ನೆಮ್ಮದಿ ಬದುಕಿಗೆ ಸಾಮರಸ್ಯ ಮುಖ್ಯ : ರಂಭಾಪುರಿ ಶ್ರೀ

KannadaprabhaNewsNetwork | Published : Mar 19, 2024 12:58 AM

ಸಾರಾಂಶ

ಬೆಟ್ಟದಷ್ಟು ಸಂಪತ್ತು ಇದ್ದರೂ ಮನಸ್ಸಿಗೆ ಶಾಂತಿ ಮುಖ್ಯ. ಸಾಮರಸ್ಯ ಬದುಕಿನಿಂದ ಜೀವನದಲ್ಲಿ ಶಾಂತಿ ನೆಮ್ಮದಿ ಪ್ರಾಪ್ತ ವಾಗುವುದೆಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಹೇಳಿದರು.

ರಂಭಾಪುರಿ ಪೀಠದಲ್ಲಿ ಜಾತ್ರಾ ಮಹೋತ್ಸವ ಪೂರ್ವಭಾವಿಯಾಗಿ ಸೋಮವಾರ ನಡೆದ ಧರ್ಮ ಸಮಾರಂಭ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಬೆಟ್ಟದಷ್ಟು ಸಂಪತ್ತು ಇದ್ದರೂ ಮನಸ್ಸಿಗೆ ಶಾಂತಿ ಮುಖ್ಯ. ಸಾಮರಸ್ಯ ಬದುಕಿನಿಂದ ಜೀವನದಲ್ಲಿ ಶಾಂತಿ ನೆಮ್ಮದಿ ಪ್ರಾಪ್ತ ವಾಗುವುದೆಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಹೇಳಿದರು.

ರಂಭಾಪುರಿ ಪೀಠದಲ್ಲಿ ಜಾತ್ರಾ ಮಹೋತ್ಸವ ಪೂರ್ವಭಾವಿಯಾಗಿ ಸೋಮವಾರ ನಡೆದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಭಾರತೀಯ ಸಂಸ್ಕೃತಿಯಲ್ಲಿ ಸಂಸ್ಕಾರ ಮತ್ತು ಧರ್ಮಾಚರಣೆಗೆ ಬಹಳಷ್ಟು ಪ್ರಾಮುಖ್ಯತೆ ಕೊಟ್ಟಿದೆ. ಭಾರತೀಯ ಉತ್ಕೃಷ್ಟ ಸಂಸ್ಕೃತಿ ಸಂವರ್ಧನೆಗೆ ಮಹಿಳೆಯರ ಕೊಡುಗೆ ಅಪಾರ. ಒಬ್ಬ ಮಹಿಳೆ ಸಂಸ್ಕಾರ ವಂತಳಾಗಿ ಬಾಳಿದರೆ ಇಡೀ ಕುಟುಂಬ ಸುಸಂಸ್ಕೃತವಾಗಿ ಬಾಳಲು ಸಾಧ್ಯವಾಗುತ್ತದೆ. ಆದರ್ಶ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅತ್ಯಂತ ಜವಾಬ್ದಾರಿಯುತವಾದುದು. ತಾಯಿಯಾಗಿ, ಸಹೋದರಿಯಾಗಿ, ಸೊಸೆಯಾಗಿ ಮತ್ತು ಪತಿಗೆ ಸತಿಯಾಗಿ ವಿವಿಧ ಪಾತ್ರದಲ್ಲಿ ಶ್ರಮಿಸುತ್ತಿರುವುದನ್ನು ಮರೆಯಲಾಗದು. ಒಂದು ಹೆಣ್ಣಿನಲ್ಲಿ ಆರು ಸದ್ಗುಣಗಳಿರಬೇಕೆಂದು ಧರ್ಮ ಶಾಸ್ತ್ರ ಹೇಳುತ್ತದೆ. ಕೆಲಸ ಕಾರ್ಯಗಳಲ್ಲಿ ದಾಸಿ ಯಾಗಿ ಸಲಹೆ ಕೊಡುವಲ್ಲಿ ಮಂತ್ರಿಯಾಗಿ, ರೂಪದಲ್ಲಿ ಲಕ್ಷ್ಮಿಯಾಗಿ, ಕ್ಷಮೆಯಲ್ಲಿ ಭೂ ತಾಯಿಯಾಗಿ, ಊಟ ಮಾಡಿಸುವಾಗ ತಾಯಿಯಾಗಿ ಮತ್ತು ಸಂಸಾರಿಕ ಜೀವನದಲ್ಲಿ ಗಂಡನ ಇಚ್ಛೆಯಂತೆ ಬಾಳುವ ಸದ್ಗುಣಗಳಿದ್ದರೆ ಆ ಮನೆತನ ಬಹು ಬೇಗ ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಪುರುಷರಷ್ಟೇ ಮಹಿಳೆಯರಿಗೂ ಸಮಾನ ಧರ್ಮ ಪರಿಪಾಲಿಸುವ ಅವಕಾಶ ಕಲ್ಪಿಸಿ ಕೊಟ್ಟಿದ್ದನ್ನು ಮರೆಯಲಾಗದು ಎಂದರು.

ಇದೇ ಸಂದರ್ಭದಲ್ಲಿ ಆದರ್ಶ ಗೃಹಸ್ಥ ಜೀವನ ಹೊಂದಿ ಸಾರ್ಥಕ ಬದುಕನ್ನು ಕಟ್ಟಿಕೊಂಡ ಚಿಕ್ಕಮಗಳೂರಿನ ಎ.ಎಸ್. ಗುರುಕಾಂತಾರಾಧ್ಯ ದಂಪತಿಗೆ ಗುರು ಕಾರುಣ್ಯ ಸೇವಾ ಸಿಂಧು ಪ್ರಶಸ್ತಿ ನೀಡಿ ಜಗದ್ಗುರುಗಳು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ 15 ಜನ ಜಂಗಮ ವಟುಗಳಿಗೆ ಶಿವದೀಕ್ಷಾ ಅಯ್ಯಾಚಾರವನ್ನು ಬೇರುಗಂಡಿ ಬೃಹನ್ಮಠದ ರೇಣುಕ ಮಹಂತ ಶಿವಾಚಾರ್ಯ ಸ್ವಾಮಿ ಮಂತ್ರೋಪದೇಶ ಮಾಡಿದರು. ಹುಲಿಕೆರೆ ದೊಡ್ಡಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿ, ಶಂಕರದೇವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿ, ಬೀರೂರು ರಂಭಾಪುರಿ ಶಾಖಾ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮಿ ಮತ್ತು ಬೇರುಗಂಡಿ ಬೃಹನ್ಮಠದ ರೇಣುಕ ಮಹಂತ ಶಿವಾಚಾರ್ಯ ಸ್ವಾಮಿ ವೀರಶೈವ ಧರ್ಮ, ಗುರು ಕೊಟ್ಟ ಸಂಸ್ಕಾರದ ಬಗೆಗೆ ಉಪದೇಶಾಮೃತ ನೀಡಿದರು. ಹಾಸನದ ವೇ.ದೇವರಾಜು ಶಾಸ್ತಿç ಮತ್ತು ತಂಡದವರಿಂದ ಪೂಜಾ ಕಾರ್ಯಗಳು ನಡೆಯಿತು.ಬೆಂಗಳೂರಿನ ಜಗದ್ಗುರು ರೇಣುಕಾಚಾರ್ಯ ವಿದ್ಯಾ ಸಂಸ್ಥೆ ಅಧ್ಯಕ್ಷ ಯು.ಎಂ.ಬಸವರಾಜ್, ಎ.ಎಸ್.ಶಿವಕಾಂತಾರಾಧ್ಯರು, ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಂ.ಲೋಕೇಶ್, ಚಿಕ್ಕಮಗಳೂರಿನ ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಸಮಿತಿ ಅಧ್ಯಕ್ಷ ವೀರಭದ್ರಯ್ಯ, ಹಿರಿಯ ಪತ್ರಕರ್ತ ಪ್ರಭುಲಿಂಗ ಶಾಸ್ತಿç, ಎಂಜನಿಯರ್ ದಕ್ಷಿಣಾಮೂರ್ತಿ, ಶೈಲಾ ಬಸವರಾಜ, ಶ್ರೀಕಾಂತ ಹಾಜರಿದ್ದರು.೧೮ಬಿಹೆಚ್‌ಆರ್ ೩:

ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಪೂರ್ವಭಾವಿ ಧರ್ಮ ಸಮಾರಂಭವನ್ನು ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಉದ್ಘಾಟಿಸಿದರು.

Share this article