಠದೃಷ್ಟಿಯಿಂದ ನೋಡಬೇಕು. ಬ್ರಹ್ಮಾಂಡವೇ ಒಂದು ರಂಗಸ್ಥಳ. ನಾವೆಲ್ಲಾ ಅದರಲ್ಲಿ ಪ್ರಾತ್ರಧಾರಿಗಳು ಎಂದ ಅವರು, ನಮ್ಮ ನೋವನ್ನು ನಾವೇ ಅನುಭವಿಸಬೇಕು. ನಮಗೆ ನಾವೇ ಸಾಯುತ್ತೇವೆ ಈ ನಾಟಕಕ್ಕೆ ಮೊದಲು-ಕೊನೆ ಏನೂ ಇಲ್ಲ. ಆಡುವವರು ನೋಡುವವರು. ನೋಡುವವರು ಆಡುವವರು ಇದೇ ಜೀವನದ ಸೌಂದರ್ಯ ಎಂದರು.

ಸಮಾರಂಭದ ಸಾನಿಧ್ಯವನ್ನು ವಹಿಸಿದ್ದ ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ, ಕುವೆಂಪು ವಿಶ್ವವಿದ್ಯಾಲಯದಲ್ಲಿ ಜರುಗುತ್ತಿರುವ ವಿಚಾರ ಸಂಕಿರಣ ಐತಿಹಾಸಿಕ ಕಾರ್ಯಕ್ರಮವಾಗಿದೆ. ಇಲ್ಲಿಯವರೆಗೂ ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ ಕುರಿತು ಬೇರ್‍ಯಾವ ವಿಶ್ವವಿದ್ಯಾಲಯಗಳಲ್ಲಿಯೂ ಈ ವಿಷಯ ಕುರಿತು ವಿಚಾರ ಸಂಕಿರಣ ಏರ್ಪಡಿಸಿದ್ದಿಲ್ಲ. ಭಗವದ್ಗೀತೆ ಮತ್ತು ಅಪರಾಧಗಳ ನಡುವೆ ಒಂದು ಸಂಬಂಧವಿದೆ. ಅಪರಾಧ ಮೂಲಕ್ಕೆ ಹೋಗಿ ಚಿವುಟಿಹಾಕುತ್ತಾ ಸಮಾಜವನ್ನು ಸುಸ್ಥಿತಿಗೆ ತರುವುದೇ ಭಗವದ್ಗೀತೆಯಾಗಿದೆ. ಮನಃಶಾಸ್ತ್ರ, ಕಾನೂನು ಮತ್ತು ಅಪಾರಾಧ ಶಾಸ್ತ್ರಗಳ ಚಿಂತನೆ, ಚರ್ಚೆ ವಿಶ್ವವಿದ್ಯಾಲಯಗಳಲ್ಲಿ ಆಗಬೇಕಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಶರತ್ ಅನಂತಮೂರ್ತಿ ಮಾತನಾಡಿ, ಇವತ್ತು ಸಂತೋಷದ ದಿನ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ. ಬೀದಿಯಲ್ಲಿ ನಿಂತು ಮಾತನಾಡಿದರೆ ಅದು ಜಗಳವಾಗುತ್ತದೆ. ವಿಶ್ವವಿದ್ಯಾಲಯ ಅಂದರೆ ಸಂವಿಧಾನದಡಿಯಲ್ಲಿ ಸ್ಥಾಪಿತವಾಗಿರುವ ಜಾತ್ಯಾತೀತ ಸಂಸ್ಥೆ. ವಿಶ್ಲೇಷಣಾತ್ಮಕ ನಿಟ್ಟಿನಲ್ಲಿ ನಡೆಯುವ ಚರ್ಚೆಯಾಗಬೇಕು. ವಿಷಯಗಳಿಗೆ ಗಾಂಭಿರ್‍ಯತೆ ಹಾಗೂ ಚರ್ಚೆಗೆ ಅವಕಾಶ ಇರಬೇಕು. ಸೆನ್ಸಾರ್‌ಶಿಪ್‌ಗೆ ಅವಕಾಶ ಇರಕೂಡದು. ನಮ್ಮ ತಂದೆ ಪ್ರೊ.ಯು.ಆರ್. ಅನಂತಮೂರ್ತಿಯವರು ಅನೇಕ ಹೋರಾಟಗಳಿಂದ ಬಂದವರು. ಆದರೂ ಅವರು ದ್ವಂದ್ವ ಅನಂತಮೂರ್ತಿಗಳಾಗಿರಲಿಲ್ಲ ಎಂದು ಸ್ಮರಿಸಿದರು.

ಶಾಸಕ ಡಿ.ಎಸ್. ಅರುಣ್, ಕುಲಸಚಿವ ಪ್ರೊ.ಎ.ಎಲ್. ಮಂಜುನಾಥ್, ವಿವಿ ಹಣಕಾಸು ಅಧಿಕಾರಿ ಪ್ರೊ. ರಮೇಶ್, ಅಭಿಯಾನ ಸಮಿತಿಯ ಕಾರ್ಯಾಧ್ಯಕ್ಷ ಡಾ. ಅಶೋಕ್ ಜಿ. ಭಟ್, ಸಮಿತಿಯ ಡಾ. ಬಾಲಕೃಷ್ಣಹೆಗಡೆ, ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್, ಡಾ. ಗಜಾನನ ಪ್ರಭು ಸೇರಿದಂತೆ ಮೊದಲಾದವರಿದ್ದರು. ಉದ್ಘಾಟನಾ ಬಳಿಕ ವಿವಿಧ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರಗೋಷ್ಠಿಗಳು ನಡೆದವು.

PREV

Recommended Stories

ಸಹಕಾರ ಸಂಘಗಳಿಂದ ಮಾತ್ರ ರೈತರ ಆರ್ಥಿಕ ಸದೃಢತೆ ಸಾಧ್ಯ: ಶಾಸಕ ಕೆ.ಎಂ.ಉದಯ್
ಸಮಾಜದಲ್ಲಿ ಪೌರಕಾರ್ಮಿಕರ ಸೇವೆ ಅನನ್ಯವಾದುದು: ಜೆ.ಸಿ ಗೀತಾರಾಜಕುಮಾರ್