ಕನ್ನಡಪ್ರಭ ವಾರ್ತೆ ಸವದತ್ತಿ
ಕರ್ನಾಟಕ, ಮಹಾರಾಷ್ಟ್ರ, ಗೋವಾ ಸೇರಿದಂತೆ ವಿವಿಧ ರಾಜ್ಯಗಳಿಂದ ಭಾನುವಾರದಿಂದಲೇ ಲಕ್ಷಾಂತರ ಭಕ್ತರು ಗುಡ್ಡದತ್ತ ಹೆಜ್ಜೆ ಹಾಕಿದರು. ಸೋಮವಾರ ಬೆಳಗ್ಗೆ ಯಲ್ಲಮ್ಮನಗುಡ್ಡದ ಪರಿಸರದಲ್ಲಿ ಭಕ್ತರೇ ಕಿಕ್ಕಿರಿದು ತುಂಬಿದ್ದರು. ಎತ್ತ ನೋಡಿದರೂ ಜನಸಾಗರವೇ ಕಂಡಿತು. ಬೆಳಗ್ಗೆ ಮತ್ತು ಸಂಜೆ ಯಲ್ಲಮ್ಮ ದೇವಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿದ ದೇವಿಗೆ ವಿವಿಧ ಕಾಣಿಕೆ ಅರ್ಪಿಸಿ ಭಕ್ತಿ ಮೆರೆದರು.
೨೦೨೪ರಲ್ಲಿ ಯಲ್ಲಮ್ಮ ದೇವಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿದೆ. ಈ ಬಾರಿ ಜಾತ್ರೆಯಲ್ಲಿ ಭಕ್ತರಿಗೆ ಕುಡಿಯುವ ನೀರು, ವಸತಿ, ಶೌಚಗೃಹ ಮೊದಲಾದ ಸೌಕರ್ಯ ಕಲ್ಪಿಸಲಾಗಿತ್ತಾದರೂ ಏಕಕಾಲಕ್ಕೆ ಹೆಚ್ಚಿನ ಭಕ್ತರು ಬಂದಿದ್ದರಿಂದ ಅಲ್ಲಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ತಲೆದೋರಿತ್ತು. ತಲೆ ಮೇಲೆ ಕೊಡ ಹೊತ್ತು ಕುಣಿದ ಜೋಗತಿಯರು, ಭಂಡಾರ ಹಾರಿಸಿದ ಕುಣಿದಾಡಿದ ಭಕ್ತರು ಮತ್ತು ವಿವಿಧ ಕಲಾ ಪ್ರಕಾರಗಳನ್ನು ಪ್ರಸ್ತುತಪಡಿಸಿದ ಜಾನಪದ ಕಲಾವಿದರು ಜಾತ್ರೆಗೆ ಮೆರುಗು ತಂದರು.ಮಲಪ್ರಭೆ ಮಡಿಲಲ್ಲಿರುವ ಜೋಗುಳಬಾವಿ ಸತ್ಯಮ್ಮನ ಸನ್ನಿಧಿಯಲ್ಲಿ ಹಾಗೂ ಯಲ್ಲಮ್ಮ ದೇವಸ್ಥಾನ ಬಳಿಯ ಎಣ್ಣೆ ಹೊಂಡದಲ್ಲಿ ಭಕ್ತರು ಪವಿತ್ರಸ್ನಾನ ಮಾಡಿದರು. ದೇವಸ್ಥಾನದ ಮೂಲ ಅರ್ಚಕರ ಮನೆಗಳಲ್ಲೇ ತಂಗಿದ ಭಕ್ತರು, ಶ್ರದ್ಧಾ-ಭಕ್ತಿಯಿಂದ ದೇವಿ ನಾಮಸ್ಮರಣೆ ಮಾಡಿದರು.
ತೆಂಗಿನಕಾಯಿ, ಕುಂಕುಮ-ಭಂಡಾರ, ಸೀರೆ, ಖಣ, ಕರ್ಪೂರ, ಬಾಳೆಹಣ್ಣಿನ ವ್ಯಾಪಾರ ಜೋರಾಗಿತ್ತು. ಜಾತ್ರೆಗೆ ಬಂದವರು ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಆಟಿಕೆಗಳನ್ನು ಕೊಡಿಸಿ ಸಂಭ್ರಮಿಸಿದರು. ದೇವಿ ದರ್ಶನ ಪಡೆದು ಊರಿಗೆ ಮರಳುವಾಗ ಹಲವರು ಮಿಠಾಯಿಗಳನ್ನು ಖರೀದಿಸಿದರು.
ಗುಡ್ಡದಲ್ಲಿ ಕೆಲವೆಡೆ ಪೊಲೀಸ್ ಸಹಾಯವಾಣಿ ಕೇಂದ್ರ ತೆರೆಯಲಾಗಿತ್ತು. ಜನಸಂದಣಿಯಲ್ಲಿ ಜಾತ್ರೆಯಲ್ಲಿ ತಪ್ಪಿಸಿಕೊಂಡವರನ್ನು ಹುಡುಕಲು ಪೊಲೀಸರು ನೆರವಾದರು. ಹಿರಿಯ ಪೊಲೀಸ್ ಅಧಿಕಾರಿಗಳು ಬಿಗಿ ಭದ್ರತೆ ಕೈಗೊಂಡರು. ಸಾರಿಗೆ ಸಂಸ್ಥೆಯವರು ಜಾತ್ರೆಗೆ ಬರುವವರಿಗೆ ವಿಶೇಷ ಬಸ್ ವ್ಯವಸ್ಥೆ ಮಾಡಿದ್ದರು. ಆದರೆ, ಭಕ್ತರ ಸಂಖ್ಯೆಗೆ ಅನುಗುಣವಾಗಿ ಇನ್ನೂ ಹೆಚ್ಚಿನ ಬಸ್ಗಳನ್ನು ಬಿಡಬೇಕೆಂಬ ಆಗ್ರಹವೂ ಕೇಳಿಬಂತು.