ಕನ್ನಡಪ್ರಭ ವಾರ್ತೆ ಹನೂರು
ಹನೂರು ತಾಲೂಕಿನ ಮಣಗಳ್ಳಿ ಗ್ರಾಪಂ ವ್ಯಾಪ್ತಿಯ ಬೈರನತ್ತ ಗ್ರಾಮದ ಪರಿಶಿಷ್ಟ ಪಂಗಡದ ಸಮುದಾಯ ವಾಸಿಸುವ 250 ರಿಂದ 300 ಮನೆ ಇದ್ದು, 1000 ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ. ಗ್ರಾಮಸ್ಥರು ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀರಿಗಾಗಿ ನೀರೆಯರ ಪರಿಪಾಠಲು:ಬೈರನತ್ತ ಗ್ರಾಮದಲ್ಲಿ ಒಂದು ತಿಂಗಳಿನಿಂದ ನೀರಿನ ಸಮಸ್ಯೆ ತಲೆದೂರಿರುವ ಹಿನ್ನೆಲೆಯಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳಿಗೆ ನೀರಿನ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದರೂ ಸಹ ಸ್ಪಂದಿಸದೆ ನಿರ್ಲಕ್ಷ ವಹಿಸಿರುವುದರಿಂದ ಮಹಾ ಶಿವರಾತ್ರಿ ಹಬ್ಬದ ದಿನ ಗ್ರಾಮದಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡು ನೀರಿಗಾಗಿ ನೀರೆಯರು ತೊಂಬೆಗಳ ಮುಂದೆ ಗಂಟೆಗಟ್ಟಲೆ ಪರದಾಡುವಂಥ ಪರಿಸ್ಥಿತಿ ಉಂಟಾಗಿದೆ.
ಮನಗಳ್ಳಿ ಗ್ರಾಪಂ ವ್ಯಾಪ್ತಿಯ ಬೈರನತ್ತ ಗ್ರಾಮದ ಸಮುದಾಯಗಳು ವಾಸಿಸುತ್ತಿರುವ ಕಾಲೋನಿಯಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಹಲವಾರು ಬಾರಿ ತಾಪಂ ಇಒ ಉಮೇಶ್ ಅವರಿಗೆ ಮನವಿ ಸಲ್ಲಿಸಿದರೂ ಸೂಕ್ತ ಸ್ಪಂದನೆ ಇಲ್ಲ. ಕಳೆದ ಎರಡು ದಿನಗಳಿಂದ ಶಾಸಕ ಎಂ.ಆರ್.ಮಂಜುನಾಥ್ ಸಹ ಪಟ್ಟಣದಲ್ಲಿ ಸಭೆ ನಡೆಸಿ ನೀರಿನ ಸಮಸ್ಯೆಗಳು ಇರುವ ಕಡೆ ಪರಿಹರಿಸುವಂತೆ ತಿಳಿಸಿದ್ದರೂ ಮಹಾ ಶಿವರಾತ್ರಿ ಹಬ್ಬದ ದಿನ ಗ್ರಾಮದಲ್ಲಿ ನೀರಿನ ಸಮಸ್ಯೆ ಉಂಟಾಗಿ ಗ್ರಾಮಸ್ಥರು ಪರದಾಡುವಂತಾಗಿದೆ. ಜಿಲ್ಲಾಡಳಿತ ಇತ್ತ ಗಮನ ಹರಿಸಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ತಾಪಂ ಇಒ ಕಚೇರಿ ಮುಂಭಾಗ ಗ್ರಾಮಸ್ಥರ ಜೊತೆಗೂಡಿ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ.
ಬೈರನತ್ತ ಗ್ರಾಮದಲ್ಲಿ ಅಂತರ್ಜಲ ಕುಸಿತದಿಂದ ಸಮರ್ಪಕವಾಗಿ ನೀರು ಹರಿಸಲು ಸಮಸ್ಯೆ ಉಂಟಾಗಿದೆ. ಗ್ರಾಮಕ್ಕೆ ಭೇಟಿ ನೀಡಿದ್ದು ಇರುವ ನೀರನ್ನು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೂ ಸಮಸ್ಯೆಯನ್ನು ತಿಳಿಸಲಾಗಿತ್ತು. ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.