ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಪಿಡಿಜೆ ಪದವಿ ಪೂರ್ವ ಮಹಾವಿದ್ಯಾಲಯದ ಮಾಧ್ಯಮಿಕ ವಿಭಾಗದಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಬಾಹ್ಯಾಕಾಶ ವಿಜ್ಞಾನದಲ್ಲಿ ಜಗತ್ತನ್ನು ಬೆರಗುಗೊಳಿಸುತ್ತಿದೆ ಹಾಗಾಗಿ ವಿದ್ಯಾರ್ಥಿಗಳಿಗೆ ಖಗೋಳ ವಿಜ್ಞಾನದಲ್ಲಿ ಅನೇಕ ಅವಕಾಶಗಳಿವೆ ಅವುಗಳನ್ನು ಸದುಪಯೋಗ ಮಾಡಿಕೊಂಡು ಉನ್ನತ ಸಾಧನೆ ಮಾಡಿ ದೇಶಕ್ಕೆ ನಮ್ಮ ಸೇವೆಯನ್ನು ಸಮರ್ಪಿಸಬೇಕು ಎಂದರು.
ಇದು ಸಮಾನ್ಯ ಸಾಧನೆ ಅಲ್ಲ. ಇಂದು ಇಸ್ರೋ ಅನೇಕ ದಾಖಲೆಗಳನ್ನು ಬರೆಯುತ್ತಿದೆ. ಖಗೋಳ ವಿಜ್ಞಾನದಲ್ಲಿ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿವೆ. ದೇಶದಲ್ಲಿ ಅವಕಾಶಗಳಿಗೇನು ಕೊರತೆ ಇಲ್ಲ ಕೌಶಲ್ಯ ಇರಬೇಕು ಅಷ್ಟೇ ಎಂದು ತಿಳಿಸಿದರು.ದೇಶಕ್ಕೆ ನಾವು ಏನನ್ನಾದರೂ ಕೊಡುಗೆ ನೀಡಬೇಕು. ಸಾಧನೆ ಹಾದಿ ಯಾವತ್ತಿಗೂ ಕಠಿಣವಾಗಿಯೇ ಇರುತ್ತದೆ. ಯುವ ಮಿತ್ರರು ದೇಶದ ಕನಸನ್ನು ನನಸುಗೊಳಿಸುವುದರೊಂದಿಗೆ ತಮ್ಮ ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ. ಭಾರತ ಅಪರೂಪದ ಸನಾತನ ಸಂಸ್ಕೃತಿಯ ಆಗರ. ಈ ನೆಲದ ಮಣ್ಣು ಅತ್ಯಂತ ಪವಿತ್ರ ಅಂತೆಯೇ ವಿವೇಕಾನಂದರಂತಹ ಅಧ್ಯಾತ್ಮ ಸಾಧಕರು, ಸುಭಾಷಚಂದ್ರ ಬೋಸ್‌ರಂತಹ ವೀರದೇಶಭಕ್ತರು, ಅಬ್ದುಲ್ ಕಲಾಮರಂತಹ ವಿಜ್ಞಾನಿ ಹಾಗೂ ರಾಷ್ಟ್ರಪತಿಗಳು ಇಲ್ಲಿ ಜನ್ಮ ತಾಳಿದ್ದಾರೆ ಎಂದು ತಿಳಿಸಿದರು.ದೇಶದ ಮಹಾನ್ ಸಾಧಕರೆಲ್ಲ ಹೆತ್ತತಾಯಿ ಹೊತ್ತನಾಡು, ಸ್ವರ್ಗಕ್ಕಿಂತ ಮಿಗಿಲೆಂಬ ರೀತಿಯಲ್ಲಿ ಬಾಳಿ ನಮಗೆ ಬೆಳಕು ನೀಡಿ ಆದರ್ಶವಾಗಿದ್ದಾರೆ. ಭಾರತದಲ್ಲಿ ಜನಿಸುವುದೇ ಒಂದು ಪುಣ್ಯ. ಹಾಗಾಗಿ ಸಮೃದ್ಧ ಭಾರತದ ಪ್ರಜೆಗಳಾಗಿ ಜನಿಸಿದ ನಾವು ಹೆಮ್ಮಯಿಂದ ಇಲ್ಲಿಯ ಸಂಸ್ಕ್ರತಿ ಪರಂಪರೆ ಅರಿತು ಆಚರಿಸಬೇಕು ಎಂದರು.
ಬಿಡಿಇ ಸಂಸ್ಥೆಯ ಅಧ್ಯಕ್ಷ ಕೆ.ಬಿ.ಕುಲಕರ್ಣಿ ಮಾತನಾಡಿ, ಒಂದು ಮಗು ಜಗದ ಜ್ಯೋತಿಯಾಗಿ ಬೆಳಗಬೇಕಾದರೆ, ಮಕ್ಕಳ ವ್ಯಕ್ತಿತ್ವದ ಬೆಳವಣಿಗೆಗೆ ಶಿಕ್ಷಕರು ಪ್ರಯತ್ನಿಸಬೇಕು, ಪಾಲಕರು ಸಹಕರಿಸಬೇಕು, ಮಕ್ಕಳಲ್ಲಿ ಮಾನವೀಯ ಮೌಲ್ಯಗಳು ಸ್ಥಾಪಿತವಾಗಬೇಕು. ಆಗ ಮಾತ್ರ ಮಕ್ಕಳ ಭವಿಷ್ಯದ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.