ಕನ್ನಡಪ್ರಭ ವಾರ್ತೆ ಮಂಡ್ಯ
ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಜಾಗದಲ್ಲಿ ಈಗ ನೀರವ ಮೌನ ಆವರಿಸಿದೆ. ಲಕ್ಷಾಂತರ ಜನರು, ವಾಹನಗಳಿಂದ ತುಂಬಿದ್ದ ಪ್ರದೇಶ ಖಾಲಿ ಖಾಲಿಯಾಗಿದೆ. ಹಿಂದೆ ನಡೆದ ಎರಡೂ ಸಮ್ಮೇಳನಗಳು ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದಿದ್ದವು. ಈ ಬಾರಿ ನಗರದ ಹೊರವಲಯದಲ್ಲಿ ಯಶಸ್ವಿಯಾಗಿ ನಡೆದು ಇತಿಹಾಸ ಪುಟ ಸೇರಿದೆ.ಸಮ್ಮೇಳನ ಮುಗಿದ ಬೆನ್ನಹಿಂದೆಯೇ ಜರ್ಮನ್ ಟೆಂಟ್ ತೆರವುಗೊಳಿಸುವ ಕಾರ್ಯ ಬಿರುಸಿನಿಂದ ಸಾಗಿದೆ. ಆಸನಗಳು, ಟೇಬಲ್‌ಗಳು, ಧ್ವನಿವರ್ಧಕಗಳು, ಬ್ಯಾರಿಕೇಡ್‌ಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ಕಾರ್ಮಿಕರು ನಿರತರಾಗಿದ್ದಾರೆ. ಸಮಾನಾಂತರ ವೇದಿಕೆಗೆ ಹಾಕಿದ್ದ ಟೆಂಟ್‌ನ್ನು ಕಳಚಿಡಲಾಗಿದೆ. ಸಮ್ಮೇಳನದ ವಿವಿಧೆಡೆ ಅಳವಡಿಸಿದ್ದ ಲೈಟಿಂಗ್ಸ್‌ಗಳು, ಸೀಸಿ ಟೀವಿ ಕ್ಯಾಮೆರಾಗಳನ್ನು ಕಾರ್ಮಿಕರು ಬಿಚ್ಚಿಡುತ್ತಿದ್ದರು. ಪುಸ್ತಕ ಮಳಿಗೆಗಳು, ವಾಣಿಜ್ಯ ಮಳಿಗೆಗಳು, ಊಟದ ಹಾಲ್‌ನಲ್ಲಿ ಹಾಕಿದ್ದ ಟೇಬಲ್, ಕುರ್ಚಿಗಳನ್ನೆಲ್ಲಾ ತೆರವುಗೊಳಿಸಿ ವಾಹನಗಳಲ್ಲಿ ಸಾಗಿಸುತ್ತಿರುವ ದೃಶ್ಯಗಳು ಸೋಮವಾರ ಕಂಡುಬಂದವು.
ಊಟಕ್ಕೆ ಬಳಸಿದ ತಟ್ಟೆಗಳು, ನೀರು, ಕಾಫಿ-ಕುಡಿದ ಲೋಟಗಳನ್ನು ಆಳವಾದ ಗುಂಡಿ ನಿರ್ಮಿಸಿ ಅದರಲ್ಲಿ ಹೂಳಲಾಗುತ್ತಿತ್ತು. ಸಮ್ಮೇಳನ ನಡೆದ ಜಾಗದ ಪ್ರದೇಶದಲ್ಲಿ ಕಸ ಚೆಲ್ಲಾಡುತ್ತಿದ್ದು ಅದರ ಸ್ವಚ್ಛತಾ ಕಾರ್ಯದಲ್ಲೂ ಕಾರ್ಮಿಕರು ನಿರತರಾಗಿದ್ದರು.ನಿತ್ಯವೂ ಸರ್ಕಾರಿ ಅಧಿಕಾರಿಗಳು, ಮಂತ್ರಿಗಳು, ಶಾಸಕರು, ಬೆಂಬಲಿಗರು, ಕಸಾಪ ಪದಾಧಿಕಾರಿಗಳು, ಪೊಲೀಸರು, ಜನರಿಂದ ಗಿಜಿ ಗಿಜಿಗುಡುತ್ತಿದ್ದ ಪ್ರದೇಶದಲ್ಲಿ ಕಾರ್ಮಿಕರನ್ನೊರತುಪಡಿಸಿ ಇನ್ಯಾರೂ ಅಲ್ಲಿರಲಿಲ್ಲ. ಸಮ್ಮೇಳನದ ಸುತ್ತಮುತ್ತ ತಲೆಎತ್ತಿದ್ದ ಸಣ್ಣ ಪುಟ್ಟ ಅಂಗಡಿಯವರೆಲ್ಲರೂ ಜಾಗ ಖಾಲಿ ಮಾಡಿದ್ದರು. ಅಲ್ಲಲ್ಲಿ ಬಿದ್ದಿದ್ದ ಆಹಾರ ಪದಾರ್ಥಗಳನ್ನು ಹದ್ದುಗಳು ಮುತ್ತಿಕೊಂಡು ತಿನ್ನುತ್ತಿದ್ದವು. ಇಡೀ ಪ್ರದೇಶ ಬಟಾಬಯಲಿನಂತೆ ಗೋಚರಿಸುತ್ತಿತ್ತು.
ವಿದ್ಯುತ್ ದೀಪಾಲಂಕಾರವನ್ನು ಎರಡು ದಿನಗಳ ಕಾಲ ಮುಂದುವರೆಸಿರುವುದರಿಂದ ಅದನ್ನು ತೆರವುಗೊಳಿಸಿರಲಿಲ್ಲ. ನಗರ ಸೇರಿದಂತೆ ದೀಪಾಲಂಕಾರ ಮಾಡಿರುವ ಜಾಗದಲ್ಲಿನ ಲೈಟಿಂಗ್ಸ್‌ಗಳು ಎಂದಿನಂತೆ ಮುಂದುವರೆದಿದ್ದವು.. ಸಮ್ಮೇಳನದ ಸ್ವಾಗತ ಕಮಾನುಗಳು ಅಲ್ಲಲ್ಲಿ ನಿಂತಿದ್ದವು. ಸಮ್ಮೇಳನಕ್ಕೆ ಸ್ವಾಗತ ಕೋರಿ ಹಾಕಿದ್ದ ಫ್ಲೆಕ್ಸ್‌ಗಳು ಹೆದ್ದಾರಿ ಮಧ್ಯದಲ್ಲಿ ಹಾಗೆಯೇ ಉಳಿದುಕೊಂಡಿದ್ದವು.ಸಮ್ಮೇಳನವನ್ನು ಯಶಸ್ವಿಗೊಳಿಸಿದ ಸಂಭ್ರಮದಲ್ಲಿರುವ ಜನಪ್ರತಿನಿಧಿಗಳು ವಿಶ್ರಾಂತಿಗೆ ಜಾರಿದ್ದರು. ಸತತ ಮೂರು ದಿನಗಳಿಂದ ಮಂಡ್ಯದಲ್ಲೇ ಠಿಕಾಣಿ ಹೂಡಿ ಸಮ್ಮೇಳನವನ್ನು ಜನಮೆಚ್ಚುವ ರೀತಿಯಲ್ಲಿ ನಡೆಸುವುದಕ್ಕೆ ಶ್ರಮಿಸುತ್ತಿದ್ದವರು ಸೋಮವಾರ ಜಿಲ್ಲೆಯಿಂದ ದೂರವೇ ಉಳಿದಿದ್ದರು. ಉನ್ನತಮಟ್ಟದ ಅಧಿಕಾರಿಗಳು ನಿಧಾನವಾಗಿ ಸುಧಾರಿಸಿಕೊಳ್ಳುತ್ತಿದ್ದರು.
ಸಕ್ಕರೆ ನಗರಿಯಲ್ಲಿ ಮೂರನೇ ಬಾರಿಗೆ ಸಂಭ್ರಮದ ನುಡಿ ಜಾತ್ರೆ ಮುಗಿದಿದೆ. ಮತ್ತೊಮ್ಮೆ ಸಮ್ಮೇಳನ ಬರುವವರೆಗೆ ಕಾಯುವುದು ಅನಿವಾರ್ಯವಾಗಿದೆ. ಅಲ್ಲಿಯವರೆಗೆ ಎಂಬತ್ತೇಳನೇ ಸಮ್ಮೇಳನದ ಸಿಹಿ ನೆನಪುಗಳು ಮಾತ್ರ ಎಲ್ಲರ ಮನಸ್ಸಿನಲ್ಲಿ ಅಚ್ಛ ಹಸಿರಾಗಿರುತ್ತದೆ.ಮಕ್ಕಳು, ಯುವಜನರನ್ನು ಆಕರ್ಷಿಸದ ಸಮ್ಮೇಳನ: ಹಲವರ ಬೇಸರಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜನರನ್ನು ತುಂಬಿಸುವುದರೊಂದಿಗೆ ಅದ್ಧೂರಿಯಾಗಿ ನಡೆದಿದ್ದೇನೋ ಸರಿ. ಆದರೆ, ಅರ್ಥಪೂರ್ಣವಾಗಿ ನಡೆಯಲಿಲ್ಲವೆಂಬ ಬೇಸರ ಈಗಲೂ ಹಲವರಲ್ಲಿದೆ.
ಬಹು ಮುಖ್ಯವಾಗಿ ಸಾಹಿತ್ಯ ಸಮ್ಮೇಳನ ಮಕ್ಕಳು ಹಾಗೂ ಯುವ ಜನರನ್ನು ಆಕರ್ಷಿಸುವಂತಿರಬೇಕಿತ್ತು. ಮಕ್ಕಳಿಗೂ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಅವಕಾಶ ಮಾಡಿಕೊಟ್ಟು ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುವಂತಹ ಕಾರ್ಯಕ್ರಮಗಳು ಆಯೋಜನೆಗೊಳ್ಳಬೇಕಿತ್ತು. ಸಾಹಿತಿಗಳು-ಯುವಜನರ ನಡುವೆ ಸಂವಾದ ಏರ್ಪಾಡಾಗಬೇಕಿತ್ತು. ಸಾಹಿತ್ಯದ ಸವಿಯನ್ನು ಇಂದಿನ ಪೀಳಿಗೆಗೆ ಉಣಿಸಿ ಸಾಹಿತ್ಯ ರಚನೆಯತ್ತ ಅವರನ್ನು ಸೆಳೆಯುವ ಪ್ರಯತ್ನಗಳಾಗಬೇಕಿತ್ತು ಎನ್ನುವುದು ಸಾಹಿತ್ಯಾಸಕ್ತರ ಅನಿಸಿಕೆಯಾಗಿದೆ.ಮಂಡ್ಯದ ವಿಶೇಷತೆಗಳು, ವೈಶಿಷ್ಟ್ಯತೆಗಳು, ಕವಿಗಳು, ಸಾಹಿತಿಗಳನ್ನು ಪ್ರತಿಬಿಂಬಿಸಲಿಲ್ಲ. ಶಂಕರಗೌಡ, ಎಸ್.ಸಚ್ಚಿದಾನಂದ, ಬೆಸಗರಹಳ್ಳಿ ರಾಮಣ್ಣ, ಸೀತಾಸುತ, ಎ.ಎನ್.ಮೂರ್ತಿರಾವ್, ಕೆ.ಎಸ್.ನರಸಿಂಹಸ್ವಾಮಿ, ಬಿ.ಎಂ.ಶ್ರೀಕಂಠಯ್ಯ, ಆರ್.ನರಸಿಂಹಾಚಾರ್, ಡಾ.ಹೆಚ್.ಎಲ್.ನಾಗೇಗೌಡ, ಪು.ತಿ.ನರಸಿಂಹಾಚಾರ್ ಅವರ ಭಾವಚಿತ್ರಗಳು ಎಲ್ಲಿಯೂ ಕಂಡುಬರಲೇ ಇಲ್ಲ. ರಾಜಕಾರಣಿಗಳು, ಮುಖಂಡರು, ಬೆಂಬಲಿಗರ ಭಾವಚಿತ್ರಗಳು ಎಲ್ಲೆಡೆ ವಿಜೃಂಭಿಸುತ್ತಿರುವುದು ಕಂಡುಬಂದಿತ್ತು. ಮಂಡ್ಯದ ಹಿರಿಮೆ-ಗರಿಮೆಗಳನ್ನು ರಾಷ್ಟ್ರಮಟ್ಟದಲ್ಲಿ ಪ್ರತಿಬಿಂಬಿಸುವ ಪ್ರಯತ್ನದಲ್ಲಿ ಸಮ್ಮೇಳನ ವಿಫಲವಾಯಿತೆಂಬ ಕೊರಗು ಜಿಲ್ಲೆಯ ಅನೇಕ ಹಿರಿಯ ಸಾಹಿತಿಗಳನ್ನು, ಸಾಹಿತ್ಯಾಭಿಮಾನಿಗಳನ್ನು ಕಾಡುತ್ತಿದೆ..