ಕನ್ನಡಪ್ರಭ ವಾರ್ತೆ ಬೈಲಹೊಂಗಲ
ನಾಡಿನ ಶ್ರೇಷ್ಠ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರನ್ನು ಕಳೆದುಕೊಂಡಿದ್ದು ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಬದುಕಿನಲ್ಲಿ ಸಾಕಷ್ಟು ನೋವು ಉಂಡು, ಸಂಕಷ್ಟ ಎದುರಿಸಿ ಬೆಳೆದ ಭೈರಪ್ಪನವರ ಸಾಧನೆ ಹೆಮ್ಮೆಪಡುವಂತದ್ದು ಎಂದು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಸಂಜೀವ ಜುನ್ನೂರ ಹೇಳಿದರು.ಪಟ್ಟಣದ ತಾಪಂ ಸಭಾಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ಡಾ.ಎಸ್.ಎಲ್.ಭೈರಪ್ಪರ ಶ್ರದ್ಧಾಂಜಲಿ ಸಭೆಯಲ್ಲಿ ಅವರಿಗೆ ನುಡಿನಮನ ಸಲ್ಲಿಸಿ ಮಾತನಾಡಿದರು. ಬೆಳಗಾವಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮೋಹನ ಪಾಟೀಲ ಮಾತನಾಡಿ, ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪಠ್ಯ ಪುಸ್ತಕದಲ್ಲಿ ಭೈರಪ್ಪನವರ ಮೇರು ವ್ಯಕ್ತಿತ್ವವನ್ನು ಮಕ್ಕಳು ಓದುವಂತಾಗಬೇಕು ಮತ್ತು ಅವರ ಮೌಲಿಕ ಕೃತಿಗಳು ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಠ್ಯಗಳಾಗಬೇಕು ಎಂದರು.
ಕಸಾಪ ತಾಲೂಕು ಅಧ್ಯಕ್ಷ ಎನ್.ಆರ್.ಠಕ್ಕಾಯಿ ಮಾತನಾಡಿ, ಭೈರಪ್ಪನವರು ಸಾಕಷ್ಟು ಅಧ್ಯಯನ ಮಾಡಿ, ಪ್ರವಾಸ ಕೈಗೊಂಡು, ಅನುಭವಗಳನ್ನು ಪಡೆದು ವಾಸ್ತವಿಕ ನೆಲೆಗಟ್ಟಿನ ಮೇಲೆ ಕಾದಂಬರಿಗಳನ್ನು ರಚಿಸಿರುವುದರಿಂದ ಅವರ ಸಾಹಿತ್ಯ ಓದುಗರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿಯಲು ಸಾಧ್ಯವಾಗಿದೆ ಎಂದರು. ಕೆಆರ್‌ಸಿ ಶಿಕ್ಷಣ ಸಂಸ್ಥೆಯ ಪದವಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಜಿ.ಕೆ.ಗಾಂವಕರ ಮಾತನಾಡಿ, ಭೈರಪ್ಪನವರು ಸಾಹಿತ್ಯದ ಜೊತೆಗೆ ತತ್ವಶಾಸ್ತ್ರ, ಸಂಗೀತದ ಮೇಲೂ ವಿಶೇಷ ಒಲವು ಹೊಂದಿದ್ದರು. ಅವರ ಕೃತಿಗಳು ಬೇರೆ ಬೇರೆ ಭಾಷೆಗಳಿಗೆ ಅನುವಾದಗೊಂಡಿರುವುದು ಕನ್ನಡಿಗರಾದ ನಮಗೆಲ್ಲ ಅಭಿಮಾನದ ಸಂಗತಿ ಎಂದರು.ನುಡಿನಮನದಲ್ಲಿ ಕಸಾಪ ಗೌರವ ಕಾರ್ಯದರ್ಶಿ ಮಂಜುಳಾ ಶೆಟ್ಟರ, ಗೌರವ ಕೋಶಾಧ್ಯಕ್ಷ ಮಹೇಶ ಕೋಟಗಿ, ಕಾರ್ಯಕಾರಿ ಸಮಿತಿ ಸದಸ್ಯ ದುಂಡಪ್ಪ ಗರಗದ, ಸೋಮೇಶ್ವರ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಶ್ರೀಶೈಲ ಶರಣಪ್ಪನವರ, ಕನ್ನಡ ಜಾನಪದ ಪರಿಷತ್ತಿನ ತಾಲೂಕಾಧ್ಯಕ್ಷ ಚಂದ್ರಶೇಖರ ಕೊಪ್ಪದ, ಶಿಕ್ಷಣ ತಜ್ಞ ಎಸ್.ಎಲ್. ನಾಗನೂರ, ಕವಯಿತ್ರಿ ಸಾವಿತ್ರಿ ಹೊತ್ತಿಗಿಮಠ, ಕವಿ ಪ್ರಕಾಶ ಮರಿತಮ್ಮನವರ, ಉಡಿಕೇರಿ ಗ್ರಾಪಂ ಪಿಡಿಒ ಆಸೀಫ್ ಲತೀಫ್, ಮುರ್ಕಿಬಾವಿ ಗ್ರಾಪಂ ಪಿಡಿಒ ಶಕುಂತಲಾ ಮರಕುಂಬಿ, ತಾಪಂ ಸಿಬ್ಬಂದಿ ರಮೇಶ ಮುನೆನ್ನಿ, ಪವನಕುಮಾರ ತುರಮರಿ, ಎಸ್.ಬಿ.ಯರಗಟ್ಟಿ, ಈಶ್ವರಗೌಡ ಪಾಟೀಲ, ಮಹಾಂತೇಶ ಭಜಂತ್ರಿ ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ಶಿಕ್ಷಕರಾದ ರಾಜು ಹಕ್ಕಿ ನಿರೂಪಿಸಿ ವಂದಿಸಿದರು.