ಕೋರ್ಟ್ ಆದೇಶ: ಕಾವೇರಿ ನೀರಾವರಿ ನಿಗಮದ ಕಚೇರಿ ಪೀಠೋಪಕರಣ ಜಪ್ತಿ

KannadaprabhaNewsNetwork |  
Published : Nov 19, 2025, 12:30 AM IST
18ಕೆಎಂಎನ್ ಡಿ13,14 | Kannada Prabha

ಸಾರಾಂಶ

ಮದ್ದೂರು ತಾಲೂಕು ಹೆಬ್ಬೆರಳು ಗ್ರಾಮದ ರೈತ ಜವರೇಗೌಡರಿಗೆ ಸೇರಿದ 1.17 ಎಕರೆ ಜಮೀನನ್ನು ಮುತ್ತುರಾಯಕೆರೆ ಪೋಷಕ ನಾಲಾ ನಿರ್ಮಾಣಕ್ಕಾಗಿ ಕಾವೇರಿ ನೀರಾವರಿ ನಿಗಮ ವಶಪಡಿಸಿಕೊಂಡಿತ್ತು. ಸದರಿ ಜಮೀನಿಗೆ ಸಂಬಂಧಿಸಿದಂತೆ ರೈತನಿಗೆ ಸ್ವಲ್ಪ ಮಾತ್ರ ಪರಿಹಾರ ನೀಡಿದ್ದು, ಇನ್ನೂ 84,04,717 ರು.ಗಳ ಪರಿಹಾರ ನೀಡಬೇಕಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಾಲೆ ನಿರ್ಮಾಣಕ್ಕಾಗಿ ಜಮೀನು ಕಳೆದುಕೊಂಡಿದ್ದ ರೈತನಿಗೆ ಪರಿಹಾರ ನೀಡದೆ ನಿರ್ಲಕ್ಷ್ಯ ವಹಿಸಿದ್ದ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರರ ಕಚೇರಿಯಲ್ಲಿನ ವಸ್ತುಗಳ ಜಪ್ತಿಗೆ ನ್ಯಾಯಾಲಯ ಆದೇಶ ನೀಡಿದ ಹಿನ್ನೆಲೆಯಲ್ಲಿ ಪೀಠೋಪಕರಣ, ಕಂಪ್ಯೂಟರ್‌ಗಳನ್ನು ನ್ಯಾಯಾಲಯದ ಸಿಬ್ಬಂದಿ ಸಮ್ಮುಖದಲ್ಲಿ ಮಂಗಳವಾರ ಜಪ್ತಿ ಮಾಡಲಾಯಿತು.

ಮದ್ದೂರು ತಾಲೂಕು ಹೆಬ್ಬೆರಳು ಗ್ರಾಮದ ರೈತ ಜವರೇಗೌಡರಿಗೆ ಭೂ ಪರಿಹಾರ ನೀಡದ ಮಂಡ್ಯದ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರರ ಕಚೇರಿಯಲ್ಲಿದ್ದ ಪೀಠೋಪಕರಣ, ಕಂಪ್ಯೂಟರ್‌ಗಳನ್ನು ಜಪ್ತಿ ಮಾಡಲಾಯಿತು.

ಮದ್ದೂರು ತಾಲೂಕು ಹೆಬ್ಬೆರಳು ಗ್ರಾಮದ ರೈತ ಜವರೇಗೌಡರಿಗೆ ಸೇರಿದ 1.17 ಎಕರೆ ಜಮೀನನ್ನು ಮುತ್ತುರಾಯಕೆರೆ ಪೋಷಕ ನಾಲಾ ನಿರ್ಮಾಣಕ್ಕಾಗಿ ಕಾವೇರಿ ನೀರಾವರಿ ನಿಗಮ ವಶಪಡಿಸಿಕೊಂಡಿತ್ತು. ಸದರಿ ಜಮೀನಿಗೆ ಸಂಬಂಧಿಸಿದಂತೆ ರೈತನಿಗೆ ಸ್ವಲ್ಪ ಮಾತ್ರ ಪರಿಹಾರ ನೀಡಿದ್ದು, ಇನ್ನೂ 84,04,717 ರು.ಗಳ ಪರಿಹಾರ ನೀಡಬೇಕಿದೆ.

ಪರಿಹಾರಕ್ಕಾಗಿ ರೈತ ಜವರೇಗೌಡ ಸಾಕಷ್ಟು ಬಾರಿ ಕಚೇರಿಯಿಂದ ಕಚೇರಿಗೆ ಅಲೆದಿದ್ದರೂ ಪರಿಹಾರ ನೀಡದೆ ಅಧಿಕಾರಿಗಳು ಬೇಜವಾಬ್ದಾರಿತನದಿಂದ ವರ್ತಿಸಿದ್ದರು. ಇದರಿಂದ ಬೇಸತ್ತ ಜವರೇಗೌಡ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಅಪರ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ರೈತನಿಗೆ 84,04,717 ರು. ಪರಿಹಾರ ನೀಡುವಂತೆ ಕಾವೇರಿ ನೀರಾವರಿ ನಿಗಮಕ್ಕೆ 2022ರಲ್ಲೇ ಸೂಚಿಸಿತ್ತು.

ನ್ಯಾಯಾಲಯ ಆದೇಶ ನೀಡಿದ್ದರೂ ಸಹ ಅಧಿಕಾರಿಗಳು ರೈತನಿಗೆ ಪರಿಹಾರ ನೀಡದೆ ನಿರ್ಲಕ್ಷ್ಯ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಮತ್ತೆ ನ್ಯಾಯಾಲಯಕ್ಕೆ ರೈತ ಜವರೇಗೌಡ ಮೇಲ್ಮನವಿ ಸಲ್ಲಿಸಿದ ಕಾರಣ ನ್ಯಾಯಾಲಯ ಕಚೇರಿ ಜಪ್ತಿಗೆ ಆದೇಶ ನೀಡಿತ್ತು.

ಅದರಂತೆ ಇಂದು ಮಂಗಳವಾರ ನ್ಯಾಯಾಲಯದ ಸಿಬ್ಬಂದಿಯೊಂದಿಗೆ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರರ ಕಚೇರಿಗೆ ಆಗಮಿಸಿದ ರೈತ ಜವರೇಗೌಡ ಮತ್ತು ಆತನ ಪರ ವಕೀಲರು ಕಚೇರಿಯಲ್ಲಿನ ಪೀಠೋಪಕರಣ, ಕಂಪ್ಯೂಟರ್, ಜೆರಾಕ್ಸ್ ಯಂತ್ರ ಸೇರಿದಂತೆ ಇತರೆ ಸಾಮಗ್ರಿ ಜಪ್ತಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ನ್ಯಾಯಾಲಯ ನೀಡಿರುವ ಆದೇಶದಂತೆ ನಾಲ್ಕನೇ ಜಪ್ತಿ ಪ್ರಕರಣವಾಗಿದೆ. ಆದರೂ ಅಧಿಕಾರಿಗಳ ನಿರ್ಲಕ್ಷ್ಯ ಮಾತ್ರ ಮುಂದುವರಿದಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV

Recommended Stories

ಸಹಕಾರ ಸಂಘಗಳಿಂದ ಮಾತ್ರ ರೈತರ ಆರ್ಥಿಕ ಸದೃಢತೆ ಸಾಧ್ಯ: ಶಾಸಕ ಕೆ.ಎಂ.ಉದಯ್
ಸಮಾಜದಲ್ಲಿ ಪೌರಕಾರ್ಮಿಕರ ಸೇವೆ ಅನನ್ಯವಾದುದು: ಜೆ.ಸಿ ಗೀತಾರಾಜಕುಮಾರ್