ಮೆದುಳಿನ ಶಿಕ್ಷಣಕ್ಕಿಂತ ಹೃದಯದ ಶಿಕ್ಷಣವಿರಬೇಕು

KannadaprabhaNewsNetwork |  
Published : Jan 12, 2026, 03:15 AM IST
52 | Kannada Prabha

ಸಾರಾಂಶ

ಭೀಮಾ ಕೋರೆಂಗಾವ್ ವಿಜಯೋತ್ಸವವೂ ಸ್ವಾಭಿಮಾನದ ಸಂಕೇತ

ಕನ್ನಡಪ್ರಭ ವಾರ್ತೆ ನಂಜನಗೂಡು

ಮೆದುಳಿನ ಶಿಕ್ಷಣಕ್ಕಿಂತ ಹೃದಯದ ಶಿಕ್ಷಣವಿರಬೇಕು. ದಲಿತರ ಭವಿಷ್ಯ, ಶಿಕ್ಷಣ ಮತ್ತು ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ಸಂವಿಧಾನವನ್ನು ಮೌನವಾಗಿ ಮುಗಿಸುತ್ತಿದ್ದಾರೆ ಎಂದು ಉರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ನಂಜನಗೂಡಿನ ಡಾ.ಬಿ.ಆರ್. ಅಂಬೇಡ್ಕರ್ ಭವನದ ಆವರಣದಲ್ಲಿ ದಲಿತ ಸಂಘಟನೆಗಳ ಒಕ್ಕೂಟವು 208ನೇ ಭೀಮಾ ಕೋರೆಂಗಾವ್ ವಿಜಯೋತ್ಸವದ ಅಂಗವಾಗಿ ಆಯೋಜಿಸಿದ್ದ ನಂಜನಗೂಡಿನಲ್ಲಿ ಸಂಘ ಪರಿವಾರದ ಒಳಸಂಚು ಮತ್ತು ದಲಿತ ಚಳವಳಿಗಳ ಪ್ರತಿರೋಧ ಜನ ಜಾಗೃತಿ ಸಮಾವೇಶವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಭೀಮಾ ಕೋರೆಂಗಾವ್ ವಿಜಯೋತ್ಸವವೂ ಸ್ವಾಭಿಮಾನದ ಸಂಕೇತವಾಗಿದೆ. ಮಹಾರ್ ಸೈನಿಕರು ಅಂದಿನ ಭೀಮಾ ಕೋರೆಂಗಾವ್ ಯುದ್ಧದಿಂದ ನಮಗೆ ಹಕ್ಕುಗಳನ್ನು ನೀಡಿದ್ದಾರೆ. ಅದರ ಪ್ರತಿಫಲವಾಗಿ ಇಂದು ನಾವು ಬದುಕುತ್ತಿದ್ದೇವೆ. ಅಂಬೇಡ್ಕರ್ ಅವರು ಇದ್ದಾಗನಿಂದಲೂ ಒಳ ಸಂಚುಗಳು ನಡೆಯುತ್ತಲೇ ಇವೆ. ನಾವು ಎಚ್ಚರಿಕೆಯಿಂದ ಇರಬೇಕು ಎಂದು ಅವರು ಹೇಳಿದರು.

ಮತದಾನದ ಹಕ್ಕುಗಳನ್ನು ಕಸಿಯುತ್ತಿದ್ದಾರೆ. ಸಂವಿಧಾನವನ್ನು ನಾವೇ ಸೋಲಿಸುತಿದ್ದೇವೆ. ಇವತ್ತಿಗೂ ದಲಿತರ ಮೇಲೆ ದೌರ್ಜನ್ಯ, ಅತ್ಯಾಚಾರದಂತಹ ಪ್ರಕರಣಗಳು ನಡೆಯುತ್ತಿವೆ. ಶೇ.42 ರಷ್ಟು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹಣದ ಆಸೆಗೆ ಮತವನ್ನು ಮಾರಿಕೊಂಡು ಬಾಬಾ ಸಾಹೇಬರಿಗೆ ದ್ರೋಹ ಬಗೆಯಬೇಡಿ. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ಉನ್ನತ ಹುದ್ದೆಗಳನ್ನು ಅಲಂಕರಿಸುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ವಿಶ್ವವಿದ್ಯಾನಿಲಯಗಳು ಜಾತಿಯ ಕೇಂದ್ರಗಳಾಗಿವೆ. ಸಮುದಾಯವು ಮೌಡ್ಯದ ಕಡೆ ಹೋಗುತ್ತಿರುವುದು ದುರಂತ. ಎಸ್ಐಆರ್ ಕಡ್ಡಾಯವಾಗಿ ನಿಷೇಧ ಮಾಡುವಂತೆ ಅವರು ಆಗ್ರಹಿಸಿದರು.

ದಸಂಸ ಜಿಲ್ಲಾ ಸಂಚಾಲಕ ಚುಂಚನಹಳ್ಳಿ ಮಲ್ಲೇಶ್ ಮಾತನಾಡಿ, ಸಮುದಾಯವು ಹರಿದು ಹಂಚಿ ಹೋಗುತ್ತಿದೆ. ಒಳ ಮೀಸಲಾತಿ ಹೋರಾಟದಿಂದ ಸಮುದಾಯಕ್ಕೆ ಅನ್ಯಾಯವಾಗುತ್ತಿತ್ತು. ಇದಕ್ಕೆ ಜ್ಞಾನಪ್ರಕಾಶ ಸ್ವಾಮೀಜಿ ಹೋರಾಟ ನಡೆಸಿದ್ದ ಪರಿಣಾಮವಾಗಿ ನಮ್ಮ ಸಮುದಾಯದ ಶಿಕ್ಷಣಕ್ಕೆ ಅನುಕೂಲವಾಗಿದೆ. ರಾಜಕೀಯ ನಾಯಕರು ಸಮುದಾಯದ ಹಿತವನ್ನು ಕಾಪಾಡುತ್ತಿಲ್ಲ. ಹಾಗಾದರೆ ಹೋರಾಟ ಮಾಡುವವರು ಯಾರು ಎಂದು ಪ್ರಶ್ನಿಸಿದರು.

ಮೈಸೂರು ವಿವಿ ಡಾ.ಬಿ.ಆರ್ ಅಂಬೇಡ್ಕರ್ ಸಂಶೋಧನಾ ವಿಸ್ತರಣಾ ಕೇಂದ್ರದ ಹಿರಿಯ ಪ್ರಾಧ್ಯಾಪಕ ಡಾ.ಜೆ. ಸೋಮಶೇಖರ್ ಮಾತನಾಡಿ, ಹೊರ ಶತ್ರುಗಳಿಗಿಂತ ಒಳ ಶತ್ರುಗಳು ಅಪಾಯಕಾರಿ. ಬಾಬಾ ಸಾಹೇಬರ ಪ್ರಬುದ್ಧ ಭಾರತದ ನಿರ್ಮಾಣದ ಕನಸು ಈಡೇರಿಸುವಲ್ಲಿ ನಾವು ವಿಫಲರಾಗಿದ್ದೇವೆ. ಬಾಬಾ ಸಾಹೇಬರಿಂದ ನಮಗೆ ಬದುಕು ಸಿಕ್ಕಿದೆ. ನಾವು ಪ್ರಬುದ್ಧರಾಗಬೇಕು. ಬುದ್ಧನ ಜ್ಞಾನ, ಬುದ್ಧನ ದಾರಿಯಿಂದ ಎಂತಹ ಸಂಚುಗಳನ್ನು ಕೂಡ ನಾವು ಸವಾಲಾಗಿ ಸ್ವೀಕರಿಸಿ ಪ್ರಬುದ್ಧ ಭಾರತವನ್ನು ಕಟ್ಟಬಹುದು ಎಂದರು.

ಸಮಾಜದಲ್ಲಿ ಜಾತಿ ಮತ್ತು ಉಪಜಾತಿಯ ಸಂಘಟನೆಗಳು ವಿಜೃಂಭಿಸುತ್ತಿವೆ. ಇದರಿಂದ ಬಾಬಾ ಸಾಹೇಬರ ಕನಸು ಕನಸು ಈಡೇರುತ್ತಿಲ್ಲ. ಜಾತಿ ಇರುವ ತನಕ ಪ್ರೀತಿ ಹುಟ್ಟುವುದಿಲ್ಲ ಎಂಬ ಅಂಬೇಡ್ಕರ್ ಅವರ ಮಾತಿನಂತೆ ನಾವು ಸಮಾನತೆ ಕನಸನ್ನು ಬಿತ್ತುತ್ತಾ. ಭ್ರಾತೃತ್ವ ಸಮಾಜ ನಿರ್ಮಾಣ ಮಾಡಬೇಕು. ಆದರೆ, ರಾಜಕಾರಣ ಪ್ರಜಾಪ್ರಭುತ್ವ ನಿರ್ಮಾಣವಾಗಿರುವುದು ಈ ದೇಶಕ್ಕೆ ಅಪಾಯಕಾರಿಯಾಗಿದೆ. ಆರ್ಥಿಕ ಮತ್ತು ಸಾಮಾಜಿಕ ಪ್ರಜಾಪ್ರಭುತ್ವವನ್ನು ಸ್ಥಾಪಿಸಬೇಕು. ಯುವಕರನ್ನು ಶಿಕ್ಷಣದ ಕಡೆ ಕರೆದುಕೊಂಡು ಹೋಗಿ ಜಾಗೃತಿ ಮೂಡಿಸುವಂತಹ ಕೆಲಸ ಮಾಡಬೇಕು ಮೌಲ್ಯಯುತ ವ್ಯಕ್ತಿ ಮತ್ತು ಸಮಾಜವನ್ನು ಕಟ್ಟುವುದು ಪ್ರತಿರೋಧವಾಗಬೇಕು ಎಂದು ಅವರು ಹೇಳಿದರು.

ದಸಂಸ ಜಿಲ್ಲಾ ಸಂಚಾಲಕ ದೇವರಸನಹಳ್ಳಿ ಪುಟ್ಟಸ್ವಾಮಿ ಮಾತನಾಡಿ, ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ಬೌದ್ಧ ಪೀಠವನ್ನು ಸ್ಥಾಪಿಸಿ ಬೌದ್ಧ ಧರ್ಮದ ಬಗ್ಗೆ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಬೇಕು. ಪ್ರೌಢ ಶಿಕ್ಷಣ ಇಲಾಖೆಯ ಶಾಲಾ ಪಠ್ಯ ಪುಸ್ತಕಗಳಲ್ಲಿ ಕೋರೆಂಗಾವ್ ಯುದ್ಧದ ಪಠ್ಯಕ್ರಮವನ್ನು ಅಳವಡಿಸಬೇಕು. ಬೌದ್ಧರ ಅಭಿವೃದ್ಧಿಗಾಗಿ ಬೌದ್ಧ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪಿಸಿ ನಿಗಮಕ್ಕೆ ಸೂಕ್ತ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯ ಅಧೀನದಲ್ಲಿರುವ ದೇವಸ್ಥಾನಗಳಲ್ಲಿ ರಾಕ್ಷಸ ಸಂಹಾರದಂತಹ ಕಾರ್ಯಕ್ರಮ ನಡೆಸುತ್ತಿದ್ದು, ಅದು ಶೋಷಿತರ ಮೇಲಿನ ಕ್ರೌರ್ಯವನ್ನು ಪ್ರತಿಪಾದಿಸುತ್ತಿದೆ. ಕೂಡಲೇ ಸರ್ಕಾರ ಇಂತಹ ಕಾರ್ಯಕ್ರಮಗಳನ್ನು ರದ್ದು ಪಡಿಸಬೇಕು ಹಾಗೂ ರಾಜ್ಯ ಸರ್ಕಾರವು ಖಾಲಿ ಇರುವ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಎಸಿಪಿ ರವಿಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ವಕೀಲ ಉಮೇಶ್, ದಸಂಸ ಸಂಚಾಲಕ ಮಲ್ಲಹಳ್ಳಿ ನಾರಾಯಣ್, ಕಾರ್ಯ ಬಸವಣ್ಣ, ಶಂಕರಪುರ ಸುರೇಶ್, ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಅಭಿ ನಾಗಭೂಷಣ್, ದಸಂಸ ತಾಲೂಕು ಸಂಚಾಲಕ ಗಟ್ಟವಾಡಿ ಮಹೇಶ್, ಕಳಲೆ ಕುಮಾರ್, ರಾಜೂರು ನಟರಾಜು, ಉಮೇಶ್ ರಾಜ್, ಮರಿಸ್ವಾಮಿ, ಯಶವಂತಕುಮಾರ್, ಜಯರಾಮ್, ಮಹೇಶ್, ಸಿದ್ದರಾಜು, ಆನಂದ್, ಸೋಮಣ್ಣ, ನವೀನ್ ಮೊದಲಾದವರು ಇದ್ದರು.

----

ಬಾಕ್ಸ್...

ರಥೋತ್ಸವ ಮೆರವಣಿಗೆ

ಕಾರ್ಯಕ್ರಮಕ್ಕೂ ಮುನ್ನ ನಂಜನಗೂಡಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಭೀಮಾ ಕೋರಂಗಾವ್ ವಿಜಯೋತ್ಸವದ ಜನಜಾಗೃತಿ ಸಮಾವೇಶದ ರಥ ಮತ್ತು ಬುದ್ಧನ ಬೆಳ್ಳಿ ರಥೋತ್ಸವಕ್ಕೆ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಚಾಲನೆ ನೀಡಿದರು. ಆರ್.ಪಿ. ರಸ್ತೆಯ ಮೂಲಕ ಅಂಬೇಡ್ಕರ್ ಭವನದವರೆಗೆ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ