ಭರತನಾಟ್ಯ ಯುವ ಕಲಾವಿದೆ ಸ್ನೇಹಶ್ರೀ ಹೆಗಡೆ ರಂಗಪ್ರವೇಶ

KannadaprabhaNewsNetwork | Published : Oct 23, 2024 12:49 AM

ಸಾರಾಂಶ

ರಂಗಪ್ರವೇಶದ ನಾಟ್ಯದಲ್ಲಿ ಪುಷ್ಪಾಂಜಲಿ, ಅಲ್ಲಾರಿಪು, ಶಬ್ದಂ, ವರ್ಣ, ಶಿವಸ್ತುತಿ, ಸಹಿತ ವಿವಿಧ ನೃತ್ಯ ಪ್ರಕಾರ ಪ್ರಸ್ತುತಗೊಳಿಸಿ ಜನಮೆಚ್ಚುಗೆ ಗಳಿಸಿದಳು. ರಾಮನ ಕುರಿತ ಭಜನೆ ಪ್ರಸ್ತುತಗೊಳಿಸಿ ಭಾವಾಭಿನಯದಲ್ಲಿ ಸ್ನೇಹಶ್ರೀ ಗಮನ ಸೆಳೆದಳು.

ಶಿರಸಿ: ಭರತನಾಟ್ಯ ಯುವ ಕಲಾವಿದೆ ಸ್ನೇಹಶ್ರೀ ಹೆಗಡೆ ರಂಗಪ್ರವೇಶ ಕಾರ್ಯಕ್ರಮ ಮೈತ್ರೇಯಿ ಕಲಾ ಟ್ರಸ್ಟ್ ನೇತೃತ್ವದಲ್ಲಿ ನಗರದ ರಂಗಧಾಮದಲ್ಲಿ ಸೋಮವಾರ ಅರ್ಥಪೂರ್ಣವಾಗಿ ನಡೆಯಿತು.ನಟರಾಜನ ಪೂಜೆ ಬಳಿಕ ಗೆಜ್ಜೆಯನ್ನು ಗುರುವಿನಿಂದ ಪಡೆದ ಕಲಾವಿದೆ ಸ್ನೇಹಶ್ರೀ ಹೆಗಡೆ, ಗುರು, ವಿದುಷಿ ಸೌಮ್ಯ ಹೆಗಡೆ ಅವರನ್ನು ಗೌರವಿಸಿ ಗುರುವಂದನೆ ಕೂಡ ಸಲ್ಲಿಸಿ, ಧನ್ಯತಾಭಾವ ಅನುಭವಿಸಿದರು. ಹಾಡುಗಾರಿಕೆಯಲ್ಲಿ ಶ್ರೀಕಾಂತ್ ಗೋಪಾಲಕೃಷ್ಣನ್, ನಟುವಾಂಗದಲ್ಲಿ ಸೌಮ್ಯ ಪ್ರದೀಪ ಹೆಗಡೆ, ವಯಲಿನ್‌ನಲ್ಲಿ ಮತ್ತೂರ ಶ್ರೀನಿಧಿ, ಮೃದಂಗ ತುಮಕೂರು ಬಿ. ಶಶಿಶಂಕರ, ಕೊಳಲು ಶಶಾಂಕ್ ಜೋಡಿದಾರ್ ಸಹಕರಿಸಿದರು.ರಂಗಪ್ರವೇಶದ ನಾಟ್ಯದಲ್ಲಿ ಪುಷ್ಪಾಂಜಲಿ, ಅಲ್ಲಾರಿಪು, ಶಬ್ದಂ, ವರ್ಣ, ಶಿವಸ್ತುತಿ, ಸಹಿತ ವಿವಿಧ ನೃತ್ಯ ಪ್ರಕಾರ ಪ್ರಸ್ತುತಗೊಳಿಸಿ ಜನಮೆಚ್ಚುಗೆ ಗಳಿಸಿದಳು. ರಾಮನ ಕುರಿತ ಭಜನೆ ಪ್ರಸ್ತುತಗೊಳಿಸಿ ಭಾವಾಭಿನಯದಲ್ಲಿ ಸ್ನೇಹಶ್ರೀ ಗಮನ ಸೆಳೆದಳು.ಬಳಿಕ ನಡೆದ ಸಮಾರಂಭದಲ್ಲಿ ಶಿರಸಿ ನಟರಾಜ ನೃತ್ಯ ಶಾಲೆಯ ನೃತ್ಯಗುರು ಸೀಮಾ ಭಾಗವತ್ ಮಾತನಾಡಿ, ಕಲಾವಿದನ ಆರಂಭದ ಹೆಜ್ಜೆ ರಂಗಪ್ರವೇಶ. ರಂಗಪ್ರವೇಶ ಆದ ಬಳಿಕ ವಿದುಷಿ ಪಟ್ಟ ಪಡೆಯಬೇಕು. ಆ ನಿಟ್ಟಿನಲ್ಲಿ ಸ್ನೇಹಾಶ್ರೀ ಮುನ್ನೆಡಯಲಿ ಎಂದರು.ಗುರುವಂದನೆ ಸ್ವೀಕರಿಸಿದ ನೃತ್ಯಗುರು ಸೌಮ್ಯ ಹೆಗಡೆ, ಗುರುವಿನ ಮೂಲಕ ಕಲಿತರೆ ಅದಕ್ಕೆ ಬದ್ಧತೆ ಇರುತ್ತದೆ. ರಂಗ ಪ್ರವೇಶ ಮಾಡಿದರೆ ಅದೇ ಗುರುವಂದನೆ. ಸರಳವಾಗಿ ಕೂಡ ಗುರುವಂದನೆ ಮಾಡಬಹುದು. ಗುರು ಶಿಷ್ಯ ಪರಂಪರೆ ಉಳಿಯಬೇಕು ಎಂದರು.ಸಾಗರದ ಶ್ರೀಸದ್ಗುರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವಿದ್ಯಾಲಯದ ವಸುಧಾ ಶರ್ಮಾ, ಚಿತ್ರದುರ್ಗದ ಲಾಸಿಕಾ ಫೌಂಡೇಶನ್‌ನ ಶ್ವೇತಾ ಭಟ್ ಮಾತನಾಡಿದರು. ಇದೇ ವೇಳೆ ಯಕ್ಷಗಾನ ಗುರು ನಿರ್ಮಲಾ ಹೆಗಡೆ, ಭರತನಾಟ್ಯ ಸಂಪದಾ ಮರಾಠೆ, ಕೃಷ್ಣ ಭಾಗವತ ಅವರನ್ನೂ ಗೌರವಿಸಲಾಯಿತು.ಸಂಘಟಕ ದತ್ತಾತ್ರೇಯ ಹೆಗಡೆ, ಬಿಂದು ಹೆಗಡೆ ಮತ್ತಿತರರು ಇದ್ದರು. ಪ್ರಶಾಂತ ಮೂಡಲಮನೆ ನಿರೂಪಿಸಿದರು. ತನ್ನ ಆರನೇ ವಯಸ್ಸಿನಿಂದಲೇ ಭರತನಾಟ್ಯ ಕಲಿಕೆಯಲ್ಲಿ ತೊಡಗಿಸಿಕೊಂಡ ಸ್ನೇಹಶ್ರೀ ಹೆಗಡೆ ಭರತನಾಟ್ಯ ವಿದ್ವತ್ ಪೂರ್ವ ಪರೀಕ್ಷೆಯನ್ನು ಪೂರೈಸಿದ್ದು, ಪ್ರಸ್ತುತ ವಿದ್ವತನ್ನು ಸೌಮ್ಯ ಪ್ರದೀಪ ಹೆಗಡೆ ಅವರಲ್ಲಿ ಅಭ್ಯಸಿಸುತ್ತಿದ್ದಾಳೆ.

ಬಸ್ ನಿಲ್ದಾಣಕ್ಕೆ ಮಯೂರ ವರ್ಮ ಹೆಸರಿಡಲು ಆಗ್ರಹ

ಶಿರಸಿ: ನಗರದ ನೂತನವಾಗಿ ನಿರ್ಮಾಣ ಮಾಡಲಾಗಿರುವ ಕೇಂದ್ರ ಬಸ್ ನಿಲ್ದಾಣಕ್ಕೆ(ಹಳೆ ಬಸ್ ನಿಲ್ದಾಣ) ಮಯೂರ ವರ್ಮ ಹೆಸರನ್ನು ಇಡಬೇಕು ಎಂದು ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಆಗ್ರಹಿದರು.ನಗರದ ಸಹಾಯಕ ಆಯುಕ್ತರ ಕಚೇರಿಗೆ ತೆರಳಿದ ಕನ್ನಡಪರ ಸಂಘಟನೆಯ ನವೀನ್ ರೇಣಕರ್ ತಂಡ, ನಾವು ಕನ್ನಡಿಗರು ಸಂಘಟನೆ, ವಾಟಾಳ್ ಕನ್ನಡ ಸಂಘ ಹಾಗೂ ರೆಡ್ ಆ್ಯಂಡ್ ತಂಡದವರು ಸೋಮವಾರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಕನ್ನಡಿಗರನ್ನು ಪರಕೀಯರ ಆಳ್ವಿಕೆಯಿಂದ ಮುಕ್ತಗೊಳಿಸಿ ಕನ್ನಡದ ಮೊದಲ ಸಾಮ್ರಾಜ್ಯವನ್ನು ಸ್ಥಾಪಿಸಿ, ಕನ್ನಡವನ್ನು ಮೊಟ್ಟ ಮೊದಲ ಬಾರಿಗೆ ಆಡಳಿತ ಭಾಷೆಯನ್ನಾಗಿಸಿದ ಕೀರ್ತಿ ಕನ್ನಡದ ಮೊದಲ ರಾಜ ಕನ್ನಡ ಕುಲ ತಿಲಕ, ಕನ್ನಡಿಗರ ಸ್ವಾಭಿಮಾನದ ಸಂಕೇತ ರಾಜಾ ಮಯೂರ ವರ್ಮಾರಿಗೆ ಸಲ್ಲುತ್ತದೆ.

ಕನ್ನಡಿಗರ ಮೊದಲ ರಾಜಧಾನಿಯಾಗಿ ಮೆರೆದ ಬನವಾಸಿಯ ತಾಲೂಕು ಕೇಂದ್ರವಾದ ಶಿರಸಿ ನಗರದ ಮುಖ್ಯ ಭಾಗದಲ್ಲಿ ನವೀಕೃತಗೊಂಡಿರುವ ಹಳೆ ಬಸ್ ನಿಲ್ದಾಣಕ್ಕೆ(ಕೇಂದ್ರ ಬಸ್ ನಿಲ್ದಾಣ) ರಾಜ ಮಯೂರ ವರ್ಮ ಅವರ ಹೆಸರನ್ನು ಇಡುವ ಮೂಲಕ ಕನ್ನಡಿಗಳ ಮಹಾನ್ ಪೂರ್ವಜರನ್ನು ಹಾಗೂ ಕನ್ನಡಿಗರ ಭವ್ಯ ಇತಿಹಾಸವನ್ನು ಇಂದಿನ ಮತ್ತು ಮುಂದಿನ ಪೀಳಿಗೆಗೆ ಸಾರಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.ಈ ವೇಳೆ ಸಂಘಟನೆಗಳ ಪ್ರಮುಖರಾದ ನವೀನ್ ರೇವಣಕರ್, ಗಣೇಶ ಭಟ್ ಉಪ್ಪೋಣಿ, ಮಹೇಶ ನಾಯ್ಕ, ಹರೀಶ ನಾಯ್ಕ, ಸಂತೋಷ ನಾಯ್ಕ ಇತರರು ಇದ್ದರು.

Share this article