ಸ್ವಾರ್ಥಕ್ಕಾಗಿ ಕಾರ್ಯಕ್ರಮ ಬಳಸಿಕೊಂಡ ಡಿ.ಟಿ. ಶ್ರೀನಿವಾಸ

KannadaprabhaNewsNetwork | Published : Apr 27, 2025 1:47 AM

ಸಾರಾಂಶ

ಚಿಕ್ಕೋಡಿಯಲ್ಲಿ ಇತ್ತೀಚೆಗೆ ವಿಧಾನ ಪರಿಷತ್‌ ಸದಸ್ಯ ಡಿ.ಟಿ.ಶ್ರೀನಿವಾಸ ಮತ್ತು ಮಾಜಿ ಶಾಸಕಿ ಪೂರ್ಣಿಮಾ ನೇತೃತ್ವದಲ್ಲಿ ನಡೆದಿದ್ದ ಹಣಬರ ಸಂಘದ ಶತಮಾನೋತ್ಸವ ಸಮಾವೇಶ ಕುರಿತಾಗಿ ಅದೇ ಸಮುದಾಯದ ಸ್ಥಳೀಯ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಸಮಾಜದ ಹೆಸರು ಹೇಳಿಕೊಂಡು ಬಂದು ಕಾರ್ಯಕ್ರಮ ನಡೆಸಿ ನಮ್ಮನ್ನೇ ತುಳಿದು ಹಾಕಿದ್ದಿರಿ. ಮತ್ತೆ ಬೆಳಗಾವಿ ಜಿಲ್ಲೆಗೆ ಬರಬೇಡಿ ಎಂದು ಖಡಕ್ಕಾಗಿ ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಚಿಕ್ಕೋಡಿಯಲ್ಲಿ ಇತ್ತೀಚೆಗೆ ವಿಧಾನ ಪರಿಷತ್‌ ಸದಸ್ಯ ಡಿ.ಟಿ.ಶ್ರೀನಿವಾಸ ಮತ್ತು ಮಾಜಿ ಶಾಸಕಿ ಪೂರ್ಣಿಮಾ ನೇತೃತ್ವದಲ್ಲಿ ನಡೆದಿದ್ದ ಹಣಬರ ಸಂಘದ ಶತಮಾನೋತ್ಸವ ಸಮಾವೇಶ ಕುರಿತಾಗಿ ಅದೇ ಸಮುದಾಯದ ಸ್ಥಳೀಯ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಸಮಾಜದ ಹೆಸರು ಹೇಳಿಕೊಂಡು ಬಂದು ಕಾರ್ಯಕ್ರಮ ನಡೆಸಿ ನಮ್ಮನ್ನೇ ತುಳಿದು ಹಾಕಿದ್ದಿರಿ. ಮತ್ತೆ ಬೆಳಗಾವಿ ಜಿಲ್ಲೆಗೆ ಬರಬೇಡಿ ಎಂದು ಖಡಕ್ಕಾಗಿ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಣಬರ ಸಮಾಜದ ತಾಲೂಕಾಧ್ಯಕ್ಷ ವಿಠ್ಠಲ ಖೋತ ಅವರು, ಚಿಕ್ಕೋಡಿಯಲ್ಲಿ ನಡೆದ ಗೊಲ್ಲ ಯಾದವ, ಹಣಬರ ಸಂಘದ ಶತಮಾನೋತ್ಸವ ಸಮಾವೇಶ ಇಡೀ ತಮ್ಮ ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.ಎಂಎಲ್ಸಿ ಡಿ.ಟಿ.ಶ್ರೀನಿವಾಸ ಹಾಗೂ ಮಾಜಿ ಶಾಸಕಿ ಪೂರ್ಣಿಮಾ ಅವರು ಸ್ವಂತ ಮನೆಯ ಕಾರ್ಯದಂತೆ ಈ ಕಾರ್ಯಕ್ರಮವನ್ನು ಮಾಡಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ. ಇದು ವ್ಯಕ್ತಿ ಪೂಜೆಗೆ ಸೀಮಿತವಾದಂತಾಗಿದೆ. ಇದು ಸಮಾಜದ ಕಾರ್ಯಕ್ರಮವಾಗಿಲ್ಲ. ಇಲ್ಲಿ ಬೆಳಗಾವಿ ಹಣಬರ, ಯಾದವರನ್ನು ಅಪಮಾನ ಮಾಡಲಾಗಿದೆ ಎಂದು ಕಿಡಿಕಾರಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಣಬರ ಸಮಸ್ಯೆಗಳನ್ನು ಹೇಳಲು ಕೂಡ ಅವರು ಬಿಡಲಿಲ್ಲ. ವೇದಿಕೆ ಮೇಲೆ ನಿಮ್ಮಿಬ್ಬರನ್ನೇ ಜನ ನೋಡಿಕೊಂಡು ಕೂಡಬೇಕಾದಿತ್ತು. ಈ ಭಾಗದ ಹಣಬರ ಸಮಾಜದ ಹೆಸರು ಹೇಳಿಕೊಂಡು ಇಲ್ಲಿಗೆ ಬಂದಿದ್ದಿರಿ. ನೀವು ಮುಖ್ಯಮಂತ್ರಿ ಹತ್ತಿರ ಏನೋ ಮಾಡಲು ಹೊರಟಿದ್ದಿರಿ. ಆದರೆ, ಅದು ನಡೆಯೋದಿಲ್ಲ. ನಾವು ಬೆಳಗಾವ ಜಿಲ್ಲೆಯವರು ಸ್ವಾಭಿಮಾನದವರು. ಹೀಗಾಗಿ ಸ್ವಾಭಿಮಾನಕ್ಕೆ ಧಕ್ಕೆ ಆಗಲು ಬಿಡಲ್ಲ. ನಿಮ್ಮ ಏಕಚಕ್ರಾಧಿಪತ್ಯ ಬೆಳಗಾವಿಯಲ್ಲಿ ನಡೆಯೋದಿಲ್ಲ. ನಮ್ಮ ಭಾಗದ ಯಾರಿಗೆ ಸತ್ಕಾರ ಮಾಡಿದ್ದಿರಿ. ಬೆಳಗಾವಿ ಜಿಲ್ಲೆಯಲ್ಲಿರುವ ಹಣಬರ ಸಮಾಜದ ಯಾರಿಗೂ ಸತ್ಕಾರ ಮಾಡಿಸಿಕೊಳ್ಳಲು ಯೋಗ್ಯತೆ ಇರಲಿಲ್ಲವೇ? ಒಂದು ಇರದಿದದ್ರೆ ಇಲ್ಲೇಕೆ ಕಾರ್ಯಕ್ರಮ ಮಾಡಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದರು.ಕಾರ್ಯಕ್ರಮದಲ್ಲಿ ಕೇವಲ ಬೆಂಗಳೂರು, ಮೈಸೂರು, ಚಿತ್ರದುರ್ಗದ ಭಾಗದವರ ಪಾರುಪತ್ಯ ಎದ್ದು ಕಾಣುತ್ತಿತ್ತು. ಸಮಾಜದ ಹೆಸರು ಹೇಳಿಕೊಂಡು ಬಂದು ಕಾರ್ಯಕ್ರಮ ನಡೆಸಿ ನಮ್ಮನ್ನೆ ತುಳಿದು ಹಾಕಿದ್ದಿರಿ. ಯಾವುದೊ ಒಂದು ಸೋಗ ಹಾಕಿಕೊಂಡು ಬಂದು ಇಲ್ಲಿ ಕಾರ್ಯಕ್ರಮ ಮಾಡಿದ್ದಿರಿ. ಅದಕ್ಕೆ ನಮ್ಮ ವಿರೋಧ ಇದೆ. ಹಣಬರ ಸಮಾಜದ ಎಂಎಲ್‌ಸಿ ನಾಗರಾಜ ಯಾದವ‌ಗೆ ಮಾತನಾಡಲು ಬಿಡದೆ ಅವಮಾನ ಮಾಡಿದ್ದಿರಿ ಎಂದರು.ಸಮಾಜದ ಹೆಸರಿನಲ್ಲಿ ಸೋಗು ಹಾಕಿಕೊಂಡು ಮತ್ತೆ ಬೆಳಗಾವಿ ಜಿಲ್ಲೆಗೆ ಬರಬೇಡಿ. ಕಾರ್ಯಕ್ರಮ ನಿಮ್ಮ ಸ್ವಾರ್ಥಕ್ಕಾಗಿ ಉಪಯೋಗ ಮಾಡಿಕೊಂಡಿದ್ದಿರಿ. ನಮ್ಮ ಜಿಲ್ಲೆಯ ಹಣಬರ ಸಮಾಜದ ನಾಯಕರನ್ನು ಕಡೆಗಣಿಸಿ ಕಾರ್ಯಕ್ರಮ ಮಾಡಲಾಗಿದೆ ಎಂದರು.

ಗೋಷ್ಠಿಯಲ್ಲಿ ತಾತಾಸಾಬ ಹಂಡೆ, ವಿಠ್ಠಲ ಖೋತ, ಎಸ್‌.ಬಿ.ಪೂಜಾರಿ, ಅಪ್ಪಾಸಾಬ ಕಲಗತೆ, ಶೇಖರ ಮುಂಡೆ, ಚಂದ್ರಕಾಂತ ನಾಯಿಕ ಸೇರಿದಂತೆ ಇತರರಿದ್ದರು.

ಕರ್ನಾಟಕ‌- ಮಹಾರಾಷ್ಟ್ರದ ಗಡಿ ಭಾಗದಲ್ಲಿ ಹಣಬರ ಸಮಾಜ ಬಹಳಷ್ಟಿದೆ. ಮಹಾರಾಷ್ಟ್ರದಿಂದಲು ಸಹ ಹಣಬರು ಸಮಾವೇಶಕ್ಕೆ ಬಂದಿದ್ದರು. ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದ ಹಣಬರ ನಾಯಕರಿಗೆ ಅನ್ಯಾಯವಾಗಿದೆ. ಬೆಂಗಳೂರು, ಮೈಸೂರು, ಚಿತ್ರದುರ್ಗದ ಭಾಗದವರ ಪಾರುಪತ್ಯ ಎದ್ದುಕಾಣುತ್ತಿತ್ತು. ಹಣಬರ ಸಮಾಜದ ಎಂಎಲ್‌ಸಿ ನಾಗರಾಜ ಯಾದವ‌ಗೆ ಸನ್ಮಾನ ಮಾಡದೇ ಅವಮಾನಿಸಿದ್ದಾರೆ.

- ವಿಠ್ಠಲ ಖೋತ, ಹಣಬರ ಸಮಾಜದ ಮುಖಂಡರು.

Share this article