ಯುವ ಜನಾಂಗವನ್ನು ದೇಶದ ಸಂಪತ್ತಿಗಾಗಿ ಯುವಜನತೆ ಬೆಳೆಸುವ ಭಾರತ ಸೇವಾದಳ ಸಹಕಾರಿ : ಡಾ.ಅಶೋಕ ಜಾಧವ

KannadaprabhaNewsNetwork | Updated : Jul 18 2024, 11:18 AM IST

ಸಾರಾಂಶ

ಶಿಸ್ತು, ಪ್ರಾಮಾಣಿಕತೆಯೊಂದಿಗೆ ಇಂದಿನ ಯುವ ಜನಾಂಗವನ್ನು ದೇಶದ ಸಂಪತ್ತಿಗಾಗಿ ಬೆಳೆಸುವಲ್ಲಿ ಭಾರತ ಸೇವಾದಳ ಸಹಕಾರಿಯಾಗಿದೆ ಎಂದು ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ, ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ 2024ರ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಡಾ.ಅಶೋಕ ಜಾಧವ ಹೇಳಿದರು.

ವಿಜಯಪುರ :  ಶಿಸ್ತು, ಪ್ರಾಮಾಣಿಕತೆಯೊಂದಿಗೆ ಇಂದಿನ ಯುವ ಜನಾಂಗವನ್ನು ದೇಶದ ಸಂಪತ್ತಿಗಾಗಿ ಬೆಳೆಸುವಲ್ಲಿ ಭಾರತ ಸೇವಾದಳ ಸಹಕಾರಿಯಾಗಿದೆ ಎಂದು ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ, ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ 2024ರ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಡಾ.ಅಶೋಕ ಜಾಧವ ಹೇಳಿದರು.

ಭಾರತೀಯ ಜಿಲ್ಲಾ ಸಮಿತಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಗರದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆ 24ರಲ್ಲಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಿಗಾಗಿ ಆಯೋಜಿಸಲಾದ ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರಧ್ವಜ ಹಾಗೂ ಭಾರತ ಸೇವಾದಳ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಭಾವೈಕ್ಯತೆ ಮನೋಭಾವ ಬೆಳೆಸಿ ಅವರನ್ನು ಭಾರತದ ಆದರ್ಶ ನಾಗರಿಕರನ್ನಾಗಿ ಮಾಡಲು ಭಾರತ ಸೇವಾದಳ ಶ್ರಮಿಸುತ್ತಿದೆ. 

ಗಾಂಧೀಜಿಯವರ ತತ್ವ ಆದರ್ಶಗಳನ್ನು ಮುಂದಿಟ್ಟುಕೊಂಡು ಧೈರ್ಯ, ಸಂಯಮ, ತ್ಯಾಗ ಮನೋಭಾವನೆ ವಿದ್ಯಾರ್ಥಿಗಳಲ್ಲಿ ಬೆಳೆಸುವ ಕೆಲಸವನ್ನು ಭಾರತ ಸೇವಾದಳ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಸುವಿಧಾ ಸಂಸ್ಥೆಯ ಅಧ್ಯಕ್ಷ ಫಯಾಜ್ ಕಲಾದಗಿ ಮಾತನಾಡಿ, ಭಾರತ ಸೇವಾದಳದಿಂದ ಒಗ್ಗಟ್ಟು ಪ್ರದರ್ಶನ ಸಾಧ್ಯವಿದೆ. ಜನರಲ್ಲಿ ದೇಶಭಕ್ತಿ ಮೂಡಿಸುವ ಸಲುವಾಗಿ ಹುಟ್ಟಿಕೊಂಡ ಸಂಘಟನೆ ಇದಾಗಿದೆ. 

ಇಲ್ಲಿ ಯಾವುದೇ ರಾಜಕೀಯ ಇಲ್ಲದೆ ಅಚ್ಚುಕಟ್ಟಾಗಿ ನಡೆಯುತ್ತಿದೆ. ಪ್ರತಿ ಶಾಲಾ ಕಾಲೇಜುಗಳಲ್ಲಿ ಒಗ್ಗಟ್ಟಿನ ಭಾವನೆ ಮೂಡಿಸಲು ದೇಶದ ಇತಿಹಾಸ ತಿಳಿಸುವ ಕೆಲಸ ಸಂಘಟನೆಯಿಂದ ಆಗಬೇಕಾಗಿದೆ ಎಂದು ತಿಳಿಸಿದರು.ರಾಷ್ಟ್ರದ ಹಿತಾಸಕ್ತಿಗಾಗಿ ಸಂಘಟನೆಗಳ ಅವಶ್ಯಕತೆ ಇದೆ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಮೂಲಕ ಭಾವೈಕ್ಯತೆ ಹುಟ್ಟಿ ಹಾಕುವ ಕೆಲಸವನ್ನು ಭಾರತ ಸೇವಾದಳ ಮಾಡುತ್ತಿದೆ. ರಾಷ್ಟ್ರಭಕ್ತಿ ರಾಷ್ಟ್ರ ಪ್ರೇಮವನ್ನು ಜೀವನದಲ್ಲಿ ಬೆಳೆಸಿಕೊಳ್ಳುವ ಮೂಲಕ ದೇಶಕ್ಕಾಗಿ ನಾನೇನು ಕೊಡಬಲ್ಲೆ ಎನ್ನುವುದು ಮುಖ್ಯವಾಗಬೇಕು ಎಂದು ಕಿವಿಮಾತು ಹೇಳಿದರು.

ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಎಸ್.ಪಿ.ಬಿರಾದಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದುಸ್ತಾನಿ ಸೇವಾದಳವನ್ನು ಭಾರತ ಸೇವಾದಳವನ್ನಾಗಿ ಪರಿವರ್ತಿಸಿದವರು ನಾ.ಸು.ಹರ್ಡೀಕರ್. ಭಾವೈಕ್ಯತೆ ರ್‍ಯಾಲಿಗಳಂತಹ ಹಲವು ಸೇವಾ ಕಾರ್ಯಕ್ರಮಗಳನ್ನು ಭಾರತ ಸೇವಾದಳದ ಮೂಲಕ ಹಮ್ಮಿಕೊಂಡು ಮಕ್ಕಳಲ್ಲಿ ಶಿಸ್ತು, ತ್ಯಾಗ ಮನೋಭಾವ, ಧೈರ್ಯದಂತಹ ಗುಣಗಳನ್ನು ಬೆಳೆಸುವ ಕೆಲಸ ಸೇವಾದಳದಿಂದ ಆಗುತ್ತಿದೆ. 

ನಾವೆಲ್ಲರೂ ದೇಶಕ್ಕಾಗಿ ಎಂಬ ಘೋಷಣೆಯೊಂದಿಗೆ ಭಾರತ ಸೇವಾದಳ ಇನ್ನಷ್ಟು ಎತ್ತರಕ್ಕೆ ಬೆಳೆಯುವಲ್ಲಿ ನಾವೆಲ್ಲರೂ ಕೈಜೋಡಿಸೋಣ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಸಾಧಿಕ್ ಜಾನವೇಕರ, ಶಾಲಾ ಮುಖ್ಯಗುರು ವಿ.ಆರ್.ಹಾಲವರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವಲಯ ಸಂಘಟಿಕ ನಾಗೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಸಂಪನ್ಮೂಲ ಶಿಕ್ಷಕ ಸೋಮಶೇಖರ ರಾಠೋಡ ಕಾರ್ಯಕ್ರಮ ನಿರೂಪಿಸಿದರು. ಎಸ್.ಎಲ್.ರಾಠೋಡ ವಂದಿಸಿದರು. 50 ಜನ ಉಪನ್ಯಾಸಕರು ಭಾಗವಹಿಸಿದ್ದರು.

ಯುವ ಜನಾಂಗವನ್ನು ಈ ದೇಶದ ಸಂಪತ್ತಾಗಿ ಮಾಡುವಲ್ಲಿ ಸೇವಾದಳದ ಕಾರ್ಯ ಶ್ಲಾಘನೀಯ. ಜೀವನದಲ್ಲಿ ಯಶಸ್ಸು ಸಿಗಬೇಕಾದರೇ ನಮ್ಮಲ್ಲಿ ಪರಿಶ್ರಮ ಮತ್ತು ಪ್ರಯತ್ನ ಇರಲೇಬೇಕು. ಈ ನಿಟ್ಟಿನಲ್ಲಿ ಭಾರತ್ ಸೇವಾದಳವು ನಮಗೆ ಶಿಸ್ತು, ಸಂಯಮ, ತ್ಯಾಗದೊಂದಿಗೆ ಪರಿಶ್ರಮ ಮತ್ತು ಪ್ರಯತ್ನವನ್ನು ಕಲಿಸುತ್ತದೆ.

-ಡಾ.ಅಶೋಕ ಜಾಧವ, ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ 2024ರ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತರು.

Share this article