ಗಾನಲೀನವಾದ ಬಡಗಿನ ಮೇರು ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

KannadaprabhaNewsNetwork |  
Published : Apr 26, 2024, 12:56 AM IST
ಭಾಗವತ25 | Kannada Prabha

ಸಾರಾಂಶ

ಬಡಗುತಿಟ್ಟಿನ ಪ್ರಸಿದ್ಧ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ (68) ಗುರುವಾರ ಬೆಂಗಳೂರಿನಲ್ಲಿ ನಿಧನರಾದರು. ಅವರು ಸುಮಾರು ನಾಲ್ಕುವರೆ ದಶಕಗಳ ಕಾಲ ಕಲಾ ಸೇವೆಗೈದಿದ್ದರು.

ಕನ್ನಡಪ್ರಭ ವಾರ್ತೆ ಉಡುಪಿ

ಬಡಗುತಿಟ್ಟಿನ ಪ್ರಸಿದ್ಧ ಭಾಗವತ, ರಾಜ್ಯ ಪ್ರಶಸ್ತಿ ಪುರಸ್ಕೃತ ಸುಬ್ರಹ್ಮಣ್ಯ ಧಾರೇಶ್ವರ (68) ಗುರುವಾರ ಮುಂಜಾನೆ ಬೆಂಗಳೂರಿನಲ್ಲಿ ನಿಧನರಾದರು. ಅವರು ಪತ್ನಿ, ಪುತ್ರ, ಪುತ್ರಿ ಹಾಗು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಉಡುಪಿ ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ಎಂ.ನಾರ್ಣಪ್ಪ ಉಪ್ಪೂರರ ಶಿಷ್ಯರಾಗಿ ಅವರು, ಕಾಳಿಂಗ ನಾವಡರ ಒಡನಾಡಿಯಾಗಿ ರಂಗ ಪ್ರವೇಶಿಸಿ, ವಿವಿಧ ಮೇಳಗಳಲ್ಲಿ ಮುಖ್ಯವಾಗಿ ಪೆರ್ಡೂರು ಮೇಳದ ಪ್ರಧಾನ ಭಾಗವತರಾಗಿ ಒಟ್ಟು ಸುಮಾರು ನಾಲ್ಕುವರೆ ದಶಕಗಳ ಕಲಾ ಸೇವೆಗೈದಿದ್ದರು.

ತಮ್ಮ ಸುಮಧುರ ಕಂಠ, ಪರಂಪರೆಯ ಶೈಲಿ, ರಂಗ ತಂತ್ರದಿಂದ ಹಲವು ಪೌರಾಣಿಕ ಮತ್ತು ಹೊಸ ಪ್ರಸಂಗಗಳಿಗೆ ಜೀವ ತುಂಬಿದ್ದರು. ಯಕ್ಷಗಾನ ಕಲಾರಂಗ ‌ಅವರಿಗೆ ನಾರ್ಣಪ್ಪ ಉಪ್ಪೂರರ ಪ್ರಶಸ್ತಿ ನೀಡಿ ಗೌರವಿಸಿತ್ತು. ಅವರು ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು.

ಅವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಗಾಢ ಸಂತಾಪ ವ್ಯಕ್ತ ಪಡಿಸಿದ್ದಾರೆ.

ತಲ್ಲೂರು ಸಂತಾಪ: ಕರ್ನಾಟಕ ಯಕ್ಷಗಾನ ಅಕಾಡೆಮಿಯ ನೂತನ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಧಾರೇಶ್ವರರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ. ಯಕ್ಷಗಾನ ರಂಗದಲ್ಲಿ ಹೊಸ ಪ್ರಯೋಗಗಳ ಮೂಲಕ ಯಕ್ಷ ಪ್ರೇಮಿಗಳ ಮನದಂಗಳದಲ್ಲಿ ರಾರಾಜಿಸಿದ್ದ ಧಾರೇಶ್ವರ ಅವರು, ಕಾಳಿಂಗ ನಾವಡರ ಅಗಲುವಿಕೆಯ ಬಳಿಕ‌ ಉಂಟಾಗಿದ್ದ ನಿರ್ವಾತವನ್ನು ತುಂಬಬಲ್ಲರು ಎನ್ನುವಷ್ಟರ ಮಟ್ಟಿಗೆ ಬೆಳೆದಿರುವುದು ಇತಿಹಾಸ. ಇಂತಹ ಭಾಗವತ ಶ್ರೇಷ್ಠ ಸುಬ್ರಹ್ಮಣ್ಯ ಧಾರೇಶ್ವರ ಅವರೊಂದಿಗೆ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಧಾರೇಶ್ವರ ಯಕ್ಷ ಅಷ್ಟಾಹವನ್ನು ಒಂದು ದಶಕಗಳ ಕಾಲ ನಡೆಸಿದ ಸಂತೃಪ್ತಿ ಇದೆ ಎಂದವರು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ