ಭಗವಾನ್ ಬಿರ್ಸಾ ಮುಂಡಾ ನಮ್ಮೆಲ್ಲರಿಗೆ ಮಾದರಿ: ಸಂಸದ ಬಿ.ವೈ.ರಾಘವೇಂದ್ರ

KannadaprabhaNewsNetwork |  
Published : Nov 17, 2025, 03:15 AM IST
ಪೋಟೋ: 15ಎಸ್‌ಎಂಜಿಕೆಪಿ05ಶಿವಮೊಗ್ಗ ನಗರದ ಕಂಟ್ರೀ ಕ್ಲಬ್ ರಸ್ತೆಯಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಶಿವಮೊಗ್ಗ ಇರ ಸಹಯೋಗದಲ್ಲಿ ಏರ್ಪಡಿಸಿದ್ದ ಭಗವಾನ್ ಶ್ರೀ ಬಿರ್ಸಾ ಮುಂಡಾ ಅವರ 150 ನೇ ಜಯಂತಿ ಹಾಗೂ ಜನ ಜಾತೀಯ ಗೌರವ ದಿವಸ ಆಚರಣೆ 2025 ಅನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು. | Kannada Prabha

ಸಾರಾಂಶ

ತನ್ನ ಆದಿವಾಸಿ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಚಿಕ್ಕವಯಸ್ಸಿನಲ್ಲೇ ಹೋರಾಟದ ಕಿಚ್ಚು ಹತ್ತಿಸಿದ ಬಿರ್ಸಾ ಮುಂಡಾರವರು ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ತನ್ನ ಆದಿವಾಸಿ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಚಿಕ್ಕವಯಸ್ಸಿನಲ್ಲೇ ಹೋರಾಟದ ಕಿಚ್ಚು ಹತ್ತಿಸಿದ ಬಿರ್ಸಾ ಮುಂಡಾರವರು ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ನಗರದ ಕಂಟ್ರೀ ಕ್ಲಬ್ ರಸ್ತೆಯಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಶಿವಮೊಗ್ಗ ಜಂಟಿಯಾಗಿ ಏರ್ಪಡಿಸಿದ್ದ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜಯಂತಿ ಹಾಗೂ ಜನಜಾತಿಯ ಗೌರವ ದಿವಸ ಆಚರಣೆ 2025 ಅನ್ನು ಉದ್ಘಾಟಿಸಿ ಮಾತನಾಡಿ, ಅತಿ ಚಿಕ್ಕ ವಯಸ್ಸಿನಲ್ಲೇ ತಮ್ಮ ಸಮುದಾಯದ ಏಳ್ಗೆಗಾಗಿ ಶ್ರಮಿಸಿದ ಹಾಗೂ ಬ್ರಿಟಿಷರ ವಿರುದ್ದ ಸಿಡಿದೆದ್ದ ಬಿರ್ಸಾ ಮುಂಡಾ ಸಮುದಾಯದ ಪಾಲಿಗೆ ದೇವರಾಗಿದ್ದರು ಎಂದರು.

ನೀರು, ಭೂಮಿ, ಅರಣ್ಯ ಬುಡಕಟ್ಟು ಜನರ ಹಕ್ಕು ಎನ್ನುವ ರೀತಿಯಲ್ಲಿ ಹೋರಾಡಿದ್ದರು. ಆಧ್ಯಾತ್ಮಿಕತೆಗೆ ಶಕ್ತಿ ತುಂಬಿದ್ದ ಇವರನ್ನು ದೇವರಂತೆ ಕಾಣುತ್ತಿದ್ದರು. ಇಂತಹ ಆದಿವಾಸಿ ಸಮುದಾಯಗಳ ಸರ್ವಾಂಗೀಣ ಅಭಿವೃದ್ದಿಗಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ರಾಜ್ಯದಲ್ಲಿ ಆದಿವಾಸಿ ಸಮುದಾಯವಿರುವ ಪ್ರದೇಶಗಳಲ್ಲಿ 1000 ಹೋಂ ಸ್ಟೇ ನಿರ್ಮಿಸಲು ನಿರ್ಧರಿಸಿದ್ದು ಪ್ರತಿ ಹೋಂ ಸ್ಟೇ ನಿರ್ಮಾಣಕ್ಕೆ 5 ಲಕ್ಷ ರು. ಅನುದಾನ ನೀಡಲಾಗುವುದು. ಬುಡಕಟ್ಟು ಗುಂಪುಗಳ ಸಮಗ್ರ ಅಭಿವೃದ್ಧಿ ಮತ್ತು ಸಬಲೀಕರಣಕ್ಕಾಗಿ ಆದಿವಾಸಿ ಕಲ್ಯಾಣ ಬಜೆಟ್‌ನ್ನು ಜಾರಿಗೆ ತಂದಿದೆ ಎಂದರು.

ಆದಿವಾಸಿ ಭವನಗಳನ್ನು ನಿರ್ಮಿಸಲು 50 ರು. ನೀಡಲಾಗುತ್ತಿದೆ. ಅರಣ್ಯ ಹಕ್ಕು ಕಾಯ್ದೆ, ಸಣ್ಣ ಅರಣ್ಯ ಮತ್ತು ಉತ್ಪಾದನೆಗೆ ಆದ್ಯತೆ ನೀಡಲಾಗುತ್ತಿದೆ, ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಪೂರಕ ಆಹಾರ ಯೋಜನೆ, ಆದಿವಾಸಿ ಮಕ್ಕಳಿಗೆ ಶಿಕ್ಷಣ, ಮೂಲಭೂತ ಸೌಕರ್ಯಗಳು ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ ಎಂದರು.

ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಾ.ಶುಭಾ ಮರವಂತೆ ವಿಶೇಷ ಉಪನ್ಯಾಸ ನೀಡಿ, ಬಿರ್ಸಾ ಮುಂಡಾರಂತಹ ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿಯಲು ನಾವು ಚರಿತ್ರೆ ಓದಬೇಕು. ಕೇವಲ 25 ವರ್ಷ ಬದುಕಿದ್ದ ಅವರು ಜಾರ್ಕಂಡ್ ರಾಜ್ಯದ ಮುಂಡಾ ಪ್ರದೇಶದ ಬುಡಕಟ್ಟು ಸಮುದಾಯಕ್ಕೆ ಸೇರಿದ ಬಿರ್ಸಾ ಮುಂಡಾರವರು ಅತಿ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಸಮುದಾಯವನ್ನು ರಕ್ಷಿಸಲು ಹೋರಾಟದ ಕಿಚ್ಚನ್ನು ಹಚ್ಚುತ್ತಾರೆ ಎಂದರು.

ಜನಜಾತಿಯ ದಿನಾಚರಣೆ ಅಂಗವಾಗಿ ಆದಿವಾಸಿ ಬುಡಕಟ್ಟು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಸ್ಪರ್ಧಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಬಹುಮಾನ ನೀಡಿ ಅಭಿನಂದಿಸಲಾಯಿತು.

ದಿಶಾ ಸಮಿತಿಯ ನಿರ್ದೇಶಕ ಗಿರೀಶ್ ಭದ್ರಾಪುರ, ವಾಲ್ಮೀಕಿ ಸಮಾಜದ ಮುಖಂಡರು, ಜಿಪಂ ಸಿಇಒ ಹೇಮಂತ್ ಎನ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶ್ರೀನಿವಾಸ, ಅಧಿಕಾರಿಗಳು, ಸಿಬ್ಬಂದಿ, ವಿವಿಧ ಸಂಘಟನೆಗಳ ಮುಖಂಡರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

PREV

Recommended Stories

ಭಾರತದಲ್ಲಿ ಮಾತ್ರ ಕುಟುಂಬ ವ್ಯವಸ್ಥೆ
ಸಹಕಾರ ಕ್ಷೇತ್ರದಲ್ಲಿ ಜಿಲ್ಲೆ ಬಲಿಷ್ಠವಾಗಿ ಬೆಳೆಯಲಿ