ಕಠಿಣ ತಪಸ್ಸಿನಿಂದ ಗಂಗೆ ಭೂಮಿಗೆ ತಂದ ಭಗೀರಥರು

KannadaprabhaNewsNetwork | Published : May 11, 2025 11:46 PM
Follow Us

ಸಾರಾಂಶ

ಸಂವಿಧಾನದ ಮೂಲ ಪ್ರತಿಯಲ್ಲಿ ಭಗೀರಥರ ಭಾವಚಿತ್ರವಿದೆ. ಅವರ ಬಗ್ಗೆ ತಿಳಿದುಕೊಂಡು ಅವರು ತೋರಿಸಿದ ದಾರಿಯಲ್ಲಿ ಸಮಾಜದ‌ ಜನರು ನಡೆಯಬೇಕು

ಕನ್ನಡಪ್ರಭ ವಾರ್ತೆ ಬೆಳಗಾವಿ

ಶ್ರೀ ಭಗೀರಥರ ಮಹರ್ಷಿಗಳು ಕಠಿಣ ತಪಸ್ಸಿನಿಂದ ಶಿವನನನ್ನು ಒಲಿಸಿಕೊಂಡು ಗಂಗೆಯನ್ನು ಭೂಮಿಗೆ ತಂದು ಸಕಲ ಜೀವಿಗಳಿಗೆ ಬದುಕಲು ಸಹಾಯ ಮಾಡಿದವರು. ಹಠದಿಂದ ಅಸಾಧ್ಯವಾದುದನ್ನೂ ಸಾಧಿಸುವುದು ಭಗೀರಥರ ಸಾಧನೆ ಎಂದು ನ್ಯಾಯವಾದಿ ಮಲ್ಲಿಕಾರ್ಜುನ ಚೌಕಾಶಿ ತಿಳಿಸಿದರು.

ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾ ಮಂದಿರಲ್ಲಿ ನಡೆದ ಶ್ರೀ ಭಗೀರಥ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನ್ನಡಿಯಲ್ಲಿ ಚಂದ್ರ ಬಿಂದುವನ್ನ ನೋಡುತ್ತಾ ಚಂದ್ರನನ್ನು ವರ್ಣನೆ ಮಾಡಿದ ಹಾಗೇ ಭಗೀರಥರನ್ನು ಬಣ್ಣಿಸಬಹುದು. ಭಗೀರಥರ ಕುರಿತು ಹೊರ ದೇಶದವರಿಗೆ ಸಹ ಅರಿವಿದೆ. ಸಂವಿಧಾನದ ಮೂಲ ಪ್ರತಿಯಲ್ಲಿ ಭಗೀರಥರ ಭಾವಚಿತ್ರವಿದೆ. ಅವರ ಬಗ್ಗೆ ತಿಳಿದುಕೊಂಡು ಅವರು ತೋರಿಸಿದ ದಾರಿಯಲ್ಲಿ ಸಮಾಜದ‌ ಜನರು ನಡೆಯಬೇಕು ಎಂದು ಹೇಳಿದರು.

ಉಪ್ಪಾ ವೀರರೆ ಉಪ್ಪಾರರು, ಉಪ್ಪಿನ ವ್ಯಾಪಾರದ ಜೊತೆಗೆ ಬ್ರಿಟಿಷರ ಚಲನ-ವಲನಗಳ ಬಗ್ಗೆ ಮಾಹಿತಿ ತಿಳಿಸಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇರುವಂತಹ ಸ್ವಾತಂತ್ರ್ಯ ಹೋರಾಟಗಾರರಿಗೆ ಸಹಾಯ ಮಾಡಿದಂತ ಸಮಾಜ ನಮ್ಮದು, ದೇಶಕ್ಕೆ ಭಗೀರಥರ ಸಮಾಜದ ಕೊಡುಗೆ ಅಪಾರವಿದೆ ಎಂದು ಚೌಕಾಶಿ ತಿಳಿಸಿದರು.

ಈ ಸಂದರ್ಭದಲ್ಲಿ ಮಧುರೆ ಭಗೀರಥ ಮಹರ್ಷಿ ಗುರುಪೀಠದ ಶ್ರೀ ಪುರುಷೋತ್ತಮಾನಂದ ಪುರಿ ಮಹಾಸ್ವಾಮೀಜಿ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ, ಮಾರ್ಕೆಟ್ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರಾದ ಮಹಾಂತೇಶ ದ್ಯಾಮಣ್ಣವರ, ಸಮಾಜದ ಮುಖಂಡರಾದ ರವಿ ಉಪ್ಪಾರ, ಬಸವರಾಜ ಆಯಟ್ಟಿ, ಕುಶಾಲ ಗುಡೆನ್ನವರ, ಶಿವಪುತ್ರಪ್ಪ ಜಕಬಾಳ, ಜಿ.ಎಸ್.ಉಪ್ಪಾರ, ಉದಯ ಇಡಗಲ, ಅರ್ಜುನ ನಾಯಿಕವಾಡಿ ಹಾಗೂ ಮತ್ತಿತರು ಉಪಸ್ಥಿತರಿದ್ದರು.

ಮೆರವಣಿಗೆಗೆ ಚಾಲನೆ:

ಕಾರ್ಯಕ್ರಮಕ್ಕೂ ಮುಂಚೆ ಸಂಸದ ಜಗದೀಶ್ ಶೆಟ್ಟರ್ ಅವರು ನಗರದ ಕೋಟೆ ಕೆರೆ ಆವರಣದಲ್ಲಿ ಶ್ರೀ ಭಗೀರಥರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಕೋಟೆ ಕೆರೆ ಆವರಣದಿಂದ ಪ್ರಾರಂಭವಾದ ಮೆರವಣಿಗೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಮಾರ್ಗವಾಗಿ ಕುಮಾರ ಗಂಧರ್ವ ಕಲಾ ಮಂದಿರದವರೆಗೆ ತಲುಪಿತು. ಮೆರವಣಿಗೆಯಲ್ಲಿ ಕುಂಭಮೇಳ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಪಾಲ್ಗೊಂಡಿದ್ದವು. ಈ ವೇಳೆ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ, ಉಪಮಹಾಪೌರರಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸೇರಿದಂತೆ ಸಮಾಜದ ಮುಖಂಡರು ಹಾಜರಿದ್ದರು.