ಕನ್ನಡಪ್ರಭ ವಾರ್ತೆ ಅಫಜಲ್ಪುರ
ಬೆಳೆಗೆ ಕೀಟ ಬಾಧೆಯಿಂದ ತಪ್ಪಿಸಲು ಔಷಧ ಸಿಂಪಡಿಸಿದರೂ ಕೂಡ ಕೀಟ ನಿಯಂತ್ರಣದ ಪ್ರಯತ್ನಗಳು ಫಲಪ್ರದವಾಗುತ್ತಿಲ್ಲ ಎಂದು ರೈತರು ಹೇಳುತ್ತಿದ್ದಾರೆ. ಇದರಿಂದ ಬೆಳೆ ಹಾನಿ ತಡೆಯಲು ಕೈಗೊಂಡ ಕ್ರಮಗಳು ವಿಫಲವಾಗಿರುವುದರಿಂದ ರೈತರಿಗೆ ಆರ್ಥಿಕ ನಷ್ಟದ ದಿನಗಳು ಎದುರಾಗುತ್ತಿವೆ.
ಪಟ್ಟಣ ಸೇರಿದಂತೆ ತಾಲೂಕಿನ ಕರಜಗಿ ಅಫಜಲ್ಪುರ ಅತನೂರ ಗೊಬ್ಬೂರ ವಲಯಗಳಲ್ಲಿ ತೊಗರಿ ಬೆಳೆ ಮಳೆಯಿಂದ ಅಲ್ಲಲ್ಲಿ ಕೊಂಚ ಹಾನಿಯಾದರೆ ಉಳಿದವರಿಗೆ ಬಂಪರ್ ಬೆಳೆ ಬಂದಿದೆ. ಆದರೆ ಕೀಟಗಳ ಹಾವಳಿಯಿಂದ ದುಬಾರಿ ವೆಚ್ಚದ ಔಷಧ ಸಿಂಪಡಣೆ ಹಾಗೂ ಕೂಲಿಯಾಳುಳಿಗೆ ರೈತ ತತ್ತರಿಸುವಂತೆ ಮಾಡಿದೆ.ಬೆಳೆ ಬಂಪರ್ ಬಂದರೂ ನಿರ್ವಹಣೆ, ಬಿತ್ತನೆ ಖರ್ಚು, ರಾಶಿ ಸೇರಿದಂತೆ ದುಬಾರಿ ವೆಚ್ಚದಿಂದ ಕೈಗೆ ಹಣ ಬರುತ್ತಿಲ್ಲ. ಹವಾಮಾನ ವೈಪರೀತ್ಯ ಇಳುವರಿ ಕುಂಠಿತ ಮತ್ತು ಕೀಟಬಾಧೆಯಿಂದ ಉತ್ಪಾದನೆಯಲ್ಲಿ ಕಡಿಮೆಯಾದರೆ ರೈತ ಬರಿಗೈಯಿಂದಲೇ ಮನೆಗೆ ತೆರಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಾಲೂಕಿನ ಮಣ್ಣೂರ ಗ್ರಾಮದ ರೈತರಾದ ಸಂತೋಷ ಅಲ್ಲಾಪೂರ, ಶಾಂತಪ್ಪ ವಾಯಿ ಮಲಕಪ್ಪ ಕರಜಗಿ ಮಹ್ಮದಕರಿಂ ಮಂಗಲಗಿರಿ ತಮ್ಮ ಅಳಲು ತೋಡಿಕೊಂಡರು.