ಕನ್ನಡಪ್ರಭ ವಾರ್ತೆ ಪಾಂಡವಪುರ
ಭಾರತೀಯ ಕಿಸಾನ್ ಸಂಘ ವ್ಯಕ್ತಿ ಆಧಾರಿತ ಸಂಘಟನೆಯಲ್ಲ. ತತ್ವ, ಸಿದ್ಧಾಂತದಡಿ ಕೆಲಸ ಮಾಡುತ್ತಿರುವ ರೈತಸಂಘಟನೆಯಾಗಿದೆ ಎಂದು ಅಖಿಲ ಭಾರತೀಯ ಕಿಸಾನ್ ಸಂಘದ ರಾಷ್ಟ್ರಾಧ್ಯಕ್ಷ ಸಾಯಿರೆಡ್ಡಿ ಹೇಳಿದರು.ತಾಲೂಕಿನ ಕುರಹಟ್ಟಿ ಗ್ರಾಮದಲ್ಲಿ ಭಾರತೀಯ ಕಿಸಾನ್ ಸಂಘಟನೆಯಿಂದ ನಡೆದ ಗ್ರಾಮಸ ಮಿತಿ ಸಭೆ, ರೈತರೊಂದಿಗೆ ಸಂವಾದ ನಡೆಸಿ ಮಾತನಾಡಿ, ಹಳ್ಳಿಗಳೇ ಭಾರತೀಯ ಕಿಸಾನ್ ಸಂಘಟನೆಯ ಆತ್ಮವಾಗಿದೆ. ದೇಶದಲ್ಲಿ 72 ಸಾವಿರ ಗ್ರಾಮ ಸಮಿತಿ, 600 ಜಿಲ್ಲಾ ಸಂಘಟನೆ ಹಾಗೂ 4 ಸಾವಿರ ತಾಲೂಕು ಕಿಸಾನ್ ಸಂಘಟನೆಗಳು ಲಕ್ಷಾಂತರ ಮಂದಿ ರೈತರು ಕೆಲಸ ಮಾಡುತ್ತಿದ್ದಾರೆ ಎಂದರು.
ನಮ್ಮ ಸಂಘಟನೆ ರಾಜಕೀಯ ಹೊರತಾಗಿ ಕೆಲಸ ಮಾಡುತ್ತಿದೆ. ಇಲ್ಲಿ ರೈತರೇ ನಮ್ಮ ಸಂಘಟನೆ ನಾಯಕರಾಗಿ ಕೆಲಸ ಮಾಡಲಿದ್ದಾರೆ. ವ್ಯಕ್ತಿ ಆಧಾರಿತ ಸಂಘಟನೆಯಲ್ಲ. ಇದೊಂದು ತತ್ವ,ಸಿದ್ಧಾಂತದಡಿಯಲ್ಲಿ ಕೆಲಸ ಮಾಡುತ್ತಿದೆ. ನಮ್ಮ ಸಂಘಟನೆಯಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಪಕ್ಷದ ಜವಾಬ್ದಾರಿ ಹೊತ್ತ ವ್ಯಕ್ತಿಗಳು ಬದಲಾವಣೆಯಾಗಲಿದ್ದು, ಹೊಸ ವ್ಯಕ್ತಿಗೆ ಜವಾಬ್ದಾರಿಕೊಟ್ಟು ರೈತರ ಪರವಾಗಿ ಕೆಲಸ ಮಾಡಲಾಗುತ್ತದೆ ಎಂದರು.ಕಿಸಾನ್ ಸಂಘದಲ್ಲಿ ಗ್ರಾಮ ಸಮಿತಿ ಪ್ರಮುಖವಾಗಿದೆ. ಗ್ರಾಮ ಸಮಿತಿ ಮೂಲಕ ರೈತರು ಯಾವರೀತಿ ಕೆಲಸ ಮಾಡಬೇಕು, ಕೃಷಿ ಚಟುವಟಿಕೆ ನಡೆಸಬೇಕು ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.
ದಕ್ಷಿಣ ಪ್ರಾಂತ್ಯ ಅಧ್ಯಕ್ಷ ಹಾಡ್ಯ ರಮೇಶ್‌ರಾಜು ಮಾತನಾಡಿ, ಭಾರತೀಯ ಕಿಸಾನ್ ಸಂಘವು ದೇಶದಲ್ಲಿಯೇ ಅತಿದೊಡ್ಡ ರೈತ ಸಂಘಟನೆಯಾಗಿದೆ. ರಾಷ್ಟ್ರಸಂಘವು ನನಗೆ ದಕ್ಷಿಣ ಪ್ರಾಂತ್ಯದ ಅಧ್ಯಕ್ಷನಾಗಿ ಕೆಲಸ ಮಾಡುವ ಜವಾಬ್ದಾರಿ ನೀಡಿದೆ. ರಾಷ್ಟ್ರೀಯ ಅಧ್ಯಕ್ಷರಾದ ಸಾಯಿರೆಡ್ಡಿ ಅವರು ರಾಜ್ಯ ಪ್ರವಾಸಕೈಗೊಂಡು ಮಂಡ್ಯದಲ್ಲಿ ರೈತರೊಂದಿಗೆ ಸಂವಾದ ನಡೆಸಿ ನಮ್ಮ ಕುರಹಟ್ಟಿ ಗ್ರಾಮದ ಗ್ರಾಮ ಸಮಿತಿ ಸಭೆಗೆ ಆಗಮಿಸಿದ್ದಾರೆ ಎಂದರು.ದಕ್ಷಿಣ ಪ್ರಾಂತ್ಯದಲ್ಲಿ 17 ಜಿಲ್ಲೆ, 113 ತಾಲೂಕುಗಳ ಪೈಕಿ 80 ತಾಲೂಕುಗಳಲ್ಲಿ ನಮ್ಮ ಸಂಘಟನೆ ಕೆಲಸ ಮಾಡುತ್ತಿದೆ. 6 ಸಾವಿರ ಗ್ರಾಮಿ ಸಮಿತಿ ಸದಸ್ಯರಿಗೆ ಪ್ರಶಿಕ್ಷಣ ವರ್ಗ ಕಾರ್ಯಕ್ರಮ ನೀಡಿ ಆ ಮೂಲಕ ಸಂಘಟನಾತ್ಮಕ, ಆಂದೋಲನಾತ್ಮಕ ಹಾಗೂ ರಚನಾತ್ಮಕವಾಗುವ ಗ್ರಾಮ ಸಮಿತಿಗಳು ಹೇಗೆ, ಯಾಕೆ ಕೆಲಸ ಮಾಡಿ ರೈತರಿಗೆ ಸ್ವಾವಲಂಭಿ ಬದುಕು, ಮಾರುಕಟ್ಟೆ ನಿರ್ಮಾಣದ ಕುರಿತು ರೈತರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ ಎಂದರು.
ಇದೇ ವೇಳೆ ಗ್ರಾಮ ಸಮಿತಿಯ ರೈತರು ಹಾಗೂ ಮಹಿಳೆಯರನ್ನು ಅಭಿನಂಧಿಸಲಾಯಿತು. ಕಾರ್ಯಕ್ರಮದಲ್ಲಿ ದಕ್ಷಿಣ ಪ್ರಾಂತ್ಯ ಕಿಸಾನ್ ಸಂಘದ ಕಾರ್ಯದರ್ಶಿ ಸಂತೋಷ್, ಕಿಸಾನ್ ಸಂಘದ ಕೆ.ಎಸ್.ಪ್ರಕಾಶ್, ಕೆ.ಮಹದೇವು, ಎಲ್‌ಐಸಿ ಸುರೇಶ್, ಹಾಗನಹಳ್ಳಿ ಹೇಮಂತ್, ದುರ್ಗೇಶ್ ಸೇರಿದಂತೆ ಹಲವರು ಇದ್ದರು.