ತಾಲೂಕು ಪಂಚಾಯತಿಯ ಸಾಮಾನ್ಯ ಸಭೆಯಲ್ಲಿ 2025-26ನೇ ಸಾಲಿನ ಅಂದಾಜು ₹91.49 ಕೋಟಿ ವೆಚ್ಚದ ಮುಂಗಡ ಪತ್ರವನ್ನು ಆಡಳಿತಾಧಿಕಾರಿ ಜಿ. ಸತೀಶ ಮಂಡಿಸಿದರು.
ಭಟ್ಕಳ: ಇಲ್ಲಿನ ತಾಲೂಕು ಪಂಚಾಯತಿಯ ಸಾಮಾನ್ಯ ಸಭೆಯಲ್ಲಿ 2025-26ನೇ ಸಾಲಿನ ಅಂದಾಜು ₹91.49 ಕೋಟಿ ವೆಚ್ಚದ ಮುಂಗಡ ಪತ್ರವನ್ನು ಆಡಳಿತಾಧಿಕಾರಿ ಜಿ. ಸತೀಶ ಮಂಡಿಸಿದರು.
ಮುಂಗಡಪತ್ರ ಮಂಡಿಸಿ ಮಾತನಾಡಿದ ಅವರು, ಕಳೆದ ಸಾಲಿಗಿಂತ ಈ ಬಾರಿಯ ಮುಂಗಡ ಪತ್ರವು ಶೇ.17 ಹೆಚ್ಚುವರಿಯಾಗಿರುತ್ತದೆ. ಪ್ರಾಥಮಿಕ ಶಿಕ್ಷಣಕ್ಕಾಗಿ ₹53.57 ಕೋಟಿ, ಪ್ರೌಢ ಶಿಕ್ಷಣಕ್ಕಾಗಿ ₹10.80 ಕೋಟಿ ವೈದ್ಯಕೀಯ ಹಾಗೂ ಜನಾರೋಗ್ಯ ಇಲಾಖೆಗೆ ₹65.21 ಲಕ್ಷ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ₹17.70 ಲಕ್ಷ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ₹7.12 ಕೋಟಿ, ಕೃಷಿ ಇಲಾಖೆಗೆ ₹27.73 ಲಕ್ಷ, ಪಶು ಸಂಗೋಪನೆ ಇಲಾಖೆಗೆ ₹69.88 ಲಕ್ಷ ಹಾಗೂ ತಾಪಂ ಕಾರ್ಯಕ್ರಮಗಳಿಗೆ ₹4.16 ಕೋಟಿ ಮೀಸಲಿಡಲಾಗಿದೆ. ತೋಟಗಾರಿಕಾ ಕಾರ್ಯಕ್ರಮಕ್ಕಾಗಿ ಯಾವುದೇ ಅನುದಾನ ಮೀಸಲಿಟ್ಟಿಲ್ಲ ಎಂದು ಸಭೆಯಲ್ಲಿ ತಿಳಿಸಿದರು.
ಲಿಂಕ್ ಡಾಕ್ಯುಮೆಂಟ್ ಅನುದಾನದ ಹೊರತಾಗಿ ಕಟ್ಟಡ ಬಾಡಿಗೆ ಮತ್ತು ಇತರ ಮೂಲದಿಂದ ₹20 ಲಕ್ಷ ಹಾಗೂ ಅನಿರ್ಬಂಧಿತ ಅನುದಾನದಡಿ ₹1.63 ಕೋಟಿ ಅನುದಾನವನ್ನು ನಿರೀಕ್ಷಿಸಲಾಗಿದೆ ಎಂದರು.
ನಂತರ ತಾಲೂಕಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಮಂಗನಕಾಯಿಲೆ, ಚಿಕೂನ್ ಗೂನ್ಯ, ಡೆಂಘೀ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದರು.
ತಾಲೂಕಿನ ಪ್ರಾಥಮಿಕ ಶಾಲೆಗಳ ಜತೆ ಪದವಿಪೂರ್ವ ಕಾಲೇಜುಗಳಿಗೆ ವಿದ್ಯುತ್ ಸಂಪರ್ಕ ನೀಡಲು ಆದೇಶವಾಗಿದ್ದು, ವಸತಿ ನಿಲಯಗಳಿಗೂ ವಿದ್ಯುತ್ ಸಂಪರ್ಕ ನೀಡಲು ಆದೇಶವಾಗಿರುವ ಕುರಿತು ಅಧಿಕಾರಿಗಳು ಸಭೆಗೆ ತಿಳಿಸಿದರು.
ತಾಲೂಕಿನಲ್ಲಿ ಲೋಡ್ ಶೆಡ್ಡಿಂಗ್ ಪದ್ಧತಿ ಇಲ್ಲವಾಗಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ಮಾತ್ರ ಆಗಾಗ ವಿದ್ಯುತ್ ವ್ಯತ್ಯಯವಾಗುತ್ತಿದೆ ಎಂದು ಹೆಸ್ಕಾಂ ಅಧಿಕಾರಿಗಳು ಸಭೆಗೆ ತಿಳಿಸಿದರು.
ಸಭೆಯಲ್ಲಿ ಕಾರ್ಯ ನಿರ್ವಹಣಾಧಿಕಾರಿ ವೆಂಕಟೇಶ ನಾಯಕ, ಸಹಾಯಕ ಲೆಕ್ಕಾಧಿಕಾರಿ ರಾಜೇಶ ಮಹಾಲೆ ಇತರರು ಉಪಸ್ಥಿತರಿದ್ದರು. ಕರಿಯಪ್ಪ ನಾಯ್ಕ ಸ್ವಾಗತಿಸಿದರು. ವ್ಯವಸ್ಥಾಪಕ ಕೃಷ್ಣಕಾಂತ ನಾಯ್ಕ ವಂದಿಸಿದರು.
ಭಟ್ಕಳ ತಾಪಂ ಮುಂಗಡ ಪತ್ರವನ್ನು ಆಡಳಿತಾಧಿಕಾರಿ ಸತೀಶ ಮಂಡಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.