ಕನ್ನಡಪ್ರಭ ವಾರ್ತೆ ರಾಮನಗರ
ನಗರದ ವಿಜಯನಗರ ಬಡಾವಣೆಯಲ್ಲಿರುವ ಶ್ರೀ ಕಾಳಿಕಾಂಬೆದೇವಿ ದೇವಾಲಯದಲ್ಲಿ ಹೋಮ, ವಿಶೇಷ ಪೂಜಾ ಕಾರ್ಯ, ಭಜನೆ, ಅನ್ನದಾನ, ಅಮ್ಮನವರ 21ನೇ ವರ್ಷದ ಭೀಮನ ಅಮಾವಾಸ್ಯೆ ಗುರುವಾರ ಅದ್ಧೂರಿಯಾಗಿ ನೆರವೇರಿತು.ದೇವಿ ವಿಗ್ರಹಕ್ಕೆ ವಿವಿಧ ಫಲ-ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆ, ಭಜನೆ ನಡೆದವು. ಮಧ್ಯಾಹ್ನ 12 ಗಂಟೆ ವೇಳೆಗೆ ಮಹಾಮಂಗಳಾರತಿ ಹಾಗೂ ಶ್ರೀ ಕಂಠೇಶ್ವರ ಶ್ರೀ ವಿಶ್ವಕರ್ಮ ದೇವರಿಗೆ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.
ಬೆಳಗ್ಗೆಯಿಂದಲೇ ನವ ವಧು-ವರ ಜೋಡಿಗಳು, ಸಾರ್ವಜನಿಕರು, ಭಕ್ತರು ಸರದಿಯಲ್ಲಿ ನಿಂತು ದೇವಿ ದರ್ಶನ ಪಡೆದು ಪುನೀತರಾದರು. ಆರಾಧನಾ ಸಂಗೀತ ಶಾಲೆಯ ಲಕ್ಷ್ಮೀದೇವಿ ಮತ್ತು ಆರ್ಯವೈಶ್ಯ ಸಮಾಜದವರಿಂದ ಸುಗಮ ಸಂಗೀತ, ನಾಗವೇಣಿ ತಂಡದವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ಮಹಿಳೆಯರು ಹೆಚ್ಚಾಗಿ ಪೂಜಿಸಿ ಆರಾಧಿಸುವ ಭೀಮನ ಅಮಾವಾಸ್ಯೆ ವಿಶೇಷ ದಿನದಂದು ಶ್ರೀ ಕಾಳಿಕಾಂಬೆ ಅಮ್ಮನವರಿಗೆ ಪೂಜೆ ಸಲ್ಲಿಸಿದ್ದೇನೆ. ತಾಯಿಯ ಆಶೀರ್ವಾದ ಕ್ಷೇತ್ರದ ಜನರ ಮೇಲಿರಲಿ, ಅವರ ಬಾಳಲ್ಲಿ ಸುಖ-ಶಾಂತಿ-ನೆಮ್ಮದಿ ಕರುಣಿಸಲಿ, ನನಗೂ ಜನಸೇವೆ ಮಾಡಲು ಹೆಚ್ಚಿನ ಶಕ್ತಿ ನೀಡುವಂತೆ ಪ್ರಾರ್ಥಿಸಿರುವುದಾಗಿ ಹೇಳಿದರು.
ರಾಜ್ಯ ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ಬಿ.ಉಮೇಶ್ ಮಾತನಾಡಿ, ವಿಜಯನಗರದ ಬಡಾವಣೆಯಲ್ಲಿ ನೆಲೆಯೂರಿರುವ ಕಾಳಿಕಾಂಬೆ ಶಕ್ತಿ ದೇವತೆಯಾಗಿದ್ದು, ನಂಬಿ ಬಂದ ಜನರ ಕಷ್ಟಗಳನ್ನು ನಿವಾರಿಸುವ ದೇವತೆಯಾಗಿದ್ದಾಳೆ. ಇದು 21ನೇ ವರ್ಷದ ಆಚರಣೆಯಾಗಿದ್ದು, ಪ್ರತಿವರ್ಷ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಈ ವರ್ಷ ಸುಮಾರು 6 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಅನ್ನ ಪ್ರಸಾದ ವ್ಯವಸ್ಥೆ ವಿಶ್ವಕರ್ಮ ಸಮಾಜದ ಎಲ್ಲ ನಿರ್ದೇಶಕರ ಸಹಕಾರದಲ್ಲಿ ಯಶಸ್ವಿಯಾಗಿ ನೆರವೇರುತ್ತಿದೆ ಎಂದರು.ಕಾಳಿಕಾಂಬೆ ದೇವಾಲಯದ ಶೈವ ಆಗಮಿಕ ಪ್ರಧಾನ ಅರ್ಚಕ ಶ್ರೀಧರ ಆಚಾರ್ಯ ಮಾತನಾಡಿ, ಭೀಮನ ಅಮಾವಾಸ್ಯೆಯಂದು ತಮ್ಮ ಮನೆಗಳಲ್ಲಿ ಸುಮಂಗಲಿಯರು ತಮ್ಮ ಪತಿಗೆ ಪಾದಪೂಜೆ ನೆರವೇರಿಸಿ ನಂತರ ದೇವಾಲಯಕ್ಕೆ ಬಂದು ಅಮ್ಮನವರ ಅನುಗ್ರಹ ಪಡೆದು ಹೋಮದಲ್ಲಿ ಪೂರ್ಣಾಹುತಿ ಗಿಡಮೂಲಿಕೆ ಅರ್ಪಣೆ ಮಾಡಿ, ನಂತರ ಮಡಿಲು ತುಂಬುವ ಸೇವೆ ಭಕ್ತಿ ಸಮರ್ಪಿಸಿ, ಅನ್ನಪ್ರಸಾದ ಸ್ವೀಕರಿಸುವುದರಿಂದ ತಮ್ಮ ಇಷ್ಟಾರ್ಥಗಳು ಒದಗಿಸುತ್ತವೆ. ಅಲ್ಲದೆ ದಂಪತಿಗಳಲ್ಲಿ ದೋಷಗಳಿದ್ದರೆ ನಿವಾರಣೆಯಾಗುವ ಜೊತೆಗೆ ಕುಟುಂಬದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ. ಈ ದೇವಾಲಯದ ವಿಶೇಷತೆಯೆಂದರೆ ಅಮ್ಮನವರನ್ನು ನಂಬಿ ಬಂದವರಿಗೆ ಮಾಂಗಲ್ಯ ಭಾಗ್ಯ, ಸಂತಾನ ಅಭಿವೃದ್ಧಿಯಾಗಲಿವೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ಪೌರಾಯುಕ್ತ ಡಾ.ಜಯಣ್ಣ, ಸಬ್‌ಇನ್ಸ್‌ಪೆಕ್ಟರ್ ಸರಸ್ವತಿ, ತಾಲೂಕು ಜೆಡಿಎಸ್ ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ಮುಖಂಡರಾದ ಸಿ.ರಾಜಶೇಖರ್, ಹುಣಸನಹಳ್ಳಿ ಕಾಂತರಾಜು, ವಿದ್ಯುತ್ ಗುತ್ತಿಗೆದಾರ ವೆಂಕಟೇಶ್, ನಾಗರಾಜು, ರಾಜ್ಯ ವಿಶ್ವಕರ್ಮ ಸಮಾಜದ ಅಧ್ಯಕ್ಷ ಪಿ.ಲಿಂಗಾಚಾರ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್‌ಮೂರ್ತಿ, ಖಜಾಂಚಿ ಎನ್.ರಮೇಶ್, ಉಪಾಧ್ಯಕ್ಷರಾದ ಜಿ.ರಾಜಪ್ಪಾಜಿ, ಎನ್.ದೇವರಾಜು, ಸಂಘಟನಾ ಕಾರ್ಯದರ್ಶಿಗಳಾದ ಬಿ.ನಾಗೇಶ್, ವಿ.ಪ್ರಭಾಕರ್, ಸಹಕಾರ್ಯದರ್ಶಿ ಲೋಕೇಶ್, ಬಸವಲಿಂಗಾಚಾರ್, ಕಾನೂನು ಸಲಹೆಗಾರ ರಾಜಶೇಖರ್ ಸೇರಿದಂತೆ ಚುನಾಯಿತ ಪ್ರತಿನಿಧಿಗಳು, ವಿವಿಧ ಸಮಾಜಗಳ ಗಣ್ಯರು ಕಾಳಿಕಾಂಬೆ ದೇವಿ ಅಮ್ಮನವರಿಗೆ ವಿಶೇಷ ಪೂಜೆ ನೆರವೇರಿಸಿ ಪ್ರಸಾದ ಸ್ವೀಕರಿಸಿದರು.