ದಸರಾಗೆ ಮೆರಗು ತಂದ ಬೊಂಬೆಗಳ ಪ್ರದರ್ಶನ

KannadaprabhaNewsNetwork |  
Published : Sep 29, 2025, 03:02 AM IST
ಬನಹಟ್ಟಿಯಲ್ಲಿ ದಸರೆಗೆ ರಂಗು ತಂದಿರುವ ಬೊಂಬೆಗಳ ಪ್ರರ‍್ಶನ | Kannada Prabha

ಸಾರಾಂಶ

ತಾಲೂಕಿನ ಬನಹಟ್ಟಿಯ ಮೋಹನ ಮಹಾದೇವಪ್ಪ ಪತ್ತಾರ ಕುಟುಂಬದವರು ಸುಮಾರು ೫೦ ವರ್ಷಗಳಿಂದ ದಸರಾ ಹಬ್ಬದಲ್ಲಿ ಬೊಂಬೆ ಪ್ರದರ್ಶನ ಮಾಡುತ್ತ ಬಂದಿದ್ದಾರೆ. ಇದೀಗ ಅವರ ಮನೆಯಲ್ಲಿ ದಸರೆಯ ನಿಮಿತ್ತ ಗೊಂಬೆಗಳ ಪ್ರದರ್ಶನ ಈ ಭಾಗದಲ್ಲಿ ದಸರೆಯ ವೈಭವ ಸಾರುತ್ತಿದೆ.

ಶಿವಾನಂದ.ಪಿ.ಮಹಾಬಲಶಟ್ಟಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ತಾಲೂಕಿನ ಬನಹಟ್ಟಿಯ ಮೋಹನ ಮಹಾದೇವಪ್ಪ ಪತ್ತಾರ ಕುಟುಂಬದವರು ಸುಮಾರು ೫೦ ವರ್ಷಗಳಿಂದ ದಸರಾ ಹಬ್ಬದಲ್ಲಿ ಬೊಂಬೆ ಪ್ರದರ್ಶನ ಮಾಡುತ್ತ ಬಂದಿದ್ದಾರೆ. ಇದೀಗ ಅವರ ಮನೆಯಲ್ಲಿ ದಸರೆಯ ನಿಮಿತ್ತ ಗೊಂಬೆಗಳ ಪ್ರದರ್ಶನ ಈ ಭಾಗದಲ್ಲಿ ದಸರೆಯ ವೈಭವ ಸಾರುತ್ತಿದೆ. ದಸರಾ ಹಬ್ಬದ ನಿಮಿತ್ತ ಬನಹಟ್ಟಿಯ ಪತ್ತಾರ ಕುಟುಂಬದವರು ತಮ್ಮ ಮನೆಯಲ್ಲಿ ಸುಂದರವಾಗಿ ಗೊಂಬೆಗಳ ಪ್ರದರ್ಶನ ಹಮ್ಮಿಕೊಂಡಿದ್ದಾರೆ. ವೈವಿದ್ಯಮಯವಾದ ಗೊಂಬೆಗಳು, ಮೈಸೂರ ದಸರಾ ಮೆರವಣಿಗೆಯ ಆನೆಗಳು ಸೇರಿದಂತೆ ಹತ್ತಾರು ಗೊಂಬೆಗಳನ್ನು ಇಟ್ಟಿದ್ದು, ಇವುಗಳಿಗೆ ಲೈಟಿಂಗ್ ಮಾಡಿ ಮತ್ತಷ್ಟು ಗಮನ ಸೆಳೆಯುವಂತೆ ಮಾಡಿದ್ದಾರೆ. ಸದ್ಯ ಬೊಂಬೆಗಳ ಸಂಖ್ಯೆ ೨೦೦ಕ್ಕೂ ಹೆಚ್ಚು ಇದ್ದು, ಪ್ರತಿ ೪ ರಿಂದ ೫ ಬೊಂಬೆಗಳನ್ನು ಹೆಚ್ಚೆಚ್ಚು ಮಾಡುತ್ತ ಬರುತ್ತಿದ್ದಾರೆ. ಮನೆಯ ಸದಸ್ಯರಾದ ವಂದನಾ, ಗೀತಾ, ಕಲಾ, ಶ್ರುತಿ, ಸ್ನೇಹಾ, ಶಕುಂತಲಾ, ಅನ್ನಪೂರ್ಣ ಹಾಗೂ ಮಕ್ಕಳು ಈ ಗೊಂಬೆಗಳನ್ನು ಅಚ್ಚುಕಟ್ಟಾಗಿ ಇಡಲು ಸಾಕಷ್ಟು ಪರಿಶ್ರಮ ವಹಿಸಿರುತ್ತಾರೆ. ಈ ಬಾರಿಯ ಪ್ರರ‍್ಶನದಲ್ಲಿ ನವದುರ್ಗೆಯರು, ವಿಷ್ಣುವಿನ ಅವತಾರ, ಕೃಷ್ಣನ ದಶಾವತಾರ, ನಾಟ್ಯ ಗಣಪತಿ, ಮದುವೆ ಮಂಟಪ, ಕೃಷ್ಣನ ರಾಸಲಿಲೇಗಳು, ಚೆನ್ನಪಟ್ಟಣದ ಬೊಂಬೆಗಳು, ಪಟ್ಟದ ಬೊಂಬೆಗಳು, ಮೈಸೂರು ಅರಮನೆ ಜಂಬು ಸವಾರಿ, ತೋಪುಗಳು, ಕಾಮದೇನು ಆಕಳು, ರಾಜಸ್ಥಾನದ ಬೊಂಬೆಗಳು ಸೇರಿದಂತೆ ಅನೇಕ ಪ್ರಕಾರದ ಬೊಂಬೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿರುವುದು ನೋಡುಗರನ್ನು ಆಕರ್ಷಿಸಿದೆ. ಈ ವರ್ಷ ಹೊಸದಾಗಿ ಮದುರೈ ಮೀನಾಕ್ಷಿಯ ಕಲ್ಯಾಣ ಮಹೋತ್ಸವದ ಬೊಂಬೆ ಹಾಗೂ ಕೇದಾರಿನಾಥನ ಪ್ರತಿಕೃತಿ ನೋಡುಗರ ಕನ್ಮಣ ಸೆಳೆಯುತ್ತಿವೆ.

ನಮ್ಮ ಮನೆಯಲ್ಲಿ ಸುಮಾರು ೫೦ ವರ್ಷಗಳಿಂದ ದಸರಾ ಸಂದರ್ಭದಲ್ಲಿ ಬೊಂಬೆಗಳನ್ನು ಕೂಡ್ರಿಸುವ ಸಂಪ್ರದಾಯವಿದ್ದು, ಕಳೆದ ೨೦ ವರ್ಷದಿಂದ ಹೊಸ ಮನೆಯಲ್ಲಿ ಜಾಗೆ ಹೆಚ್ಚಳವಾಗಿದ್ದರಿಂದ ಅದನ್ನು ಅಚ್ಚುಕಟ್ಟಾಗಿ ೭ ಹಂತದಲ್ಲಿ ಜೋಡಿಸಿ ಪ್ರದರ್ಶನ ಮಾಡುತ್ತೇವೆ. ನಮ್ಮ ಪರಂಪರೆ ಸಂಸ್ಕೃತಿ ಉಳಿದು ಬೆಳೆಯಲಿ ಎಂಬುದು ನಮ್ಮ ಆಶಯ. ಪ್ರರ‍್ಶನ ನೋಡಲು ನಮ್ಮ ಆಪ್ತರು, ಸಂಬಂಧಿಕರು ಬಂದು ನೋಡಿ ಖುಷಿ ಪಡುತ್ತಾರೆ.

- ಕಲಾ ರವೀಂದ್ರ ಪತ್ತಾರ,
ಬನಹಟ್ಟಿ

ನಮ್ಮ ಪರಂಪರೆ ಸಂಸ್ಖೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಸಂಪ್ರದಾಯಗಳು ಅವಶ್ಯವಾಗಿವೆ. ದಸರೆಯ ವೈಭವವನ್ನು ಇಲ್ಲಿ ಪ್ರತಿಷ್ಠಾಪಿಸಿರುವುದು ಸಂತಸದ ವಿಷಯ. ಪುರಾಣ, ರಾಮಾಯಣ, ಮಹಾಭಾರತ ಎಲ್ಲವನ್ನು ಒಳಗೊಂಡಿದೆ. ಇದು ನೋಡುಗರನ್ನು ಆಕರ್ಷಿಸುತ್ತಿವೆ. ನಮ್ಮ ಸಂಸ್ಕೃತಿ ಉಳಿಸಿ ಬೆಳೆಸುವ ಪ್ರಯತ್ನ ಮಾಡುತ್ತಿರುವ ಪತ್ತಾರ ಕುಟುಂಬದ ಕಾರ್ಯ ನಿಜಕ್ಕೂ ಶ್ಲಾಘನೀಯ

- ಜಯವಂತ ಕಾಡದೇವರ, ಹಿರಿಯ ಸಾಹಿತಿಗಳು, ರಬಕವಿ-ಬನಹಟ್ಟಿ

PREV

Recommended Stories

ಸಿಲೋಗನಾ ಹೆಸರಿನಲ್ಲಿ ವಿಜಯ ದಶಮಿ ಆಚರಿಸುವ ದನಗರ ಗೌಳಿಗರು
ಭಟ್ಕಳದಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ