ಏ.9ರಿಂದ ಪೆರಣಂಕಿಲ ದೇವಳದಲ್ಲಿ ಭಕ್ತಿ ಸಿದ್ಧಾಂತೋತ್ಸವ, ರಾಮೋತ್ಸವ

KannadaprabhaNewsNetwork | Published : Mar 25, 2025 12:48 AM

ಸಾರಾಂಶ

ಪೆರಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಏ.9ರಿಂದ 13ರವರೆಗೆ ಭಕ್ತಿ ಸಿದ್ಧಾಂತೋತ್ಸವ ಮತ್ತು ರಾಮೋತ್ಸವ ನಡೆಯಲಿದೆ. ಈ ಬಗ್ಗೆ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಜ್ಯೋತಿಷ ವಿದ್ವಾನ್ ನಿಟ್ಟೆ ಪ್ರಸನ್ನಾಚಾರ್ಯ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಪೇಜಾವರ ಮಠದ ಆಡಳಿತಕ್ಕೊಳಪಟ್ಟಿರುವ ಪೆರಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಏ.9ರಿಂದ 13ರವರೆಗೆ ಭಕ್ತಿ ಸಿದ್ಧಾಂತೋತ್ಸವ ಮತ್ತು ರಾಮೋತ್ಸವ ನಡೆಯಲಿದೆ.

ಈ ಬಗ್ಗೆ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಜ್ಯೋತಿಷ ವಿದ್ವಾನ್ ನಿಟ್ಟೆ ಪ್ರಸನ್ನಾಚಾರ್ಯ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಏ.10ರಂದು ಬೆಂಗಳೂರಿನ ಪೂರ್ಣಪ್ರಜ್ಞಾ ವಿದ್ಯಾಪೀಠದದಲ್ಲಿ 13 ವರ್ಷಗಳ ಕಾಲ ಶಾಸ್ತ್ರಾಧ್ಯಯನ ಪೂರೈಸಿದ ವಿದ್ಯಾರ್ಥಿಗಳ, 44ನೇ ಘಟಿಕೋತ್ಸವ (ಶ್ರೀಮನ್ಯಾಯಸುಧಾ ಮಂಗಳ), ಏ.11 ಮತ್ತು 12ರಂದು 30ನೇ ಅಖಿಲ ಭಾರತ ಮಾಧ್ವ ತತ್ವಜ್ಞಾನ ಸಮ್ಮೇಳನ, ಏ.13ರಂದು ಸಂತ ಸಂಗಮ - ಬೃಹತ್ ಹಿಂದೂ ಸಮಾಜೋತ್ಸವಗಳೂ ನಡೆಯಲಿವೆ.

ಪ್ರತಿದಿನ ಸಂಜೆ ವಿವಿಧ ಮಠಾಧೀಶರ ಉಪಸ್ಥಿತಿಯಲ್ಲಿ ಧರ್ಮಸಭೆ, ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ ನಡೆಯಲಿದೆ. ಸಂಜೆ ಅಂತಾರಾಷ್ಟ್ರೀಯ ಖ್ಯಾತಿಯ ಶಿವಮಣಿ, ಗಾಯಕ ಜಗದೀಶ ಪುತ್ತೂರು, ಪದ್ಮಭೂಷಣ ಡಾ. ಎಲ್. ಸುಬ್ರಹ್ಮಣ್ಯಂ - ಕವಿತಾ ಕೃಷ್ಣಮೂರ್ತಿ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.

ಧಾರ್ಮಿಕ ಕಾರ್ಯಕ್ರಮಗಳಂಗವಾದಿ ಚತುರ್ವೇದ, ಪುರಾಣ ಪಾರಾಯಣ, ಗಣಪತಿ ದೇವರಿಗೆ ಕೊಪ್ಪರಿಗೆ ಅಪ್ಪ ಸೇವೆ, ಮನ್ಯುಸೂಕ್ತ ಯಾಗ, ಮಹಾಮೃತ್ಯುಂಜಯ ಯಾಗ, ಲಕ್ಷ ವಿಷ್ಣುಸಹಸ್ರನಾಮ ಯಾಗ, ಗೋಸೂಕ್ತ ಯಾಗ, ರಾಮತಾರಕ ಮಂತ್ರ ಯಾಗಗಳು ನಡೆಯಲಿವೆ.

ಈ ನಾಲ್ಕುದಿನಗಳ ಮಹೋತ್ಸವದಲ್ಲಿ ಹಿರಿಯ ವಿದ್ವಾಂಸರು, ಪೂರ್ಣಪ್ರಜ್ಞಾ ವಿದ್ಯಾಪೀಠದ ಪ್ರಾಕ್ತನ ವಿದ್ಯಾರ್ಥಿಗಳಾದ ಕುಂಬಾಶಿ ವಿನಾಯಕ ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ಕೆ. ಸೂರ್ಯನಾರಾಯಣ ಉಪಾಧ್ಯಾಯರು ಮತ್ತು ಮುಂಬೈಯ ಜ್ಯೋತಿರ್ವಿದ್ವಾಂಸ ಪೆರಣಂಕಿಲ ಹರಿದಾಸ ಭಟ್ಟರು ಮತ್ತು ಧರ್ಮಬೀರು ಚೆನೈಯ ಹೊಟೇಲ್ ಉದ್ಯಮಿ ಕೆ.ರಾಮಪ್ರಸಾದ್ ಭಟ್ಟರನ್ನು ಸಮ್ಮೇಳನಾದ್ಯಕ್ಷರನ್ನಾಗಿ ನಿಯೋಜಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪೇಜಾವರ ಮಠದ ದಿವಾನ ಎಂ.ರಘುರಾಮಾಚಾರ್ಯ, ಸಿಇಒ ಸುಬ್ರಹ್ಮಣ್ಯ ಭಟ್, ಸಮಿತಿಯ ಪ್ರಮುಖರಾದ ಅನಂತ ಸಾಮಗ, ವಿದ್ವಾನ್ ಕೃಷ್ಣರಾಜ ಕುತ್ಪಾಡಿ, ಕೆ.ರಾಮಚಂದ್ರ ಉಪಾಧ್ಯಯ, ದೇವಳದ ವ್ಯವಸ್ಥಾಪಕ ವಿಷ್ಣುಮೂರ್ತಿ ಆಚಾರ್ಯ, ಸಮಿತಿ ಸದಸ್ಯರಾದ ವಾಸುದೇವ ಭಟ್ ಪೆರಂಪಳ್ಳಿ ಮತ್ತು ಸತೀಶ್‌ ಕುಮಾರ್ ಇದ್ದರು.

ಇದಕ್ಕೆ ಮೊದಲು ಪೇಜಾವರ ಮಠದಲ್ಲಿ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಪಾದುಕಾ ಸನ್ನಿಧಿಯಲ್ಲಿ ಸಮ್ಮೇಳನದ ಆಹ್ಪಾನ ಪತ್ರಿಕೆಗಳನ್ನು ಬಿಡುಗಡೆ ಮಾಡಲಾಯಿತು.

..........ಯೋಗಿ ಆದಿತ್ಯನಾಥ್ ಭಾಗಿ ?

ಏ.13ರಂದು ನಡೆಯುವ ಸಂತ ಸಂಗಮ ಕಾರ್ಯಕ್ರಮದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನೂ ಆಹ್ವಾನಿಸಲಾಗಿದೆ, ಅವರು ಬರುವ ಸಾಧ್ಯತೆ ಇದೆ ಎಂದು ಸಂಘಟಕರು ತಿಳಿಸಿದ್ದಾರೆ

Share this article