ಅಂಕಸಮುದ್ರ ಪಕ್ಷಿಧಾಮಕ್ಕೆ ಭಾರತ ಜ್ಞಾನ ವಿಜ್ಞಾನ ಸಮಿತಿ ಭೇಟಿ

KannadaprabhaNewsNetwork | Published : Mar 19, 2024 12:58 AM

ಸಾರಾಂಶ

ವಿಶ್ವದಲ್ಲಿ ಅಗ್ರಸ್ಥಾನ ಪಡೆದ ರಾಮ್ಸರ್ ಪಟ್ಟಿಯ ಪಕ್ಷಿಧಾಮಗಳಲ್ಲಿ ಅಂಕಸಮುದ್ರವೂ ಒಂದಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ೨೮೫ಕ್ಕೂ ಹೆಚ್ಚಿನ ಪ್ರಭೇದದ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತವೆ.

ಹಗರಿಬೊಮ್ಮನಹಳ್ಳಿ: ಭಾರತ ಜ್ಞಾನ-ವಿಜ್ಞಾನ ಸಮಿತಿಯ ಹೊಸಪೇಟೆ ತಾಲೂಕು ಘಟಕದವರು ತಾಲೂಕಿನ ಪ್ರಸಿದ್ಧ ಅಂಕಸಮುದ್ರ ಪಕ್ಷಿಧಾಮಕ್ಕೆ ಭೇಟಿ ನೀಡಿ ಪಕ್ಷಿತಜ್ಞರಿಂದ ಮಾಹಿತಿ ಪಡೆಯುವುದರ ಜೊತೆಗೆ ಪಕ್ಷಿಗಳನ್ನು ವೀಕ್ಷಿಸಿದರು.

ಪಕ್ಷಿಪ್ರೇಮಿ ವಿಜಯ್ ಇಟಗಿ ಬೈನಾಕ್ಯುಲರ್‌ ಮೂಲಕ ದೂರದಲ್ಲಿರುವ ಪಕ್ಷಿಗಳನ್ನು ತೋರಿಸಿ ಮಾಹಿತಿ ನೀಡಿದರು. ವಿಶ್ವದಲ್ಲಿ ಅಗ್ರಸ್ಥಾನ ಪಡೆದ ರಾಮ್ಸರ್ ಪಟ್ಟಿಯ ಪಕ್ಷಿಧಾಮಗಳಲ್ಲಿ ಅಂಕಸಮುದ್ರವೂ ಒಂದಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ೨೮೫ಕ್ಕೂ ಹೆಚ್ಚಿನ ಪ್ರಭೇದದ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತವೆ. ಚಳಿಗಾಲದಲ್ಲಿ ಬೇರೆ ದೇಶಗಳಿಂದ ವಿವಿಧ ಹಕ್ಕಿಗಳು ಇಲ್ಲಿಗೆ ವಲಸೆ ಬರುತ್ತವೆ. ಇಲ್ಲಿಯ ಹಕ್ಕಿಗಳು ಮಳೆಗಾಲ ಬಂದಾಗ ಆಸ್ಟ್ರೇಲಿಯಾದಂತಹ ದೇಶಗಳಿಗೆ ವಲಸೆ ಹೋಗುತ್ತವೆ. ಜನವರಿಯಿಂದ ಮಾರ್ಚ್ ತಿಂಗಳವರೆಗೆ ಸಾವಿರಾರು ಫ್ಲೆಮಿಂಗೋ ಪಕ್ಷಿಗಳು ಈ ಪಕ್ಷಿಧಾಮಕ್ಕೆ ಬರುತ್ತವೆ. ಚಳಿಗಾಲದ ವಲಸೆಗಾರ ಹಕ್ಕಿಗಳಾದ ರಾಜಹಂಸಗಳು ಇರಾನ್ ಮತ್ತು ಅಜಾರ್ ಬೈಜಾನ್ ಸರೋವರದಿಂದ ಇಲ್ಲಿಗೆ ವಲಸೆ ಬರುತ್ತವೆ ಎಂದು ತಿಳಿಸಿದರು.ಬ್ಲಾಕ್ ಶೋಲ್ಡರ್ ಕೈಟ್ (ರಾಮದಾಸ ಗಿಡುಗ) ಪಕ್ಷಿಯ ಏಕಾಗ್ರತೆಯ ಕುರಿತು ವಿವರಿಸಿದರು. ಕಣ್ಣಿಗೆ ಕಂಡರೆ ಶುಭ ಸೂಚನೆಯೆಂದು ನಂಬುವ ರತ್ನಪಕ್ಷಿಯ ವಿಶೇಷ ಕಥೆ ತಿಳಿಸಿದರು. ಬೇರೆ ಹಕ್ಕಿಗಳು ಕಟ್ಟಿದ ಗೂಡಿನಲ್ಲಿರುವ ಮೊಟ್ಟೆ, ಹಕ್ಕಿಗಳನ್ನು ಕದ್ದು ತಿನ್ನುವ ಪ್ರಾಣಿ ಇದಾಗಿದೆ ಎನ್ನುವ ಕುತೂಹಲ ಸಂಗತಿಯನ್ನು ಹಂಚಿಕೊಂಡರು. ಮರಳುಭರಿತ ನೆಲದ ಮೇಲೆ ಗೂಡು ಕಟ್ಟುವ ನೀಲಿಬಾಲದ ಕಳ್ಳಿಪೀರ ಹಕ್ಕಿಯ ಬಗ್ಗೆ, ಇತರೆ ಪಕ್ಷಿಗಳ ಕುತೂಹಲಭರಿತ ಬದುಕನ್ನು ವಿಜಯ್ ಇಟಗಿ ಪ್ರವಾಸಿಗರಿಗೆ ತಿಳಿಸಿಕೊಟ್ಟರು.ಡಾ.ಸತೀಶ್ ಪಾಟೀಲ್ ಮಾತನಾಡಿ, ಪಟ್ಟಣದ ಗ್ರೀನ್ ಎಚ್‌ಬಿಎಚ್ ಸಂಸ್ಥೆ ಅಂಕಸಮುದ್ರ ಪಕ್ಷಿಧಾಮ ಅಭಿವೃಧ್ದಿಗೆ ವಿಶೇಷ ಆದ್ಯತೆ ನೀಡಿದ್ದಾರೆ. ಪಕ್ಷಿಧಾಮದಲ್ಲಿ ಇನ್ನಷ್ಟು ನಡುಗಡ್ಡೆಗಳನ್ನು ನಿರ್ಮಿಸುವ ಮೂಲಕ ಪಕ್ಷಿಸಂಕುಲ ಉಳಿಸಬೇಕಿದೆ. ಪರಿಸರಕ್ಕೆ ಸಂಬಂಧಿಸಿದಂತೆ ಜೊತೆಗೆ ಪಕ್ಷಿ ಸಂಕುಲಗಳ ಮಾಹಿತಿಯನ್ನು ಮಕ್ಕಳಿಗೆ ತಲುಪಿಸಿದಾಗ ನಿಮ್ಮ ಒಂದು ದಿನದ ಪ್ರವಾಸ ಸಾರ್ಥಕವಾಗುತ್ತದೆ ಎಂದು ಜ್ಞಾನ ವಿಜ್ಞಾನ ಸಮಿತಿಯಲ್ಲಿ ಇರುವ ಶಿಕ್ಷಕರಿಗೆ ತಿಳಿಸಿದರು.ಪಕ್ಷಿಧಾಮದ ರಕ್ಷಣಾ ಪಡೆಯ ರಾಜು, ಲವ ಮಂಜುನಾಥ ಅವರು ಅಂಕಸಮುದ್ರದ ಪಕ್ಷಿಗಳ ಬಗ್ಗೆ ಮಾಹಿತಿ ನೀಡಿದರು. ಸಮಿತಿಯವರು ತುಂಗಭದ್ರಾ ಅಣೆಕಟ್ಟಿನ ಹಿನ್ನೀರಿನಲ್ಲಿ ಫ್ಲೆಮಿಂಗೋ (ರಾಜಹಂಸ) ಪಕ್ಷಿಗಳ ವೀಕ್ಷಣೆ ಮಾಡಿದರು.

ಪಕ್ಷಿ ವೀಕ್ಷಣೆ ಸಂದರ್ಭದಲ್ಲಿ ಆನಂದಬಾಬು, ಅಶೋಕ್, ಮಂಜಪ್ಪ ಹೊಸೂರು, ಭಾರತ ಜ್ಞಾನ ವಿಜ್ಞಾನ ಸಮಿತಿ ಕಾರ್ಯದರ್ಶಿ ಟಿ.ಎಂ. ಉಷಾರಾಣಿ, ಶಿಕ್ಷಕ ಸಕ್ರಹಳ್ಳಿ ಶಿವಕುಮಾರ, ಹೊಸಪೇಟೆ ತಾಲೂಕಿನ ಆಸಕ್ತ ಶಿಕ್ಷಕ ಶಿಕ್ಷಕಿಯರು ಆಗಮಿಸಿ ಪಕ್ಷಿವೀಕ್ಷಣೆ ಮಾಡಿದರು.

Share this article