ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ತಾಲೂಕು ಪಂಚಾಯತಿ ಆವರಣದ ಶಾಸಕರ ಕಚೇರಿಯಲ್ಲಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಶಾಸಕರು, ತಾಲೂಕಿನ ವಿವಿಧೆಡೆ ಸಾರಿಗೆ ಬಸ್ ಸಂಚಾರ ವ್ಯವಸ್ಥೆ ಮಾಹಿತಿ ಪಡೆದರು. ಶಾಲಾ ಕಾಲೇಜುಗಳ ಮಕ್ಕಳಿಗೆ ಉಂಟಾಗಿರುವ ಬಸ್ ಸಮಸ್ಯೆಯನ್ನು ಪರಿಹರಿಸಲು ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದರು.
ತಾಲೂಕಿನ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಪ್ರಾಥಮಿಕ ಹಂತದಿಂದ ಕಾಲೇಜು ಹಂತದವರೆಗೆ ಕಲಿಯಲು ಪಟ್ಟಣದ ಶಾಲಾ ಕಾಲೇಜುಗಳಿಗೆ ನಿತ್ಯ ಬರುತ್ತಾರೆ. ವಿದ್ಯಾರ್ಥಿಗಳಲ್ಲದೆ ಸಂತೆ ವ್ಯಾಪಾರ ಸೇರಿದಂತೆ ತಮ್ಮ ದೈನಂದಿನ ವ್ಯವಹಾರಗಳಿಗೆ ರೈತ ಸಮುದಾಯವೂ ಪಟ್ಟಣಕ್ಕೆ ಬಂದು ಹೋಗುತ್ತದೆ ಎಂದರು.ರೈತರು ಮತ್ತು ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ಸಮಯದಲ್ಲಿ ಬಸ್ ವ್ಯವಸ್ಥೆಯಿಲ್ಲದೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಪಟ್ಟಣದಲ್ಲಿ ಬಸ್ ಡಿಪೋ ಇದ್ದರೂ ಗ್ರಾಮೀಣ ಸಾರಿಗೆ ವ್ಯವಸ್ಥೆ ನಿರ್ವಹಣೆ ಸಮರ್ಪಕವಾಗಿಲ್ಲ. ಅಗತ್ಯ ಇರುವ ಮಾರ್ಗಗಳಲ್ಲಿ ಬಸ್ ರೂಟ್ ಹೆಚ್ಚಿಸಬೇಕು. ಶಾಲಾ ಕಾಲೇಜಿನ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಬೆಳಗ್ಗೆ ಮತ್ತು ಸಂಜೆ ರೂಟ್ ಆಪರೇಟ್ ಮಾಡಬೇಕು ಎಂದು ತಾಕೀತು ಮಾಡಿದರು.
ಮೈಸೂರು - ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ಬರುವ ಮಾದಾಪುರ ಗೇಟ್ ಬಳಿ ವೇಗದೂತ ಬಸ್‌ಗಳ ನಿಲುಗಡೆಗೆ ಕ್ರಮವಹಿಸುವುದಾಗಿ ಹೇಳಿದರು.
ಸಭೆಯಲ್ಲಿ ವಿಭಾಗೀಯ ಸಂಚಾರ ನಿಯಂತ್ರಣಧಿಕಾರಿ ಪರಮೇಶ್ವರಪ್ಪ, ಕೆ.ಆರ್.ಪೇಟೆ ಬಸ್ ಡಿಪೋ ವ್ಯವಸ್ಥಾಪಕಿ ವನಿತ, ಸಂಚಾರ ನಿಯಂತ್ರಕ ರವಿ ಸೇರಿದಂತೆ ಗ್ರಾಮೀಣ ಭಾಗದ ವಿವಿಧ ಜನ ಮುಖಂಡರು ಭಾಗವಹಿಸಿದ್ದರು.