ಸ್ವಾಭಿಮಾನಕ್ಕಾಗಿ ಭೀಮಾ ಕೋರೆಗಾಂವ್ ಕದನ

KannadaprabhaNewsNetwork |  
Published : Jan 02, 2025, 12:32 AM IST
ಬೇಲೂರು:  ಫೋಟೋಬೇಲೂರು ತಾಲೂಕಿನ ನಾರ್ವೆಪೇಟೆಯಲ್ಲಿ ಆಯೋಜಿಸಲಾಗಿದ್ದ 207 ನೇ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. | Kannada Prabha

ಸಾರಾಂಶ

ಬಾಬಾ ಸಾಹೇಬ್ ಡಾ. ಅಂಬೇಡ್ಕರ್‌ ಅವರು ಪ್ರತಿ ಜ.1ರಂದು ಕೋರೆಗಾಂವ್‌ಗೆ ಆಗಮಿಸಿ ಅಲ್ಲಿರುವ ಹುತಾತ್ಮ ಅಸ್ಪೃಶ್ಯ ಮಹಾನ್‌ ಯೋಧರ ಸ್ಮಾರಕ ವಿಜಯಸ್ಥಂಭಕ್ಕೆ ಗೌರವಪೂರ್ವಕ ನಮನ ಸಲ್ಲಿಸುತ್ತಿದ್ದರು. ಅಂಬೇಡ್ಕರ್‌ ರವರ ಹೋರಾಟದ ಬದುಕಿನಲ್ಲಿ ಮಹಾರ್ ಯೋಧರ ಹೋರಾಟ ಪ್ರೇರಣೆ ನೀಡಿತ್ತು ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಉಸ್ತುವಾರಿ ಗಂಗಾಧರ್ ಬಹುಜನ್ ತಿಳಿಸಿದರು. ನಾರ್ವೆಪೇಟೆಯಲ್ಲಿ ಆಯೋಜಿಸಲಾಗಿದ್ದ 207ನೇ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೇಲೂರು ಬಾಬಾ ಸಾಹೇಬ್ ಡಾ. ಅಂಬೇಡ್ಕರ್‌ ಅವರು ಪ್ರತಿ ಜ.1ರಂದು ಕೋರೆಗಾಂವ್‌ಗೆ ಆಗಮಿಸಿ ಅಲ್ಲಿರುವ ಹುತಾತ್ಮ ಅಸ್ಪೃಶ್ಯ ಮಹಾನ್‌ ಯೋಧರ ಸ್ಮಾರಕ ವಿಜಯಸ್ಥಂಭಕ್ಕೆ ಗೌರವಪೂರ್ವಕ ನಮನ ಸಲ್ಲಿಸುತ್ತಿದ್ದರು. ಅಂಬೇಡ್ಕರ್‌ ರವರ ಹೋರಾಟದ ಬದುಕಿನಲ್ಲಿ ಮಹಾರ್ ಯೋಧರ ಹೋರಾಟ ಪ್ರೇರಣೆ ನೀಡಿತ್ತು ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಉಸ್ತುವಾರಿ ಗಂಗಾಧರ್ ಬಹುಜನ್ ತಿಳಿಸಿದರು.

ತಾಲೂಕಿನ ನಾರ್ವೆಪೇಟೆಯಲ್ಲಿ ಆಯೋಜಿಸಲಾಗಿದ್ದ 207ನೇ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ಪ್ರತಿ ವರ್ಷ ಜನವರಿ 1, ಇಡೀ ಜಗತ್ತಿಗೆ ಹೊಸವರ್ಷದ ಸಂಭ್ರಮದ ದಿನವಾದರೆ ಭಾರತದ ಅಸ್ಪೃಶ್ಯರ ಪಾಲಿಗೆ ಇದು ಅಸ್ಪೃಶ್ಯತೆಯ ವಿರುದ್ಧ ಬಂಡೆದ್ದ ಮಹಾರ್ ಗುಂಪೊಂದು ಮಹಾರಾಷ್ಟ್ರದ ಪೇಶ್ವಗಳ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿ ದಿಗ್ವಿಜಯ ಸಾಧಿಸಿ ಆತ್ಮಗೌರವದಿಂದ ತಲೆಯೆತ್ತಿ ನೆಡೆಯಲು ಅಸ್ಪೃಶ್ಯರಿಗೆ ಸ್ವಾಭಿಮಾನ ತಂದುಕೊಟ್ಟ ದಿನವಾಗಿದೆ. ಮಹಾರಾಷ್ಟ್ರದಲ್ಲಿ ಪೇಶ್ವೆಗಳು ಆಡಳಿತ ನಡೆಸುತ್ತಿದ್ದ ಕ್ರಿ.ಶ.1800ರ ಕಾಲಘಟ್ಟ ಅಸ್ಪೃಶ್ಯರ ಪಾಲಿನ ಕರಾಳ ದಿನಗಳಾಗಿದ್ದವು. ಅಸ್ಪಶ್ಯತೆ ಆಚರಣೆಯ ಕಠೋರತೆಯು ತುಂಬಾ ಅಮಾನುಷವಾಗಿತ್ತು ಮತ್ತು ಘೋರವಾಗಿತ್ತು ಎಂದರು.

ಸಾರ್ವಜನಿಕ ಸ್ಥಳಗಳಲ್ಲಿ ಅಸ್ಪೃಶ್ಯರ ಪ್ರವೇಶ ಸಂಪೂರ್ಣ ನಿಷಿದ್ಧವಾಗಿತ್ತು, ಅವರ ನೆರಳು ಸಹ ಸವರ್ಣೀಯರ ಮೇಲೆ ಬೀಳುವಂತಿರಲಿಲ್ಲ. ವಿದ್ಯೆ ಕಲಿಯುವ, ಆಸ್ತಿ ಹೊಂದುವ, ಆಯುಧ ಹಿಡಿಯುವ ಹಕ್ಕುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಹಿಂದೂ ಸವರ್ಣೀಯರು ಮತ್ತು ಪೇಶ್ವೆ ಸೈನಿಕರು ಅಸ್ಪೃಶ್ಯ ಮಹಿಳೆಯರ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರೂ ಸಹ ಯಾವುದೇ ಚಕಾರವೆತ್ತದೆ ನೋಡಿಕೊಂಡು ಮೌನವಾಗಿಬೇಕಾಗಿತ್ತು.

ಇದೇ ಸಮಯದಲ್ಲಿ ಭಾರತದ ಬಹುತೇಕ ಭಾಗವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದ ಬ್ರಿಟೀಷರಿಗೆ ಮಹಾರಾಷ್ಟ್ರದ ಪೇಶ್ವೆಗಳನ್ನು ಬಗ್ಗುಬಡಿದು ತಮ್ಮ ಆಡಳಿತ ವಿಸ್ತರಿಸಿಕೊಳ್ಳಲು ತೀರ್ಮಾನಿಸಿ ಪೇಶ್ವೆಗಳ ಮೇಲೆ ಯುದ್ಧ ಘೋಷಿಸಿ ಅದರ ಜವಾಬ್ದಾರಿಯನ್ನು ಕ್ಯಾಪ್ಟನ್ ಸ್ಟಂಡನ್ ಗರಡಿಯಲ್ಲಿ ಪಳಗಿದ್ದ ಸಿದನಾಕ ನೇತೃತ್ವದ ಮಹಾರ್ ರೆಜಿಮೆಂಟ್‌ಗೆ ವಹಿಸಿದರು ಎಂದು ವಿವರಿಸಿದರು.

ಪೇಶ್ವಗಳ ದೌರ್ಜನ್ಯ, ದಬ್ಬಾಳಿಕೆಗಳಿಂದ ರೋಸಿಹೋಗಿದ್ದ ಮಹಾರಾಷ್ಟ್ರದ ಅಸ್ಪೃಶ್ಯ ಮಹಾರ್ ಯುವಕರು ಪೇಶ್ವಗಳ ಬಿಸಿ ರಕ್ತ ಕುಡಿಯಲು ಹಾತೊರೆಯುತ್ತಿದ್ದರು. ತಮ್ಮ ಕಷ್ಟ ಮತ್ತು ಅಪಮಾನಗಳ ಪರಿಹಾರಕ್ಕಾಗಿ ಒದಗಿ ಬಂದ ಈ ಸುವರ್ಣಾವಕಾಶವನ್ನು ಮನಃಪೂರ್ವಕವಾಗಿ ಸ್ವೀಕರಿಸಿದ ಮಹಾರ್ ರೆಜಿಮೆಂಟ್ ಸಿದನಾಕನ ನಾಯಕತ್ವದಲ್ಲಿ 500 ಜನ ಯುವ ಸೈನಿಕರು ಪೇಶ್ವೆಗಳ ವಿರುದ್ಧ ಯುದ್ಧ ಮಾಡಲು ಸಿದ್ಧರಾದರು. ಕ್ರೋಧಗೊಂಡ ಮಹಾರ್ ಸೈನಿಕರು ವ್ಯಾಘ್ರಗಳಂತಾಗಿ 1817ರ ಡಿಸೆಂಬರ್ 31ರ ರಾತ್ರಿ ಸಿರೂರಿನಿಂದ ಯುದ್ಧ ಭೂಮಿ ಕೋರೆಗಾಂವ್‌ಗೆ ಪ್ರಯಾಣ ಬೆಳೆಸಿ 27 ಕಿಲೋ ಮೀಟರ್‌ ಕಾಲ್ನಡಿಗೆಯಲ್ಲಿ ಸಾಗಿ ಭೀಮಾನದಿ ತೀರದಲ್ಲಿರುವ ಕೋರೆಗಾಂವ್ ಎಂಬ ಸ್ಥಳವನ್ನು ಸಿದ್ಧನಾಕನ ಪಡೆ ತಲುಪುತ್ತದೆ. ಮರುದಿನ ಜನವರಿ 1ನೇ ತಾರೀಖು 1918 ರಂದು ಮಹಾರ್ ಸೈನಿಕರು, ಪೇಶ್ವೆ ಸೈನ್ಯವನ್ನು ಬಗ್ಗುಬಡಿಯಲು ಸನ್ನದ್ಧರಾದರು.ಇಡೀ ರಾತ್ರಿ ನಿದ್ದೆಯಿಲ್ಲದೆ 27 ಕಿ.ಮೀ ದೂರವನ್ನು ನಡೆದುಕೊಂಡು ಬಂದಿದ್ದ ಈ ಅಸ್ಪಶ್ಯ ಯೋಧರ ಪಡೆ ನಿದ್ರೆ, ಆಯಾಸವನ್ನು ಲೆಕ್ಕಿಸದೇ ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಪೇಶ್ವ ಸೈನಿಕರ ಮೇಲೆ ಎರಗುತ್ತಾರೆ. ಬರೋಬ್ಬರಿ 28 ಸಾವಿರ ಪೇಶ್ವೆ ಸೈನಿಕರು ಮೂರೂ ದಿಕ್ಕಿನಿಂದ ಅಸ್ಪೃಶ್ಯ ಯೋಧರನ್ನು ಸುತ್ತವರೆಯುತ್ತಾರೆ. ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ಸತತ 12 ಗಂಟೆಗಳ ಕಾಲ ನಡೆದ ಈ ಘೋರ ಯುದ್ಧದಲ್ಲಿ ಹಸಿದ ಹೆಬ್ಬುಲಿಗಳಂತಿದ್ದ ಅಸ್ಪೃಶ್ಯ ಯೋಧರು ಪೇಶ್ವ ಸೈನ್ಯವನ್ನು ಧೂಳಿಪಟ ಮಾಡುತ್ತಾರೆ. ಇಡೀ ಯುದ್ಧ ಭೂಮಿಯ ತುಂಬ ರಕ್ತದ ಕೋಡಿಯೇ ಹರಿಯುತ್ತದೆ. ಸಾವಿರಾರು ಸೈನಿಕರು ಯುದ್ಧಭೂಮಿಯಲ್ಲಿ ಸಾವನ್ನಪ್ಪುತ್ತಾರೆ.

ಸತತ 12 ಗಂಟೆಗಳ ಕಾಲ ನಡೆದ ಈ ಘೋರ ಕಾಳಗದಲ್ಲಿ 5000ಕ್ಕೂ ಹೆಚ್ಚು ಪೇಶ್ವೆ ಸೈನಿಕರು ಯುದ್ಧ ಭೂಮಿಯಲ್ಲಿ ಸಾವನ್ನಪ್ಪಿದರೆ, ಕೇವಲ 22 ಜನ ಮಹಾರ್ ಯೋಧರು ವೀರ ಮರಣವನ್ನಪ್ಪಿದ್ದರು. ದುರಂತವೆಂದರೆ ಈ ಯುದ್ಧದಲ್ಲಿ ಮಹಾರ್ ರೆಜಿಮೆಂಟ್‌ನ ನಾಯಕನಾಗಿದ್ದ ಸಿದ್ದನಾಕನು ಸಹ ವೀರ ಮರಣವನ್ನಪ್ಪುತ್ತಾನೆ. ಈ ರಣರಂಗದಲ್ಲಿ ಬೃಹತ್ ಸಂಖ್ಯೆಯಲ್ಲಿದ್ದ ಪೇಶ್ವ ಸೈನಿಕರ ಜೊತೆ ವೀರಾವೇಶದಿಂದ ಹೋರಾಡಿ ಜಯ ತಂದುಕೊಟ್ಟು ಹುತಾತ್ಮರಾದ 22 ಅಸ್ಪೃಶ್ಯ ಯೋಧರ ನೆನಪಿಗಾಗಿ ಬ್ರಿಟೀಷರು ಯುದ್ಧ ನಡೆದ ಸ್ಥಳದಲ್ಲಿ ಕೋರೆಗಾಂವ್‌ನಲ್ಲಿ 65 ಅಡಿ ಎತ್ತರದ ಭವ್ಯ ವಿಜಯ ಸ್ತಂಭವನ್ನು ನಿರ್ಮಿಸಿ ಆ ಸ್ಥಂಬದ ಮೇಲೆ 22 ಹುತಾತ್ಮ ಯೋಧರ ಹೆಸರುಗಳನ್ನು ಕೆತ್ತಿಸಿದ್ದಾರೆ.

ಸ್ವಾಭಿಮಾನದ ಗೌರವಯುತ ಬದುಕಿಗಾಗಿ ಮಹಾರ್ ಸೈನಿಕರು ಅನಿವಾರ್ಯವಾಗಿ ಬ್ರಿಟೀಷರ ಪರವಾಗಿ ಯುದ್ಧ ಮಾಡಬೇಕಾಯಿತು. ಅಸ್ಪೃಶ್ಯರಿಗೆ ಆಯುಧ ಹಿಡಿಯುವ ಹಕ್ಕು ನಿರಾಕರಿಸದಿದ್ದರೆ ಈ ದೇಶ ಎಂದೂ ತನ್ನ ಸ್ವಾತಂತ್ರ್ಯವನ್ನು ಕಳೆದು ಕೊಳ್ಳುತ್ತಿರಲಿಲ್ಲ ಎಂದರು. ಇಂತಹ ಅಸ್ಪೃಶ್ಯ ಮಹಾರ್ ಸೈನಿಕರ ಯಶೋಗಾಥೆ ಇಂದಿನ ಎಲ್ಲಾ ತಳಸಮುದಾಯಗಳ ಚಳುವಳಿಗಳಿಗೆ ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು ಎಂದರು.

ಕಾರ್ಯಕ್ರಮದಲ್ಲಿ ನಾರ್ವೆಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಮಾಲಾಶ್ರೀ, ಸಮಿತಿಯ ಅಧ್ಯಕ್ಷ ಚಂದ್ರು ಬಹುಜನ್, ವಕೀಲರಾದ ರಾಜು ಅರೇಹಳ್ಳಿ, ರಾಜೇಶ್ ಸಾಣೇನಹಳ್ಳಿ, ಗ್ರಾ.ಪಂ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ, ಸದಸ್ಯರಾದ ಪವಿತ್ರ, ಬೇಬಿ, ಮಲ್ಲಿಕಾರ್ಜುನ, ಶಿವರಾಜ್, ಸೋಮಶೇಖರ್ ಮಲಸಾವರ, ಮಾಜಿ ತಾ.ಪಂ. ಸದಸ್ಯ ಸೋಮಯ್ಯ, ರಾಜು ಬೆಳ್ಳೊಟ್ಟೆ, ನಿಂಗರಾಜು , ಉಮೇಶ್.ಪುಟ್ಟಸ್ವಾಮಿ, ಅಣ್ಣಪ್ಪ, ಮಲ್ಲೇಶ್, ಪುನೀತ್, ಮೂರ್ತಿ, ಲೋಕೇಶ್, ಪರಮೇಶ, ನಿಂಗರಾಜು ನಾರ್ವೆ, ಬಾಬಾಣ್ಣ, ಶಿಕ್ಷಕರಾದ ಸೈಯ್ಯದ್ ಕಲಿಂ, ಲೋಕೇಶ್, ಶೇಷಪ್ಪ, ಮಲ್ಲಿಗಮ್ಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌