ಮೈಸೂರು: ಜಿಲ್ಲೆಯ ನಾಲ್ವರು 2023ರ ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ.
ಗ್ರಾಮೀಣ ಭಾಗದ ಎಂ.ಲೇಖನ್, ಪ್ರೌಢಶಾಲಾ ಮುಖ್ಯಶಿಕ್ಷಕ ಎಲ್.ಮಹದೇವ ಹಾಗೂ ಕೆ.ಟಿ.ಶೈಲಜಾ ದಂಪತಿ ಪುತ್ರ. ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಹುಣಸೂರಿನ ರೋಟರಿ ಶಾಲೆಯಲ್ಲಿ ಪಡೆದರು. ಮೂಡುಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ಪಿಯು, ನಂತರ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಮೈಸೂರಿನ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪಡೆದಿದ್ದಾರೆ.
ಪದವಿ ಮುಗಿದ ನಂತರ ಕೆಪಿಎಸ್ಸಿ, ಯುಪಿಎಸ್ಸಿ ಪರೀಕ್ಷೆಗಳಿಗೆ ತಯಾರಿ ನಡೆಸಿದೆ. ಎಲ್ಲಿಯೂ ಕೋಚಿಂಗ್ ಪಡೆದಿಲ್ಲ. ನಿತ್ಯ ಆರು ಗಂಟೆ ಓದುತ್ತಿದ್ದೆ. ನನ್ನೆಲ್ಲಾ ಪ್ರಯತ್ನಗಳಿಗೆ ತಂದೆಯೇ ಸ್ಫೂರ್ತಿ. 2017ರಲ್ಲಿ ತೀರಿಕೊಂಡರು. ಅವರಿದ್ದರೆ ತುಂಬಾ ಖುಷಿ ಪಡುತ್ತಿದ್ದರು ಎಂದರು.ಹೈದರಾಬಾದ್ ನಲ್ಲಿ ಈಗಾಗಲೇ ಐಪಿಎಸ್ ತರಬೇತಿ ಪಡೆಯುತ್ತಿರುವ ಜೆ. ಭಾನುಪ್ರಕಾಶ್ ಬೆಳವಾಡಿಯ ಕೃಷಿಕರಾದ ಜಯರಾಮೇಗೌಡ ಹಾಗೂ ಅಂಗನವಾಡಿ ಶಿಕ್ಷಕಿ ಗಿರಿಜಮ್ಮ ದಂಪತಿ ಪುತ್ರ. ಚಾಮರಾಜನಗರದ ಹೊಂಡರಬಾಳಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ ಶಿಕ್ಷಣ ಪಡೆದರು. ಮಂಡ್ಯ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ಎಂಬಿಬಿಎಸ್ ಮಾಡಿದ್ದಾರೆ.
ಕುಡಕೂರಿನ ಕೆ.ಟಿ. ಮೇಘನಾ ಈಗಾಗಲೇ ಭಾರತೀಯ ಮಾಹಿತಿ ಸೇವೆ (ಇಂಡಿಯನ್ ಇನ್ ಫರ್ಮೇಶನ್ ಸರ್ವೀಸ್) ಅಧಿಕಾರಿಯಾಗಿ ದೆಹಲಿಯಲ್ಲಿದ್ದಾರೆ. ಐಎಎಸ್ ಆಗುವ ಕನಸಿದ್ದು, ರ‍್ಯಾಂಕಿಂಗ್ ಉತ್ತಮ ಪಡೆಸಿಕೊಳ್ಳಲು ಪರೀಕ್ಷೆ ಬರೆಯುತ್ತಿದ್ದಾರೆ.
ಹುಣಸೂರು ತಾಲೂಕಿನ ಗೆಜ್ಜಯ್ಯನ ವಡ್ಡರಗುಡಿಯ ಕೃಷಿಕರಾದ ನಂಜಪ್ಪ ಹಾಗೂ ಸುಂದರಮ್ಮ ದಂಪತಿ ಪುತ್ರಿ ತೇಜಸ್ವಿನಿ, 787ನೇ ರ‍್ಯಾಂಕ್ ಪಡೆದಿದ್ದಾರೆ. ಎಚ್.ಡಿ. ಕೋಟೆ ತಾಲೂಕಿನ ಆಲೇನಹಳ್ಳಿಯ ಯೋಗೇಶ್ ಅವರನ್ನು ವಿವಾಹವಾಗಿದ್ದು, ಅಲ್ಲಿಯೇ ನೆಲೆಸಿದ್ದಾರೆ.