ಕನ್ನಡಪ್ರಭ ವಾರ್ತೆ ಪಾಂಡವಪುರ
ಹುಟ್ಟುಹಬ್ಬವನ್ನು ಸರಳವಾಗಿ ಆಚರಣೆ ಮಾಡುವಂತೆ ಸಿ.ಎಸ್.ಪುಟ್ಟರಾಜು ಅವರು ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ ಪಟ್ಟಣದ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ, ಅಭಿಷೇಕ ಸಲ್ಲಿಸಿದರು. ಬಳಿಕ ಪ್ರಸಾದ ವಿತರಿಸಿದರು. ನಂತರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತೆರಳಿದ ಕಾರ್ಯಕರ್ತರು ಆಸ್ಪತ್ರೆಯ ಒಳ ಹಾಗೂ ಹೊರ ರೋಗಿಗಳಿಗೆ ಹಣ್ಣುಹಂಪಲು ವಿತರಣೆ ಮಾಡಿದರು.
ಪುರಸಭೆ ಸದಸ್ಯ ಆರ್.ಸೋಮಶೇಖರ್ ಮಾತನಾಡಿ, ನಮ್ಮ ನಾಯಕರಾದ ಸಿ.ಎಸ್.ಪುಟ್ಟರಾಜು ಅವರ ಹುಟ್ಟುಹಬ್ಬವನ್ನು ಪಟ್ಟಣದ ಎಲ್ಲಾ ವಾರ್ಡ್‌ಗಳಲ್ಲೂ ವಿಜೃಂಭಣೆಯಿಂದ ಆಚರಣೆ ಮಾಡಬೇಕು ಎಂಬುದಾಗಿ ಅವರ ಎಲ್ಲಾ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ತೀರ್ಮಾನಿಸಿದ್ದೆವು. ಅವರ ಮನೆಯಲ್ಲೊಂದು ನಡೆದ ದುರ್ಘಟನೆಯಿಂದ ಹುಟ್ಟಹಬ್ಬ ಆಚರಣೆ ಮಾಡಿಕೊಳ್ಳದಂತೆ ಸೂಚನೆ ನೀಡಿದರು ಎಂದರು.ಈ ಹಿನ್ನೆಲೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಸರಳವಾಗಿ ದೇವರಿಗೆ ಪೂಜೆ ಸಲ್ಲಿಸಿ ರೋಗಿಗಳಿಗೆ ಹಣ್ಣುಹಂಪಲು ವಿತರಿಸಿ ಆಚರಿಸಿದ್ದೇವೆ. ಸಿ.ಎಸ್.ಪುಟ್ಟರಾಜು ಅವರು ಕ್ಷೇತ್ರದಲ್ಲಿ ಮೂರು ಬಾರಿ ಶಾಸಕ, ಸಚಿವರಾಗಿ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿಯಾಗಿ ಅಭಿವೃದ್ಧಿ ಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರು ರಾಜ್ಯದ ಸಚಿವರಾಗಿ ರಾಜ್ಯದ ಉದ್ದಗಲಕ್ಕೂ ಕೆಲಸ ಮಾಡುವಂತೆ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಮಾಡಲಿ ಎಂದರು.
ಪುರಸಭೆ ಅಧ್ಯಕ್ಷೆ ಜ್ಯೋತಿ ಲಕ್ಷ್ಮಿ, ಸದಸ್ಯರಾದ ಎಂ.ಗಿರೀಶ್, ಚಂದ್ರ ಮಾತನಾಡಿ, ಸಿ.ಎಸ್.ಪುಟ್ಟರಾಜು ಅವರ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿ ಎರಡು ಸಾವಿರ ಜನರಿಗೆ ಓಳಿಗೆ ಊಟ ಹಾಕಿಸಬೇಕೆಂಬುದಾಗಿ ತೀರ್ಮಾನಿಸಿದ್ದೆವು. ಆದರೆ, ಸರಳವಾಗಿ ಆಚರಣೆಗೆ ಸೂಚಿಸಿದರು. ಅದರಂತೆ ಆಚರಣೆ ಮಾಡಿದ್ದೇವೆ. ಸಿಎಸ್ಪಿ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿ ಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಪಡಿಸುವ ಶಕ್ತಿ ಅವರಿಗೆ ಭಗವಂತ ಕರುಣಿಸಲೆಂದು ಹಾರೈಸಿದರು.
ರಾರಾಜಿಸಿದ ಕಟೌಟ್, ಬ್ಯಾನರ್‌ಗಳು:
ಪಟ್ಟಣದ ಸಿ.ಎಸ್.ಪುಟ್ಟರಾಜು ಅವರ ನಿವಾಸ, ಮಂಡ್ಯ ಸರ್ಕಲ್, ಐದುದೀಪದ ವೃತ್ತ, ಮೈಸೂರ, ನಾಗಮಂಗಲ, ಕೆಆರ್‌ಎಸ್ ರಸ್ತೆಗಳು ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಕಟೌಟ್ ಗಳು ರಾರಾಜಿಸಿದವು. ಪಟ್ಟಣದ ಐದು ದೀಪವೃತ್ತದ ವೃತ್ತದಲ್ಲಿ ಸಿಎಸ್ಪಿ ಹುಟ್ಟಹಬ್ಬದ ಅಂಗವಾಗಿ ಮುಖಂಡ ಮಾಣಿಕ್ಯನಹಳ್ಳಿ ಅಶೋಕ್ 62 ಅಡಿ ಎತ್ತರ ಕಟೌಟ್ ಹಾಕಿಸುವ ಮೂಲಕ ಎಲ್ಲರ ಗಮನ ಸೆಳೆದರು.