ಕುಮಟಾ: ಸಾಹಿತ್ಯ ಮನುಷ್ಯನಿಗೆ ತೀರಾ ಅತ್ಯವಶ್ಯಕ. ಎಲ್ಲೆಡೆ ಸಾಹಿತಿ-ಸಾಹಿತ್ಯದ ಒಡನಾಟ ಹೆಚ್ಚಬೇಕು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಹಿರಿಯ ಸಾಹಿತಿಗಳ ಜ್ಞಾನದ ಬೆಳಕು ಮುಂದಿನ ಪೀಳಿಗೆಗೆ ಮಾರ್ಗದರ್ಶಿ. ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರಬೇಕು. ಸಾಹಿತ್ಯದ ಅರಿವಿದ್ದರೆ ಮಾತಿನಲ್ಲಿ ಶಬ್ದ ನಿಯಂತ್ರಣ ಸಾಧ್ಯ. ಸಾಹಿತ್ಯ ಉಳಿಸಿ-ಬೆಳೆಸಿ ಎನ್ನುವಾಗ ಸ್ವತಃ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದರು.
ಚುಟುಕು ಬ್ರಹ್ಮ ದಿನಕರ ದೇಸಾಯಿಯವರು ನಮ್ಮ ಹೆಮ್ಮೆ, ಸಾಹಿತ್ಯಕ್ಕಿಂತ ಶಿಕ್ಷಣದ ಬಗೆಗಿನ ಅವರ ಕಾಳಜಿ ಅಪಾರವಾದದ್ದು. ಜಿಲ್ಲೆಯ ಹಲವು ತಾಲೂಕಿನ ಗ್ರಾಮೀಣ ಭಾಗದಲ್ಲಿ ಹತ್ತಾರು ಪ್ರೌಢಶಾಲೆಗಳನ್ನು ಸ್ಥಾಪಿಸಿದ ಮುತ್ಸದ್ಧಿ ಅವರು. ಜಿಲ್ಲೆಯ ಗ್ರಾಮೀಣ ಭಾಗದ ಶೈಕ್ಷಣಿಕ ಪ್ರಗತಿಯಲ್ಲಿ ದಿನಕರ ದೇಸಾಯಿ ಕೊಡುಗೆ ಬೆಲೆ ಕಟ್ಟಲಾಗದ್ದು ಎಂದರು.ಉದ್ಯಮಿ ಸುಬ್ರಾಯ ವಾಳ್ಕೆ, ಕುಮಟಾ ಮುಕುಟ ಸಂಚಿಕೆ ಬಿಡುಗಡೆ ಮಾಡಿ, ಸಮ್ಮೇಳನದ ಯಶಸ್ಸಿಗೆ ಶುಭ ಕೋರಿದರು. ವಿಜಯಲಕ್ಷ್ಮೀ ಹೆಗಡೆ ಅವರ ಗಝಲ್ ನಗರಿಯಲ್ಲಿ ಹೆಜ್ಜೆಗಳ ಗುರುತು ಕೃತಿಯನ್ನು ಪತ್ರಕರ್ತ ಗಣೇಶ ಪ್ರಸಾದ ಪಾಂಡೇಲು ಬಿಡುಗಡೆಗೊಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷೆ ಸುಮತಿ ಭಟ್, ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ತಿಗಣೇಶ ಹೆಗಡೆ ಮಾಗೋಡ ಮಾತನಾಡಿದರು.
ಗೋಪಾಲಕೃಷ್ಣ ನಾಯ್ಕ ಪ್ರಾರ್ಥಿಸಿದರು. ರವೀಂದ್ರ ಭಟ್ ಸೂರಿ ಸ್ವಾಗತಿಸಿ ಪರಿಚಯಿಸಿದರು. ಗಣಪತಿ ಅಡಿಗುಂಡಿ ಪ್ರಾಸ್ತಾವಿಕ ಮಾತನಾಡಿದರು. ವಿಜಯಲಕ್ಷ್ಮಿ ಹೆಗಡೆ ಕೃತಿ ಪರಿಚಯಿಸಿದರು. ಗಣೇಶ ಜೋಶಿ ನಿರೂಪಿಸಿದರು. ಉದಯ ಮಡಿವಾಳ ವಂದಿಸಿದರು.