ಕನ್ನಡಪ್ರಭ ವಾರ್ತೆ ಮಳವಳ್ಳಿ
ಆಹಾರ ಅರಸುತ್ತಾ, ನೀರು ಕುಡಿಯಲು ತಾಲೂಕಿನ ಶಿವನಸಮುದ್ರದ (ಬ್ಲಫ್) ಬಳಿ ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರದ 60 ಅಡಿ ಆಳದ ಕಾಲುವೆಗೆ ಇಳಿದು ಹೊರ ಬರಲಾಗದೆ ಸಿಲುಕಿದ್ದ ಗಂಡು ಕಾಡಾನೆಯನ್ನು ಸತತ ಮೂರು ದಿನಗಳ ಕಾರ್ಯಾಚರಣೆ ನಂತರ ಮಂಗಳವಾರ ಸುರಕ್ಷಿತವಾಗಿ ಮೇಲೆತ್ತಿ ರಕ್ಷಣೆ ಮಾಡಿ ಧನಗೂರು ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.ಶನಿವಾರ 10 ರಿಂದ 12 ವರ್ಷದ ಕಾಡಾನೆ ನೀರು ಕುಡಿಯಲು ಶಿವನಸಮುದ್ರ (ಬ್ಲಫ್) ಬಳಿಯ ಪಯನೀರ್ ಜೆನ್ಕೋ ಲಿಮಿಟೆಡ್ ವಿದ್ಯುತ್ ಉತ್ಪಾದನಾ ಕೇಂದ್ರದ ಕೆನಾಲ್ (ಕಾಲುವೆ)ಗೆ ಇಳಿದಾಗ ನೀರಿನ ರಭಸಕ್ಕೆ ಕೆನಾಲ್ ಒಳಗೆ ಸಿಲುಕಿಕೊಂಡಿತ್ತು. ಆನೆ ಬಂದ ದಾರಿಯಲ್ಲೆ ವಾಪಸ್ ಆಗಬಹುದು ಅಂತ ಒಂದು ದಿನ ಕಾದರೂ ಆನೆ ವಾಪಸ್ ತೆರಳದಿದ್ದಾಗ ವಿದ್ಯುತ್ ಉತ್ಪಾದನಾ ಕೇಂದ್ರದ ಸಿಬ್ಬಂದಿ ಭಾನುವಾರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಸೋಮವಾರ ಕಾರ್ಯ ಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿಗಳು, ಡಿಸಿಎಫ್‌ಡಿ ರಘು ಮತ್ತು ಮೈಸೂರು ವಿಭಾಗದ ವನ್ಯಜೀವಿ ವಲಯದ ಡಿಸಿಎಫ್ ಪ್ರಭು ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಿಸಿ ಮೊದಲಿಗೆ ನಾಲೆಯಲ್ಲಿನ ನೀರಿನ ಪ್ರಮಾಣವನ್ನು ತಗ್ಗಿಸಿದರು. ನಂತರ ದಿನವೀಡಿ ಸೋಮವಾರ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿರಲಿಲ್ಲ. ಸುಮಾರು 150 ರಿಂದ 200 ಮೀಟರ್ ಅಂತರದಲ್ಲಿಯೇ ಆನೆ ಓಡಾಟ ನಡೆಸುತ್ತಿತ್ತು. ರಕ್ಷಣಾ ಸ್ಥಳದಿಂದ ಆನೆಯು ಸುಮಾರು 60 ಅಡಿ ಅಳದಲ್ಲಿತ್ತು. ಆನೆ ಸುರಕ್ಷತೆಗಾಗಿ ಆಹಾರ ಪೂರೈಸಲಾಗುತ್ತಿತ್ತು.ಸ್ಥಳೀಯ ಮಟ್ಟದ ಕ್ರೇನ್ ಬಳಸಿ ಆನೆ ಮೇಲೆತ್ತಲು ಪ್ರಯತ್ನಿಸಿದರೂ ಅದು ವಿಫಲವಾಗಿತ್ತು. ಕತ್ತಲಾದ ಹಿನ್ನೆಲೆ ಮಂಗಳವಾರ ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಿದ ಅಧಿಕಾರಿಗಳು, ಸಿಬ್ಬಂದಿ ಬೆಂಗಳೂರಿನಿಂದ ಹೈಡ್ರಾಲಿಕ್ ಕ್ರೇನ್ ತರಿಸಿ ಕಂಟೇನರ್ ಸಹಾಯದ ಮೂಲಕ ಅನೆ ಮೇಲೆತ್ತಲು ಯೋಜನೆ ರೂಪಿಸಿದರು.
ಅರವಳಿಕೆ ನೀಡಿ ಮೇಲೆತ್ತಿದ್ದ ರಕ್ಷಣಾ ಪಡೆ:ಪಶು ವೈದ್ಯ ರಮೇಶ್ ಹಾಗೂ ವೈದ್ಯ ಆದರ್ಶ ಜಂಟಿ ಕಾರ್ಯಾಚರಣೆಯಲ್ಲಿ ಆನೆಗೆ ಅರವಳಿಕೆ ಚುಚ್ಚು ಮದ್ದು ನೀಡಿದರು. ಎರಡನೇ ಚುಚ್ಚು ಮದ್ದಿಗೆ ಕೆಳಕ್ಕುರುಳಿದ ಆನೆಯನ್ನು ಕಂಟೇನರ್‌ನಲ್ಲಿ ಇರಿಸಿ ಮೇಲೆತ್ತಲಾಯಿತು.
ಆನೆ ರಕ್ಷಿಸಿ ಮೇಲೆ ಬಂದ ನಂತರ ನಾಲ್ಕು ದಿನಗಳ ಕಾಲ ನೀರಿನಲ್ಲಿದ್ದ ಆನೆಯ ಸೊಂಡಿಲು ಹಾಗೂ ಕಾಲುಗಳಲ್ಲಿ ಸೋಂಕು ತಗುಲಿದ್ದ ಕಾರಣ ಅರಿಶಿನ ಹಾಗೂ ನೀಲಗಿರಿ ತೈಲದ ಲೇಪನ ಮಾಡಿ ಪ್ರಥಮ ಚಿಕಿತ್ಸೆ ನೀಡಲಾಯಿತು. ನಂತರ ಆನೆಗೆ ಸಹಜ ಸ್ಥಿತಿಗೆ ಬರುವಂತೆ ಚುಚ್ಚುಮದ್ದು ನೀಡಿ ಧನಗೂರು ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.ರಕ್ಷಣಾ ಕಾರ್ಯದ ವೇಳೆ ಮೊದಲು ಆನೆಗೆ ಅರವಳಿಕೆ ಮದ್ದು ನೀಡುವ ಮುನ್ನ ಕಾಲುವೆಗೆ ಮೇಲ್ಬಾಗಕ್ಕೆ ಪಟಾಕಿ ಸಿಡಿಸಿ ಆನೆಯನ್ನು ಓಡಿಸುವ ಪ್ರಯತ್ನ ಮಾಡಲಾಯಿತು. ಮದ್ದು ನೀಡಿದ ಆನೆಯು ಸಾಕಷ್ಟು ಹೊತ್ತು ತಿರುಗಾಟ ನಡೆಸಿತ್ತು. ಪ್ರಜ್ಞೆ ತಪ್ಪುವ ಮೊದಲು ಕಾಲುವೆಯ ಮಧ್ಯ ಭಾಗದಲ್ಲಿದ್ದ ರಕ್ಷಣಾ ಸಿಬ್ಬಂದಿ ಮೇಲೆ ಎರಗಿ ಕೋಪ ಪ್ರದರ್ಶಿಸಿತ್ತು.
ಸಿಬ್ಬಂದಿ ಸಹಾಯಕ್ಕಾಗಿ ಹಾಕಿದ್ದ ಹಗ್ಗವನ್ನು ಆನೆಯು ತಿನ್ನುವ ಪ್ರಯತ್ನವನ್ನು ನಡೆಸಿತ್ತು. ನಂತರ ಆನೆ ಬಾಯಿಯಿಂದ ಹಗ್ಗವನ್ನು ಬಿಡಸಲಾಯಿತು. ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಎರಡು ಡ್ರೋನ್ ಕ್ಯಾಮೆರಾಗಳಿಗೆ ಹಾನಿಯೂ ಆಗಿದೆ.ರಕ್ಷಣೆಗೆ 100ಕ್ಕೂ ಹೆಚ್ಚು ಮಂದಿ ಭಾಗಿ:
ಕಾರ್ಯಾಚರಣೆಯಲ್ಲಿ ಮಂಡ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ರಘು, ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭುಗೌಡ ಬಿರಾದರ್, ಮೈಸೂರು ಮೃಗಾಲಯ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧಿಕಾರಿ ಅನುಷಾ, ವನ್ಯಜೀವಿ ವೈದ್ಯಾಧಿಕಾರಿ ಡಾ.ರಮೇಶ್, ಡಾ.ಆದರ್ಶ್, ಮಂಡ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ.ಮಹದೇವಸ್ವಾಮಿ, ಮಳವಳ್ಳಿ ವಲಯ ಅರಣ್ಯಾಧಿಕಾರಿ ಗವಿಯಪ್ಪ, ಅರವಳಿಕೆ ತಜ್ಞರಾದ ರಂಜನ್, ಅಕ್ರಂ, ಚಿರತೆ ಕಾರ್ಯಪಡೆ ಮೈಸೂರು, ನಾಗರಹೊಳೆ ಹುಲಿಸಂರಕ್ಷಿತ ಪ್ರದೇಶ ಮತ್ತು ಮಡಿಕೇರಿ ವಿಭಾಗದ ತಜ್ಞ ಸಿಬ್ಬಂದಿ, ಹಲಗೂರು ಸಿಪಿಐ ಬಿ.ಎಸ್.ಶ್ರೀಧರ್ ಸೇರಿದಂತೆ 100ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.ಯಶಸ್ವಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
ತಹಸೀಲ್ದಾರ್ ಎಸ್.ವಿ.ಲೋಕೇಶ್ ಎಲ್ಲರ ಸಹಕಾರದಿಂದ ಆನೆಯನ್ನು ರಕ್ಷಣೆ ಮಾಡಲಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಆನೆ ಸುಕ್ಷರತೆಗೆ ಸೂಚಿಸಿದ್ದರು. ಹಿರಿಯ ಅಧಿಕಾರಿಗಳ ಸಲಹೆ ಹಾಗೂ ತಜ್ಞ ವೈದ್ಯರ ನೆರವಿನಿಂದ ಆನೆಯನ್ನು ರಕ್ಷಿಸುವ ಅತ್ಯಂತ ಸವಾಲಿನ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮಾಡಿದ್ದೇವೆ. ಆನೆಯು ಯಾವ ಭಾಗದಿಂದ ಬಂದಿದೆ ಎನ್ನುವುದು ತಿಳಿದಿಲ್ಲ. ಆಹಾರ ಅರಿಸಿ ಬಂದಿರುವ ಸಾಧ್ಯತೆ ಇದೆ. ಸುತ್ತಮುತ್ತಲಿನ ಗ್ರಾಮಗಳ ಜನರು ಮುಂದಿನ ದಿನಗಳಲ್ಲಿ ಎಚ್ಚರ ವಹಿಸಬೇಕು.- ಡಿ.ರಘು, ಉಪ ಸಂರಕ್ಷಣಾಧಿಕಾರಿಗಳುನಿರಂತರವಾಗಿ ನೀರಿನಲ್ಲಿ ಇದ್ದ ಕಾರಣ ಆನೆ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದಿದೆ. ಅದರ ಸೊಂಡಿಲಿನ ತುದಿ ಬಿಳಿ ಬಣ್ಣಕ್ಕೆ ತಿರುಗಿದೆ. ಅಲ್ಲದೇ, ಕಾಲಿಗೆ ಫಂಗಸ್ ಸೋಂಕು ತಗುಲಿರುವ ಸಾಧ್ಯತೆ ಇದೆ. ಆನೆಗೆ ಚಿಕಿತ್ಸೆ ನೀಡಿದ್ದು, ಯಾವುದೇ ತೊಂದರೆ ಇಲ್ಲ. ಒಂದು ತಿಂಗಳ ಕಾಲ ಡ್ರೋನ್ ಮೂಲಕ ಆನೆ ಆರೋಗ್ಯದ ಮೇಲೆ ನಿಗಾ ವಹಿಸಲಾಗುವುದು.
- ಡಾ.ರಮೇಶ್, ವೈದ್ಯರುನಾಲೆ ಗೇಟ್ ಮೂಲಕ ಆನೆಯನ್ನು ಹೊರತರಲು ಪ್ರಯತ್ನಿಸಿದೆವು. ನೀರು ಹೆಚ್ಚಿದ್ದ ಕಾರಣ ಆನೆಯೂ ಕೂಡ ನಿಯಂತ್ರಣಕ್ಕೆ ಸಿಕ್ಕಿರಲಿಲ್ಲ. ಕೊನೆಗೆ ಅರವಳಿಕೆ ಮದ್ದು ನೀಡಿ ಕಾರ್ಯಾಚರಣೆ ನಡೆಸಲಾಯಿತು.- ಡಿಸಿಎಫ್ ಪ್ರಭುಗೌಡ, ಮೈಸೂರು ವಿಭಾಗದ ವನ್ಯಜೀವಿ ವಲಯ