2026-27ನೇ ಸಾಲಿನ ಆಯ-ವ್ಯಯ ತಯಾರಿಕೆಯ ಪೂರ್ವಭಾವಿಯಾಗಿ ಸಾರ್ವಜನಿಕ ಸಮಾಲೋಚನಾ ಸಭೆ ನಡೆಸಿ ಸಾರ್ವಜನಿಕರ ಸಲಹೆ, ಸೂಚನೆಗಳನ್ನು ಗಮನಿಸಿ ವಿಶೇಷ ಯೋಜನೆಗಳನ್ನು ಈ ಬಜೆಟ್‌ನಲ್ಲಿ ಅಳವಡಿಸಿಕೊಳ್ಳಲಾಗಿದೆ.
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
2026-27ನೇ ಸಾಲಿನ ಆಯ-ವ್ಯಯ ತಯಾರಿಕೆಯ ಪೂರ್ವಭಾವಿಯಾಗಿ ಸಾರ್ವಜನಿಕ ಸಮಾಲೋಚನಾ ಸಭೆ ನಡೆಸಿ ಸಾರ್ವಜನಿಕರ ಸಲಹೆ, ಸೂಚನೆಗಳನ್ನು ಗಮನಿಸಿ ವಿಶೇಷ ಯೋಜನೆಗಳನ್ನು ಈ ಬಜೆಟ್‌ನಲ್ಲಿ ಅಳವಡಿಸಿಕೊಳ್ಳಲಾಗಿದೆ.ಎಲ್ಲಾ ಮೂಲಗಳಿಂದ ₹3,111.20 ಲಕ್ಷಗಳ ಆದಾಯ ಮತ್ತು 3,104.07 ಲಕ್ಷದಷ್ಟು (₹31.11 ಕೋಟಿ ಆದಾಯ, ₹31.04 ಕೋಟಿ ವೆಚ್ಚ ) ವೆಚ್ಚವನ್ನು ಅಳವಡಿಸಿಕೊಂಡು ₹7.22 ಲಕ್ಷಗಳ ಒಟ್ಟು ನಿರೀಕ್ಷಿತ ಉಳಿತಾಯ ಬಜೆಟ್ ಮಂಡಿಸಿದ್ದು, ಇದಕ್ಕೆ ಪುರಸಭೆಯ ಆಡಳಿತಾಧಿಕಾರಿಗಳಾಗಿರುವ ಬಾಗಲಕೋಟೆಯ ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ ಅವರ ಅನುಮೋದನೆಯೂ ದೊರೆತಿದೆ ಪುರಸಭೆ ಮುಖ್ಯಾಧಿಕಾರಿ ಎ.ಎಚ್. ಮುಜಾವರ ತಿಳಿಸಿದ್ದಾರೆ.
ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಚುನಾವಣೆ ನೀತಿ ಸಂಹಿತೆ ಇರುವುದರಿಂದ ಬಜಟ್ ಪ್ರಕಟಣೆ ನೀಡಿರಲಿಲ್ಲ. ಹೀಗಾಗಿ ಬಜೆಟ್ ಅನುಮೋದನೆ ತಡವಾಗಿ ಸಿಕ್ಕಿದೆ ಎಂದರು.ಆದಾಯದ ಮೂಲಗಳು: ಪಟ್ಟಣದ ಪುರಸಭೆಯ 2026-27ನೇ ಸಾಲಿನ ಆಯವ್ಯಯದ ಆದಾಯದ ತೆರಿಗೆ ಮೂಲಗಳಾದ ಕಟ್ಟಡ ಆಸ್ತಿ ತೆರಿಗೆ ಮೂಲಕ ₹1.20 ಕೋಟಿ, ಅಂಗಡಿ ಮಳಿಗೆಗಳ ಬಾಡಿಗೆಯಿಂದ ₹60 ಲಕ್ಷ, ಘನತ್ಯಾಜ್ಯ ನಿರ್ವಹಣಾ ಶುಲ್ಕದಿಂದ ₹22 ಲಕ್ಷ, ನೀರಿನ ಶುಲ್ಕದಿಂದ ₹80 ಲಕ್ಷ, ಮುಖ್ಯ ಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮಗಳ ಅನುದಾನ ₹4 ಕೋಟಿ, ಸರಕಾರದ ಎಸ್.ಎಫ್.ಸಿ. ವೇತನ ₹3. 25 ಕೋಟಿ, ವಿದ್ಯುತ್ ಅನುದಾನ ₹2.63 ಕೋಟಿ, 16ನೇ ಹಣಕಾಸು ಯೋಜನೆಯಿಂದ ₹2.90 ಕೋಟಿ, ಸ್ವಚ್ಛ ಭಾರತ ಮಿಷನ್ ಯೋಜನೆಯ ಅನುದಾನದಿಂದ ₹1.50 ಕೋಟಿ ಹೀಗೆ ಒಟ್ಟು 21 ಆದಾಯದ ಮೂಲಗಳಿಂದ ₹31.11 ಕೋಟಿ ಆದಾಯವನ್ನು 12 ವಿವಿಧ ಅನುದಾನ ಮತ್ತು ಯೋಜನೆಗಳಿಂದ ನಿರೀಕ್ಷಿಸಲಾಗಿದೆ. ಇವುಗಳಲ್ಲದೇ 5 ಮೀಸಲು ನಿಧಿಗಳು ಇವೆ.
ಪ್ರಮುಖ ವೆಚ್ಚಗಳು : ಇದರಲ್ಲಿ ಒಟ್ಟು 43 ವೆಚ್ಚದ ಕಾಮಗಾರಿಗಳನ್ನು ಪುರಸಭೆ ಹಾಕಿಕೊಂಡಿದೆ. ಅವುಗಳಲ್ಲಿ ಪಟ್ಟಣದ ರಸ್ತೆಗಳ ನಿರ್ಮಾಣ ಕಾಮಗಾರಿಗೆ ₹3.5 ಕೋಟಿ, ಒಳಚರಂಡಿ, ರಸ್ತೆಗಳ ದುರಸ್ತಿ ಕಾಮಗಾರಿಗೆ ₹12 ಲಕ್ಷ, ಒಳಚರಂಡಿ ನಿರ್ಮಾಣ ಕಾಮಗಾರಿಗೆ ₹1.5 ಕೋಟಿ ಪೌರ ಕಾರ್ಮಿಕರ ವಿಶ್ರಾಂತಿ ಗೃಹ ನಿರ್ಮಾಣಕ್ಕೆ ₹20 ಲಕ್ಷ, ಹೊಸಪೇಟೆ ವೃತ್ತ, ಬನ್ನಿಕಟ್ಟಿಯಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ₹1 ಕೋಟಿ, ನೀರು ಸರಬರಾಜು ಹೊರಗುತ್ತಿಗೆ ಕಾರ್ಮಿಕರ ವೇತನ ₹80 ಲಕ್ಷ, ಪಟ್ಟಣದ ಬೀದಿ ದೀಪಗಳು, ನೀರು ಸರಬರಾಜು ವಿದ್ಯುತ್ತ ವೆಚ್ಚ ₹4.58 ಕೋಟಿ ಹೀಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ₹31.04 ಕೋಟಿಯನ್ನು ವೆಚ್ಚಕ್ಕೆ ಅಳವಡಿಸಿಕೊಳ್ಳಲಾಗಿದೆ. ಹೀಗಾಗಿ ಎಲ್ಲಾ ಮೂಲಗಳಿಂದ ₹31.11 ಕೋಟಿಗಳ ಆದಾಯ ಮತ್ತು ₹31.04 ಕೋಟಿಗಳ ವೆಚ್ಚ ಅಳಡಿಸಿಕೊಂಡು ₹7.22 ಲಕ್ಷಗಳ ಉಳಿತಾಯವನ್ನು ಪ್ರಸಕ್ತ ಸಾಲಿನಲ್ಲಿ ಪುರಸಭೆ ನೀರಿಕ್ಷಿಸಲಾಗಿದೆ ಎಂದು ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.