ದೇವರ ಕಾರ್ಯದಲ್ಲಿ ಭಕ್ತಿ, ಶ್ರದ್ಧೆ, ನಿಷ್ಠೆ ಮುಖ್ಯ: ಡಾ. ಹೆಗ್ಗಡೆ

KannadaprabhaNewsNetwork | Published : Jan 12, 2025 1:19 AM

ಸಾರಾಂಶ

ಅಳದಂಗಡಿಯ ಶ್ರೀ ಸೋಮನಾಥೇಶ್ವರೀ ದೇವಿಗೆ ನಡೆಯುತ್ತಿರುವ ಅಷ್ಟಬಂಧ- ಬಹ್ಮಕಲಶೋತ್ಸವದ ಮೂರನೇ ದಿನವಾದ ಶುಕ್ರವಾರ ಅವರು ಭೇಟಿ ನೀಡಿ, ಬಳಿಕ ನಡೆದ ಸಭೆಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ದೇವತಾಕಾರ್ಯ, ಉತ್ಸವ, ಅನ್ನದಾಸೋಹದಿಂದ ಭಕ್ತರು ತೃಪ್ತಿಯಾದರೆ ದೇವರೂ ಸಂತೃಪ್ತಿ ಹೊಂದಿದಂತೆ. ಭಕ್ತಿ, ಶ್ರದ್ಧೆ, ಏಕಾಗ್ರತೆ, ನಿಷ್ಠೆ ಮುಖ್ಯ ಎಂದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ನುಡಿದರು.

ಅಳದಂಗಡಿಯ ಶ್ರೀ ಸೋಮನಾಥೇಶ್ವರೀ ದೇವಿಗೆ ನಡೆಯುತ್ತಿರುವ ಅಷ್ಟಬಂಧ- ಬಹ್ಮಕಲಶೋತ್ಸವದ ಮೂರನೇ ದಿನವಾದ ಶುಕ್ರವಾರ ಅವರು ಭೇಟಿ ನೀಡಿ, ಬಳಿಕ ನಡೆದ ಸಭೆಯಲ್ಲಿ ಮಾತನಾಡಿದರು. ದೋಷಗಳನ್ನು ಪರಿಹರಿಸುವುದಕ್ಕಾಗಿ ಬ್ರಹ್ಮಕಲಶದಂತಹ ವಿಧಾನಗಳನ್ನು ನಡೆಸಲಾಗುತ್ತದೆ. ಉತ್ತರಪ್ರದೇಶದ ಪ್ರಯಾಗದಲ್ಲಿ ಕುಂಭ ಮೇಳ ಸಂಪನ್ನಗೊಳ್ಳಲಿದೆ. ಅದೇ ರೀತಿ ಅಳದಂಗಡಿಯಲ್ಲಿನ ಶ್ರೀ ಸೋಮನಾಥೇಶ್ವರೀ ದೇವಿಯು ಕುಂಭ ರೂಪದಲ್ಲಿದ್ದಾಳೆ. ಇದೊಂದು ಸುಯೋಗ. ದೇವಾಲಯದೊಳಗಿನ ಹಾಗೂ ನಮ್ಮೊಳಗಿನ ಓಜಸ್ಸು, ತೇಜಸ್ಸು ಪರಿಪಕ್ವವಾಗಲು ವಿಶೇಷ ಪ್ರಯತ್ನ ಇದಾಗಿದೆ. ದೇವರಿಗೆ ಕಿಂಚಿತ್ ಕೊಟ್ಟವನೂ ಪ್ರಿಯನಾಗುತ್ತಾನೆ. ಉತ್ಸವಾದಿಗಳಿಂದ ಭಕ್ತರು ಸಂತೋಷಗೊಂಡರೆ ದೇವರು ಸಂತೃಪ್ತಿಗೊಂಡಂತೆ ಎಂದ ಹೆಗ್ಗಡೆ, ಪುರೋಹಿತರು ದೇವಾಲಯದೊಳಗೆ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳುವಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ರಾಜ್ಯದ 16,000 ಕ್ಕೂ ಹೆಚ್ಚು ದೇವಾಲಯಗಳ ಹೊರಗೆ ಸ್ವಚ್ಛತಾ ಕಾರ್ಯವನ್ನು ನೆರವೇರಿಸುತ್ತಿರುವುದನ್ನು ಶ್ಲಾಘಿಸಿದರು.

ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಅನುವಂಶಿಕ ಆಡಳಿತ ಮೊಕ್ತೇಸರ ಮತ್ತು ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಹರೀಶ್ ಕುಮಾರ್, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ವೇದಿಕೆಯಲ್ಲಿದ್ದರು. ದಾನಿಗಳಾದ ರಕ್ಷಿತ್ ಶಿವರಾಂ, ಸುಮಂತ ಕುಮಾರ್ ಜೈನ್, ಪ್ರವೀಣ ಕುಮಾರ್ ಇಂದ್ರ, ಡಾ. ಶಶಿಧರ ಡೋಂಗ್ರೆ, ಜಯದೀಪ್ ದೇವಾಡಿಗ, ಪ್ರಶಾಂತ ಪಾರೆಂಕಿ, ಲಿಂಬಯ್ಯ ದೇವಾಡಿಗ, ದೇವೇಂದ್ರ ಹೆಗ್ಡೆ ಕೊಕ್ರಾಡಿ ಹಾಗೂ ಅಜಿಲ ನಡಾವಳಿ ಎಂಬ ಪುಸ್ತಕ ಬರೆದ ಮುಂಜುನಾಥ ಭಟ್ ಅಂತರ ಅವರನ್ನು ಸನ್ಮಾನಿಸಿದರು.

ದೇವಳದ ವತಿಯಿಂದ ಹಾಗೂ ಎಸ್.ಕೆ.ಡಿ.ಆರ್.ಡಿ.ಪಿ. ಅಳದಂಗಡಿ ವಲಯದ ವತಿಯಿಂದ ಹೆಗ್ಗಡೆಯವರನ್ನು ಗೌರವಿಸಲಾಯಿತು. ಸಮಿತಿ ಕಾರ್ಯಾಧ್ಯಕ್ಷ ದೇವೇಂದ್ರ ಹೆಗ್ಡೆ ಕೊಕ್ರಾಡಿ ಸ್ವಾಗತಿಸಿದರು. ಪ್ರಧಾನ ಸಂಚಾಲಕ ಶಿವಪ್ರಸಾದ ಅಜಿಲ ವಂದಿಸಿದರು. ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರ್ವಹಿಸಿದರು. ರಾತ್ರಿ ಶ್ರೀಕೃಷ್ಣ ಮೆಲೋಡಿಸ್ ಸವಣಾಲು ಇವರಿಂದ ರಸಮಂಜರಿ ಹಾಗೂ ವೇಣೂರಿನ ಐಸಿರಿ ಕಲಾವಿದರಿಂದ ನಾಟಕ ಪ್ರದರ್ಶನ ನಡೆಯಿತು.

ಗಣಪತಿ ಗುಡಿ ನವೀಕರಣ

ಈ ದೇವಸ್ಥಾನದ ಸಮೀಪದಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನ ರಸ್ತೆ ಬದಿಯಲ್ಲೇ ಇದ್ದು ಅಜೀರ್ಣಾವಸ್ಥೆಯಲ್ಲಿತ್ತು. ನಾನು ಪ್ರತಿಬಾರಿ ಆ ದಾರಿಯಲ್ಲಿ ಹೋಗುವಾಗ ಗಮನಿಸುತ್ತಿದ್ದೆ. ಅದೀಗ ಸಂಪೂರ್ಣ ನವೀಕರಣ ಹೊಂದಿ ಸುಂದರ ದೇವಸ್ಥಾನವಾಗಿ ಶ್ರೀ ಮಹಾಗಣಪತಿಯು ವಿರಾಜಮಾನನಾಗಿರುವುದು ಸಂತಸ ತಂದಿದೆ. ಗಣಪತಿ ಸಂತುಷ್ಟನಾದರೆ ಎಲ್ಲವೂ ಸುಲಲಿತವಾಗಿ ನಡೆಯುತ್ತದೆ ಎಂದು ಸಮಿತಿ ಗೌರವಾಧ್ಯಕ್ಷರಾದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು. ಇಂದು ಬ್ರಹ್ಮಕಲಶ

ದೇವಸ್ಥಾನದಲ್ಲಿ ಭಾನುವಾರ ಬೆಳಗ್ಗೆ ಪುಣ್ಯಾಹ, ಗಣಪತಿ ಹೋಮ, ದುರ್ಗಾಹೋಮ, ಬೆಳಗ್ಗೆ 9.2ಕ್ಕೆ ಕುಂಭ ಲಗ್ನ ಸುಮಹೂರ್ತದಲ್ಲಿ ದ್ರವ್ಯಮಿಳಿತ ಬ್ರಹ್ಮಕುಂಭಾಭಿಷೇಕ, ಮಹಾನ್ಯಾಸ, ಪ್ರಸನ್ನ ಪೂಜೆ, ಅವಸ್ರುತ ಬಲಿ ಮಹಾಪೂಜೆ ಪ್ರಸಾದ ವಿತರಣೆ, ಅನ್ನದಾನ ನಡೆಯಲಿದೆ. ಸಂಜೆ ಶ್ರೀ ದೇವರ ಉತ್ಸವ ಸಂಪನ್ನಗೊಳ್ಳಲಿದೆ.

Share this article