ಭಟ್ರಹಳ್ಳಿ ಗೂಳೆಪ್ಪ ಕೂಡ್ಲಿಗಿಯ ಸುಂದರಲಾಲ್ ಬಹುಗುಣ: ಮಲ್ಲಿಕಾರ್ಜುನ ಸಿದ್ದಣ್ಣವರ

KannadaprabhaNewsNetwork |  
Published : Oct 16, 2025, 02:01 AM IST
ಕೂಡ್ಲಿಗಿ ಪಟ್ಟಣದ ಜ್ಞಾನಭಾರತಿ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಬುಧವಾರ ಗಜಾಪುರ ಕಾವ್ಯ ಪ್ರಕಾಶನ ವತಿಯಿಂದ ಲೇಖಕ ಭೀಮಣ್ಣ ಗಜಾಪುರ ರಚಿಸಿದ 24 7  ಅರಣ್ಯ ರಕ್ಷಕ ಭಟ್ರಳ್ಳಿ ಗೂಳೆಪ್ಪ  ಪುಸ್ತಕವನ್ನು ಹುಬ್ಬಳ್ಳಿ ಕನ್ನಡಪ್ರಭ ಆವೃತ್ತಿ ಸ್ಥಾನಿಕ ಸಂಪಾದಕ ಮಲ್ಲಿಕಾರ್ಜುನ ಸಿದ್ದಣ್ಣನವರ್  ಲೋಕಾರ್ಪಣೆಗೊಳಿಸಿದರು. ಕಾನಮಡುಗು ದಾಸೋಹ ಮಠದ ಐಮಡಿ ಶರಣಾರ್ಯರು, ಲೇಖಕ ಭೀಮಣ್ಣ ಗಜಾಪುರ, ಅರಣ್ಯ ರಕ್ಷಕ ಭಟ್ರಳ್ಳಿ ಗೂಳೆಪ್ಪ ಮುಂತಾದವರು ಉಪಸ್ಥಿತರಿದ್ದರು.  | Kannada Prabha

ಸಾರಾಂಶ

ಭಟ್ರಹಳ್ಳಿ ಗೂಳೆಪ್ಪ 125 ಎಕರೆ ಪ್ರದೇಶದಲ್ಲಿ ತಾನೇ ಸಸಿ ನೆಟ್ಟು ಪೋಷಿಸಿ ರಕ್ಷಿಸಿದ್ದಾರೆ.

ಕೂಡ್ಲಿಗಿ: ಭಟ್ರಹಳ್ಳಿ ಗೂಳೆಪ್ಪ 125 ಎಕರೆ ಪ್ರದೇಶದಲ್ಲಿ ತಾನೇ ಸಸಿ ನೆಟ್ಟು ಪೋಷಿಸಿ ರಕ್ಷಿಸಿದ್ದಾರೆ. ಯಾರಾದರೂ ಕಾಡಿಗೆ ಮರ ಕಡಿಯಲು ಬಂದರೆ ತಾನೇ ಮರವನ್ನು ಅಪ್ಪಿಕೊಂಡು ಮೊದಲು ನನ್ನ ಕಡಿಯಿರಿ, ನಂತರ ಮರ ಕಡಿಯಿರಿ ಎನ್ನುವ ದಿಟ್ಟತನ ತೋರಿ ಕೂಡ್ಲಿಗಿ ತಾಲೂಕಿನ ಸುಂದರ್ ಲಾಲ್ ಬಹುಗುಣ ಆಗಿದ್ದಾರೆ ಎಂದು ಕನ್ನಡಪ್ರಭ ಹುಬ್ಬಳ್ಳಿ ಆವೃತ್ತಿ ಸ್ಥಾನಿಕ ಸಂಪಾದಕ ಮಲ್ಲಿಕಾರ್ಜುನ ಸಿದ್ದಣ್ಣವರ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಪಟ್ಟಣದ ಜ್ಞಾನಭಾರತಿ ಬಿ.ಇಡಿ ಕಾಲೇಜ್ ಸಭಾಂಗಣದಲ್ಲಿ ಗಜಾಪುರದ ಕಾವ್ಯ ಪ್ರಕಾಶನದಿಂದ ಆಯೋಜಿಸಿದ್ದ ಭೀಮಣ್ಣ ಗಜಾಪುರ ರಚನೆಯ 24*7 ಅರಣ್ಯ ರಕ್ಷಕ ಭಟ್ರಹಳ್ಳಿ ಗೂಳೆಪ್ಪ ಎನ್ನುವ ಪುಸ್ತಕದ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಯಾವುದೇ ಫಲಾಪೇಕ್ಷೆ ಇಲ್ಲದೇ ಇಂದು ನೂರಾರು ಎಕರೆಯಲ್ಲಿ ಗಿಡ-ಮರ ಬೆಳೆಸಿದ ಗೂಳೆಪ್ಪ ಅರಣ್ಯ ಇಲಾಖೆ ಮಾಡುವ ಕೆಲಸವನ್ನು ತಾನು ಮಾಡಿ ಅರಣ್ಯ ಉಳಿಸಿದ ಧೀಮಂತ ವ್ಯಕ್ತಿ. ಸದ್ದಿಲ್ಲದೆ ಕೂಡ್ಲಿಗಿ ಅರಣ್ಯ ವ್ಯಾಪ್ತಿಯಲ್ಲಿನ 125 ಎಕರೆ ಅರಣ್ಯದಲ್ಲಿ ಗಿಡ ನೆಟ್ಟು ಪೋಷಣೆ ಮಾಡಿದ ನಿರ್ಮೋಹಿ ಭಟ್ರಳ್ಳಿ ಗೂಳೆಪ್ಪ ಎಂದು ಬಣ್ಣಿಸಿದರು.

ಮನುಷ್ಯರಿಗಲ್ಲದೇ ಪ್ರಾಣಿ-ಪಕ್ಷಿ ಸಂಕುಲ ಬೆಳೆಸಿ ಅವುಗಳ ಉಳುವಿಗೆ ಕಾರಣೀಭೂತನಾದವನು ಈ ಮನುಷ್ಯ. ಈತನ ನಿಸ್ವಾರ್ಥ ಸೇವೆಯನ್ನು ಮುಂದಿನ ಯುವ ಪೀಳಿಗೆ ಅನುಸರಿಸಬೇಕು. ಇಂದಿನ ಸಿನಿಮಾಗಳಲ್ಲಿ ಅರಣ್ಯ ಸಂಪತ್ತನ್ನು ಕೊಳ್ಳೆ ಹೊಡೆದುದನ್ನು ತೋರಿಸಿ ನಾಯಕರಾಗಿ ಬೆಳ್ಳಿ ತೆರೆಯಲ್ಲಿ ಮಿಂಚಿ ಕೋಟ್ಯಂತರ ರುಪಾಯಿಗಳ ಬಂಡವಾಳವನ್ನು ಮಾಡಿಕೊಳ್ಳುತ್ತಾರೆ. ಆದರೆ ತನ್ನ ಕುಟುಂಬದ ಬದುಕನ್ನು ತ್ಯಜಿಸಿ ಹಗಲಿರುಳು ಅರಣ್ಯದ ಉಳಿವಿಗಾಗಿ ತನ್ನ ಬದುಕನ್ನು ಮುಡಿಪಿಟ್ಟ ಗೂಳೆಪ್ಪ ನಮಗೆಲ್ಲ ಆದರ್ಶವಾಗಬೇಕು. ಸರ್ಕಾರ ಈತನ ಸೇವೆಯನ್ನು ಗುರುತಿಸಿ ಈತನಿಗೆ ರಾಜ್ಯದ, ದೇಶದ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ತಿಳಿಸಿದರು.

ಕೂಡ್ಲಿಗಿ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರ್ ಮಾತನಾಡಿ, ಭಟ್ರಹಳ್ಳಿ ಗೂಳೆಪ್ಪಗೆ ಅರಣ್ಯ ಕಾಯಲು ಬಡತನ ಅಡ್ಡಿಯಾಗಿಲ್ಲ. ನಾಡುಕಂಡ ಅಪ್ರತಿಮ ಪರಿಸರ ಪ್ರೇಮಿ ಭಟ್ರಳ್ಳಿ ಗೂಳೆಪ್ಪ ಈತ ಬರೀ ವ್ಯಕ್ತಿಯಲ್ಲ ಸಮಾಜದ ಶಕ್ತಿ ಎಂದರು.

ಕಾನಮಡುಗು ದಾಸೋಹ ಮಠದ ಐಮಡಿ ಶರಣಾರ್ಯರು ಸಾನಿಧ್ಯ ವಹಿಸಿದ್ದರು. ಕಾವ್ಯ ಪ್ರಕಾಶನದಿಂದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರನ್ನು ಸನ್ಮಾನಿಸಲಾಯಿತು. ಕೊಟ್ಟೂರಿನ ಹಂಸ ಪ್ರಿಯಾ ಕಲಾನಿಕೇತನ ವಿಧ್ಯಾರ್ಥಿಗಳು ಭರತನಾಟ್ಯ ಪ್ರಸ್ತುತ ಪಡಿಸಿದರು. ಅರಣ್ಯ ರಕ್ಷಕ ಭಟ್ರಳ್ಳಿ ಗೂಳೆಪ್ಪ, ಜಿಪಂ ಮಾಜಿ ಸದಸ್ಯ ಹೊಂಬಾಳೆ ರೇವಣ್ಣ, ತಾಪಂ ಮಾಜಿ ಸದಸ್ಯ ಪಾಪನಾಯಕ, ಕಡ್ಲಿ ವೀರೇಶ್, ತಾ ಪಂ ಮಾಜಿ ಸದಸ್ಯ ಪಾಪನಾಯಕ, ನಾಟಕ ರಚನೆಕಾರ ಎನ್.ಎಂ.ರವಿಕುಮಾರ್, ಕಾಂಗ್ರೆಸ್ ಮುಖಂಡರಾದ ಕೆ. ಸುನೀಲ್ ಗೌಡ್ರು, ಬಣವಿಕಲ್ಲು ಯರಿಸ್ವಾಮಿ, ವಕೀಲರ ಸಂಘದ ಸಹ ಕಾರ್ಯದರ್ಶಿ ಡಿ.ಎಚ್.ದುರುಗೇಶ್, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಮಂಜು ಮಯೂರ, ಕಸಾಪ ತಾಲೂಕು ಅಧ್ಯಕ್ಷ ವೀರೇಶ್ ಅಂಗಡಿ, ಖಜಾಂಚಿ ಎಚ್.ವೀರಣ್ಣ, ರೈತ ಸಂಘದ ದೇವರಮನೆ ಮಹೇಶ್, ಕಾರ್ಮಿಕ ಮುಖಂಡ ಗುನ್ನಳ್ಳಿ ರಾಘವೇಂದ್ರ, ಮಂಗಳಮುಖಿ ಸ್ನೇಹಾ, ಭರವಸೆಯ ಛಾಯಾಗ್ರಾಹಕ ಉಜ್ಜಿನಿ ರವಿ, ಉಜ್ಜಿನಿ ಭೀಮಣ್ಣ, ಸೂಲದಹಳ್ಳಿ ಮಾರೇಶ್, ಅಣಜಿ ಭೀಮಣ್ಣ, ಸಿಐಟಿಯು ಮುಖಂಡ ಗುನ್ನಳ್ಳಿ ರಾಘವೇಂದ್ರ, ಸಿಪಿಐ ಪಕ್ಷದ ಮುಖಂಡ ವೀರಣ್ಣ, ರಾಮಸಾಗರಹಟ್ಟಿ ಗುರುಶಂಕರಪ್ಪ, ಮಂಗನಹಳ್ಳಿ ಶೇಖರಪ್ಪ,ಸೂಲದಹಳ್ಳಿ ನರಸಿಂಹಪ್ಪ, ಉಪನ್ಯಾಸಕ ಬಸವರಾಜ ಉಪಸ್ಥಿತರಿದ್ದರು. ಪೂಜಾ ಶ್ರೀಕಾಂತ್ ಪ್ರಾರ್ಥಿಸಿದರು. ಕೆ.ನಾಗರಾಜ ಸ್ವಾಗತಿಸಿದರು. ಹುಡೇಂ ಕೃಷ್ಣಮೂರ್ತಿ ನಿರೂಪಿಸಿದರು. ಲೇಖಕ ಭೀಮಣ್ಣ ಗಜಾಪುರ ಪ್ರಾಸ್ತಾವಿಕ ನುಡಿ ನುಡಿದರು. ಅನೇಕ ಸಾಧಕರನ್ನು ಸನ್ಮಾನ ಮಾಡಿ ಗೌರವಿಸಲಾಯಿತು. ಕೊಟ್ಟೂರಿನ ಹಂಸಪ್ರಿಯ ನೃತ್ಯನಿಕೇತನ ಕಲಾ ಟ್ರಸ್ಟ್ ಮಕ್ಕಳಿಂದ ಭರತನಾಟ್ಯ, ವಿವಿಧ ಕಲಾವಿದರಿಂದ ಭಾವಗೀತೆ ಗಾಯನ ಪ್ರೇಕ್ಷಕರ ಮನಸೆಳೆದವು.

PREV

Recommended Stories

ಆರೆಸ್ಸೆಸ್‌ ವಿಚಾರಕ್ಕೆ ಪ್ರಿಯಾಂಕ್‌ಗೆ ಬೆದರಿಕೆ ಕರೆ ಮಾಡಿದ್ದವನ ಬಂಧನ
2,350 ಕೋಟಿ ವೆಚ್ಚದಲ್ಲಿ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣಕ್ಕೆ ಒಪ್ಪಿಗೆ