ಭಟ್ಕಳ: ಪಟ್ಟಣದ ಮುಖ್ಯರಸ್ತೆಯಲ್ಲಿ ಚಲಿಸುತ್ತಿದ್ದ ಎಲೆಕ್ಟ್ರಿಕ್ ಸ್ಕೂಟರಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಬ್ಯಾಟರಿ ಹಾಗೂ ವೈರಿಂಗ್ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಸಮಯಪ್ರಜ್ಞೆಯಿಂದ ಸವಾರ ಪ್ರಾಣಾಪಾಯದಿಂದ ಪಾರಾದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ಮುಂಡಳ್ಳಿಯ ನಿವಾಸಿ ನಾಗರಾಜ ಮೊಗೇರ ಎಂಬವರು ಭಟ್ಕಳ ಪೇಟೆಯಿಂದ ಸಂಶುದ್ದೀನ ವೃತ್ತಕ್ಕೆ ತಮ್ಮ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಪಟ್ಟಣದ ಮುಖ್ಯರಸ್ತೆಯ ಸನಾ ಆಪ್ಟಿಕಲ್ ಎದುರಿಗೆ ಸ್ಕೂಟರಿನ ಸೀಟಿನ ಕೆಳಗೆ ಬಿಸಿಯಾದ ಅನುಭವವಾಗಿದೆ.
ತಕ್ಷಣ ಸ್ಕೂಟರನ್ನು ನಿಲ್ಲಿಸಿ ಸೀಟಿನ ಕೆಳಗೆ ನೋಡಿದಾಗ ಬ್ಯಾಟರಿ ಬೆಂಕಿಯಿಂದ ಉರಿಯುತ್ತಿರುವುದು ಕಂಡುಬಂದಿದೆ. ಸ್ಕೂಟರಿಗೆ ಪೂರ್ಣ ಪ್ರಮಾಣದಲ್ಲಿ ಬೆಂಕಿ ಆವರಿಸುವ ಪೂರ್ವದಲ್ಲಿ ಸಾರ್ವಜನಿಕರು ಬೆಂಕಿ ನಂದಿಸಿದರು. ಸುದ್ದಿ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಮುಂದೆ ಆಗಬಹುದಾದ ಅನಾಹುತ ತಡೆದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.ಯುವತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನ
ಕಾರವಾರ: ಇಲ್ಲಿನ ನಂದನಗದ್ದದಲ್ಲಿ ಮಂಗಳವಾರ ಯುವಕನೊಬ್ಬ ಯುವತಿ ಮೇಲೆ ಹಲ್ಲೆ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾನೆ.ದಾಂಡೇಲಿ ಮೂಲದ ಯುವಕ ಎನ್ನಲಾಗಿದ್ದು, ನಗರದ ನಂದನಗದ್ದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಯುವತಿ ಹಲ್ಲೆಗೊಳಗಾದವಳು. ಮಂಗಳವಾರ ಮಧ್ಯಾಹ್ನದ ವೇಳೆ ಯುವಕ ಅಂಗಡಿ ಬಳಿ ಬಂದಿದ್ದು, ಯುವತಿ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾನೆ. ತಾನು ತಂದಿದ್ದ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾನೆ. ಅಷ್ಟರಲ್ಲಾಗಲೇ ಯುವತಿ ಚೀರಾಡಿದ್ದು, ಅಕ್ಕಪಕ್ಕದ ಅಂಗಡಿಯವರು ಬಂದು ಅನಾಹುತವನ್ನು ತಪ್ಪಿಸಿದ್ದಾರೆ.
ಪೊಲೀಸರ ನಿರ್ಲಕ್ಷ್ಯ: ಮಂಗಳವಾರ ಮಧ್ಯಾಹ್ನ ಒಂದು ಗಂಟೆ ವೇಳೆಗೆ ಘಟನೆ ನಡೆದಿದ್ದು, ರಾತ್ರಿ ೧೦ ಗಂಟೆಯಾದರೂ ಪೊಲೀಸರು ಪ್ರಕರಣ ದಾಖಲಿಸಿರಲಿಲ್ಲ. ಮಹಿಳಾ ಪೊಲೀಸ್ ಠಾಣೆಗೆ ಕೇಳಿದರೆ ಕೇಸ್ ಆಗುತ್ತಿದೆ. ಈಗ ಆಗುತ್ತದೆ, ಆಗ ಆಗುತ್ತದೆ ಎಂದರೆ, ಪೊಲೀಸ್ ಇನ್ಸ್‌ಪೆಕ್ಟರ್ ನಮ್ಮವರು ಹೋಗಿದ್ದಾರೆ, ಪ್ರಕರಣ ದಾಖಲಿಸುತ್ತಾರೆ ಎಂದು ಹೇಳುತ್ತಿದ್ದರು.ಯುವತಿ ಮೇಲೆ ಹಲ್ಲೆ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಘಟನೆಯನ್ನು ಪೊಲೀಸರು ಇಷ್ಟು ಹಗುರವಾಗಿ ಪರಿಗಣಿಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.