ಅಗ್ರಹಾರ ಬೆಳಗುಲಿ ಕೆರೆ ತುಂಬಿಸುವ ಯೋಜನೆಗೆ ಭೈರಪ್ಪ ಹೆಸರು

KannadaprabhaNewsNetwork | Published : Oct 25, 2024 12:55 AM

ಸಾರಾಂಶ

ಚನ್ನರಾಯಪಟ್ಟಣ ತಾಲೂಕಿನ ಸಂತೇಶಿವರ ಅಗ್ರಹಾರ ಬೆಳಗುಲಿ ಕೆರೆ ತುಂಬಿಸುವ ಯೋಜನೆ ಸಾಕಾರಗೊಳ್ಳಲು ಸಾಹಿತಿ ಡಾ.ಎಸ್ ಎಲ್ ಭೈರಪ್ಪ ನವರ ಪರಿಶ್ರಮವಿದ್ದು, ಈ ಯೋಜನೆಗೆ ಸಾಹಿತಿ ಡಾ ಎಸ್.ಎಲ್. ಭೈರಪ್ಪ ಯೋಜನೆಯೆಂದು ಹೆಸರಡಲಾಗುತ್ತದೆ ಎಂದು ಶಾಸಕ ಸಿ. ಎನ್ ಬಾಲಕೃಷ್ಣ ತಿಳಿಸಿದರು. ತಾಲೂಕಿನ ಬಾಗೂರು ಹೋಬಳಿಯ ಕಾರೇಹಳ್ಳಿ ಸಮೀಪ ನಡೆಯುತ್ತಿರುವ ಯೋಜನೆಯ ಪೈಪ್‌ಲೈನ್ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕಿನ ಸಂತೇಶಿವರ ಅಗ್ರಹಾರ ಬೆಳಗುಲಿ ಕೆರೆ ತುಂಬಿಸುವ ಯೋಜನೆ ಸಾಕಾರಗೊಳ್ಳಲು ಸಾಹಿತಿ ಡಾ.ಎಸ್ ಎಲ್ ಭೈರಪ್ಪ ನವರ ಪರಿಶ್ರಮವಿದ್ದು, ಈ ಯೋಜನೆಗೆ ಸಾಹಿತಿ ಡಾ ಎಸ್.ಎಲ್. ಭೈರಪ್ಪ ಯೋಜನೆಯೆಂದು ಹೆಸರಡಲಾಗುತ್ತದೆ ಎಂದು ಶಾಸಕ ಸಿ. ಎನ್ ಬಾಲಕೃಷ್ಣ ತಿಳಿಸಿದರು.

ತಾಲೂಕಿನ ಬಾಗೂರು ಹೋಬಳಿಯ ಕಾರೇಹಳ್ಳಿ ಸಮೀಪ ನಡೆಯುತ್ತಿರುವ ಯೋಜನೆಯ ಪೈಪ್‌ಲೈನ್ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದರು.

ತಮ್ಮ ಹುಟ್ಟೂರಿನ ರೈತರಿಗೆ ಭವಿಷ್ಯದಲ್ಲಿ ಅನುಕೂಲವಾಗಲೆಂದು ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿ ಸಂತೇಶಿವರ ಅಗ್ರಹಾರ ಬೆಳಗುಲಿ ಕೆರೆ ತುಂಬಿಸುವ ಯೋಜನೆ ೨೫ ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದರು. ಈ ಯೋಜನೆಗೆ ಆರಂಭದಿಂದಲೂ ಕ್ಷೇತ್ರದ ಶಾಸಕನಾಗಿ ಹೆಚ್ಚಿನ ಸಹಕಾರ ನೀಡುತ್ತಾ ಬಂದಿದ್ದೇನೆ.ಕಾರೇಹಳ್ಳಿ ಸಮೀಪ ರಂಗಸ್ವಾಮಿ ಎಂಬುವರಿಗೆ ಸೇರಿದ ಜಮೀನಿನಲ್ಲಿ ಪೈಪ್‌ಲೈನ್ ಅಳವಡಿಕೆಗೆ ಅವಕಾಶ ಕಲ್ಪಿಸಿರಲಿಲ್ಲ. ತಾವು ಈ ಬಗ್ಗೆ ಸೋಮವಾರ ಖುದ್ದಾಗಿ ಭೇಟಿ ಮಾಡಿ ಕಂದಾಯ ಇಲಾಖೆ ವತಿಯಿಂದ ತಮಗೆ ಎಲ್ಲಾ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದೆ. ಈ ಬಗ್ಗೆ ಅವರು ಪೈಪ್‌ಲೈನ್ ಅಳವಡಿಕೆಗೆ ಸಮ್ಮತಿಸಿ ಸಹಕಾರ ನೀಡಿದ್ದಾರೆ. ಶನಿವಾರದ ಒಳಗೆ ಪ್ರಾಯೋಗಿಕವಾಗಿ ಚಾಲನೆ ನೀಡಿ ನಂತರ ಉದ್ಘಾಟನೆ ದಿನಾಂಕವನ್ನು ನಿಗದಿ ಮಾಡಲಾಗುತ್ತದೆ ಎಂದರು.

ನವಿಲೆ ಏತ ನೀರಾವರಿ ಯೋಜನೆಯ ಮೂಲಕ ಈಗಾಗಲೇ ಎಡ ಮತ್ತು ಬಲಭಾಗದ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ನವಿಲೆ ಕೆರೆ ಸದ್ಯದಲ್ಲೇ ಕೊಡಿ ಬೀಳಲಿದೆ. ಈ ಯೋಜನೆಯ ಮೂಲಕವೂ ಸಂತೇಶಿವರ ಅಗ್ರಹಾರ ಬೆಳಗುಲಿ ಕೆರೆಗಳಿಗೆ ನಿರು ಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ.

ಸಂತೇಶಿವರ ಅಗ್ರಹಾರ ಬೆಳಗುಲಿ ಕೆರೆ ತುಂಬಿಸುವ ಯೋಜನೆಗೆ ತಿಪಟೂರು ತಾಲೂಕು ವ್ಯಾಪ್ತಿಯ ಜಾಬ್ ಘಟ್ಟ ಬಗ್ಗೆ ಜಾಕ್‌ವೆಲ್ ನಿರ್ಮಾಣಕ್ಕೆ ಆ ಭಾಗದ ರೈತರದ ದಿನೇಶ್ ಮತ್ತು ಅನೇಕ ರೈತರು ಹೆಚ್ಚಿನ ಸಹಕಾರ ನೀಡಿದರು. ಈ ಯೋಜನೆ ಪ್ರಾರಂಭದಲ್ಲಿ ಬೇರೆ ಮಾರ್ಗದಲ್ಲಿ ರೈತರ ಜಮೀನಿನಲ್ಲಿ ಪೈಪ್‌ಲೈನ್ ಅಳವಡಿಕೆ ಮಾಡಿ ನೀರು ತರುವ ಉದ್ದೇಶವಿತ್ತು. ಆದರೆ ರೈತರು ವಿರೋಧ ವ್ಯಕ್ತಪಡಿಸುವ ಅನುಮಾನದಲ್ಲಿ ಈ ಯೋಜನೆಯನ್ನು ರಸ್ತೆಯ ಪಕ್ಕದಲ್ಲಿ ತೆಗೆದುಕೊಂಡು ಹೋಗಲಾಯಿತು. ಇಲ್ಲದಿದ್ದರೆ ಯೋಜನೆ ಇಷ್ಟು ಬೇಗ ಪೂರ್ಣಗೊಳ್ಳುತ್ತಿರಲಿಲ್ಲ ಎಂದರು. ಚನ್ನರಾಯಪಟ್ಟಣ ವಿಭಾಗದ ಕಾವೇರಿ ನೀರಾವರಿ ವಿಭಾಗದ ಅಧಿಕಾರಿಗಳು, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಂದಾಯ ಇಲಾಖೆ ಸಹಕಾರದಿಂದ ಸ್ಥಗಿತಗೊಂಡಿದ್ದ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡಿದೆ. ಈ ಭಾಗದ ರೈತರ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ನವಿಲೆ ಪರಮೇಶ್ ಮಾತನಾಡಿ, ಸಂತೇಶಿವರ ಹಾಗೂ ಅಗ್ರಹಾರ ಬೆಳಗುಲಿ ಕೆರೆ ತುಂಬಿಸುವ ಯೋಜನೆ ಸಾಹಿತಿ ಡಾ.ಎಸ್ ಎಲ್ ಭೈರಪ್ಪನವರ ಕನಸಿನ ಯೋಜನೆಯಾಗಿದ್ದು, ಈ ಭಾಗದ ಕೆರೆಗಳಿಗೆ ನೀರು ಹರಿಸುವ ಸಲುವಾಗಿ ಹೆಚ್ಚಿನ ಪರಿಶ್ರಮಪಟ್ಟು ಅನುದಾನ ತಂದಿದ್ದರು, ಅವರ ಕನಸಿನ ಯೋಜನೆ ಸಹಕಾರಗೊಳ್ಳಲು ಕ್ಷೇತ್ರದ ಶಾಸಕರಾದ ಸಿ ಎನ್ ಬಾಲಕೃಷ್ಣರವರು ಹೆಚ್ಚಿನ ಮುತುವರ್ಜಿ ವಹಿಸಿ ಯೋಜನೆ ಪೂರ್ಣಗೊಳ್ಳಲು ಶ್ರಮ ವಹಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಎ.ಆರ್‌ ದೀಪಕ್, ಸಹಾಯಕ ಎಂಜಿನಿಯರ್‌ ಪುನೀತ್, ನುಗ್ಗೇಹಳ್ಳಿ ಪೊಲೀಸ್ ಠಾಣೆ ಪಿಎಸ್‌ಐ ಭರತ್ ರೆಡ್ಡಿ, ಕಾರೇಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ ಎ ಸತೀಶ್, ಕೃಷಿ ಪತ್ತಿನ ಅಧ್ಯಕ್ಷ ಸಿಡಿ ರೇವಣ್ಣ, ಮುಖಂಡರಾದ ಕೆ ಟಿ ನಟೇಶ್, ತೋಟಿ ನಾಗರಾಜ್, ಬಸವೇಗೌಡ, ಉದ್ಯಮಿ ಚಿಪ್ಪಿನ ಚಂದ್ರು, ಅಣತಿ ವೆಂಕಟೇಶ್, ಗಂಜಿಗೆರೆ ಕೆಂಪೇಗೌಡ, ಕುಳ್ಳೇಗೌಡ, ಲೋಕೇಶ್, ಹುಲಿಕೆರೆ ಸಂಪತ್ ಕುಮಾರ್, ಸಿಜೆ ಕುಮಾರ್, ಎಂ ಎಸ್ ಸುರೇಶ್, ಸಂತೇಶಿವರ ಅಗ್ರಹಾರ ಬೆಳಗುಲಿ ದ್ಯಾವಲಾಪುರ ಹುಲ್ಲೇನಹಳ್ಳಿ ಭಾಗದ ನೂರಾರು ರೈತರು ಹಾಜರಿದ್ದರು.

Share this article