ಬಂಜಾರ ಜನಾಂಗದ ಏಕೈಕ ಜಗದ್ಗುರು ಸಂತ ಸೇವಾಲಾಲ್ ಜನ್ಮಸ್ಥಳ, ತಾಲೂಕಿನ ಸೂರಗೊಂಡನಕೊಪ್ಪದ ಭಾಯಾಗಡ್ ಕ್ಷೇತ್ರದಲ್ಲಿ ನಡೆದ 287ನೇ ಸಂತ ಸೇವಾಲಾಲ್ ಜಯಂತ್ಯುತ್ಸವ ಭಾನುವಾರ ಮುಂಜಾನೆ ಭೋಗ್ (ಹೋಮ) ಪೂಜೆ ಮತ್ತು ಪೂರ್ಣಾಹುತಿ ಕಾರ್ಯಕ್ರಮದೊಂದಿಗೆ ತೆರೆಕಂಡಿತು.
- ಸೂರಗೊಂಡನಕೊಪ್ಪದ ಭಾಯಾಗಡ್ ಕ್ಷೇತ್ರದಲ್ಲಿ 3 ದಿನಗಳಿಂದ ವಿವಿಧ ಕಾರ್ಯಕ್ರಮ ।
- - -
ಕನ್ನಡಪ್ರಭ ವಾರ್ತೆ ನ್ಯಾಮತಿ
ಬಂಜಾರ ಜನಾಂಗದ ಏಕೈಕ ಜಗದ್ಗುರು ಸಂತ ಸೇವಾಲಾಲ್ ಜನ್ಮಸ್ಥಳ, ತಾಲೂಕಿನ ಸೂರಗೊಂಡನಕೊಪ್ಪದ ಭಾಯಾಗಡ್ ಕ್ಷೇತ್ರದಲ್ಲಿ ನಡೆದ 287ನೇ ಸಂತ ಸೇವಾಲಾಲ್ ಜಯಂತ್ಯುತ್ಸವ ಭಾನುವಾರ ಮುಂಜಾನೆ ಭೋಗ್ (ಹೋಮ) ಪೂಜೆ ಮತ್ತು ಪೂರ್ಣಾಹುತಿ ಕಾರ್ಯಕ್ರಮದೊಂದಿಗೆ ತೆರೆಕಂಡಿತು.
ಭಾಯಾಗಡ್ ಕ್ಷೇತ್ರದಲ್ಲಿ 3 ದಿನಗಳಿಂದ ವಿವಿಧ ಧಾರ್ಮಿಕ ಸಭೆ, ಕಾರ್ಯಕ್ರಮಗಳು ನಡೆದವು. ಭಾನುವಾರ ಬೆಳಗ್ಗೆ ಮೂಲ ಸ್ಥಳದಲ್ಲಿ ಸೇವಾಲಾಲ್ ಮತ್ತು ಮರಿಯಮ್ಮ ದೇವಿ ದೇಗುಲಗಳ ಮಧ್ಯ ಇರುವ ನಾಗರಕಟ್ಟೆ ಹಾಗೂ ಭೋಗ್ ಕಟ್ಟೆ (ಹೋಮ ಕುಂಡ) ಆವರಣಕ್ಕೆ ಅಲಂಕೃತ ಪಲ್ಲಕ್ಕಿಯಲ್ಲಿ ಮರಿಯಮ್ಮ ಮತ್ತು ಸೇವಾಲಾಲ್ ಶಿಲಾಮೂರ್ತಿಗಳನ್ನು ತರಲಾಯಿತು.
ಬಂಜಾರ್ ಜನಾಂಗದ ಧಾರ್ಮಿಕ ಸಂಸ್ಕೃತಿಯ ಪೂಜಾ ಕೈಂಕರ್ಯಗಳನ್ನು ಸೇವಾಲಾಲ್ ದೇಗುಲದ ಅರ್ಚಕ ಸೇವ್ಯಾನಾಯ್ಕ, ಮರಿಯಮ್ಮ ದೇಗುಲದ ಅರ್ಚಕ ಮಂಜುನಾಥ ನಾಯ್ಕ ಅವರ ಪೌರೋಹಿತ್ಯದಲ್ಲಿ ಕಾರ್ಯಕ್ರಮ ನಡೆದವು. ವ್ರತ ಕೈಗೊಂಡ ಸೇವಾಲಾಲ್ ಮಾಲಾಧಾರಿಗಳು ಇಡುಗಂಟನ್ನು ಲಕ್ಷಾಂತರ ಭಕ್ತರ ಸಮ್ಮುಖ ಪ್ರಾರ್ಥನೆ ಸಲ್ಲಿಸಿ, ಮಹಾಭೋಗ್‌ನಲ್ಲಿ ಅರ್ಪಿಸಿದರು.
ಸೂರಗೊಂಡನಕೊಪ್ಪಕ್ಕೆ ದೇಶ, ರಾಜ್ಯದ ಮೂಲೆ ಮೂಲೆಗಳಿಂದ ಸೇವಾಲಾಲ್ ಮಾಲಾಧಾರಿಗಳು ಇಡುಗಂಟನ್ನು ಹೊತ್ತು, ಕಠಿಣ ವ್ರತಧಾರಿಗಳಾಗಿ ಪಾದಯಾತ್ರೆ ಮೂಲಕ ಆಗಮಿಸಿದ್ದರು. ಲಕ್ಷಾಂತರ ಭಕ್ತರು ಸಂತ ಸೇವಾಲಾಲ್, ಮರಿಯಮ್ಮ ದೇವಿಯ ದರ್ಶನ ಪಡೆದು ಭಕ್ತಿ ಮೆರೆದರು.
ಸೇವಾಲಾಲ್ ಜಾತ್ರಾ ಮಹೋತ್ಸವವು ಕಾಟಿ ಆರೋಹಣದೊಂದಿಗೆ ಆರಂಭಗೊಂಡಿತ್ತು. ವಿವಿಧ ಧಾರ್ಮಿಕ ಕಾರ್ಯಕ್ರಮ, ಸೇವಾಲಾಲ್ ಮತ್ತು ಮರಿಯಮ್ಮ ದೇವತೆಗಳಿಗೆ ವಿಶೇಷ ಪೂಜೆ, ಕುಂಬಾಭಿಷೇಕ, ಪವಿತ್ರ ವೃಕ್ಷದ ಬಳಿ ಗುರುಗಳ ಸಮ್ಮುಖ ಮಾಲಾಧಾರಿಗಳು ರುದ್ರಾಕ್ಷಿ, ಜಪಮಾಲೆಗಳ ವಿಸರ್ಜನೆ, ಬಂಜಾರ ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಕ್ಷೇತ್ರದಲ್ಲಿ ಮೇಳೈಸಿದವು.
ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಡಳಿತ, ಬೆಂಗಳೂರಿನ ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ಧಿ ಮತ್ತು ನಿರ್ವಹಣ ಪ್ರತಿಷ್ಠಾನ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಜಂಟಿಯಾಗಿ ಸೇವಾಲಾಲ್ ಜಯಂತ್ಯುತ್ಸವ ಆಯೋಜಿಸಿದ್ದವು. ಭಕ್ತರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲಾಗಿತ್ತು.
ಸಂತ ಸೇವಾಲಾಲ್ ಜನ್ಮಸ್ಥಾನದ ಮಹಾಮಠ ಸಮಿತಿ ಅಧ್ಯಕ್ಷ, ವಿಧಾನಸಭೆಯ ಉಪ ಸಭಾಪತಿ, ರುದ್ರಪ್ಪ ಮಾನಪ್ಪ ಲಮಾಣಿ, ಎನ್.ಅರುಣಕುಮಾರ್, ಬಿ.ಹೀರಾನಾಯ್ಕ, ಭೋಜ್ಯಾನಾಯ್ಕ, ಮಹಾಮಠ ನಿರ್ವಹಣಾ ಸಮಿತಿ ಅಧ್ಯಕ್ಷ ಹನುಮಂತ ನಾಯ್ಕ, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್.ರಾಜು, ರಾಘವೇಂದ್ರ ನಾಯ್ಕ, ಚಂದ್ರಸೇನಾ ಚವ್ಹಾಣ್, ಎಸ್.ಎನ್.ಗೋಪಾಲ ನಾಯ್ಕ, ಸವಳಂಗ ಭೂಪಾಲ ನಾಯ್ಕ, ಶ್ರೀನಿವಾಸ್ ನಾಯ್ಕ, ರೇಭಣು ನಾಯ್ಕ, ರಾಮನಾಯ್ಕ, ಪೊಲೀಸ್ ಅಧೀಕ್ಷಕ ಶೇಖರ್ ಎಚ್.ಟಿ., ಚನ್ನಗಿರಿ ಡಿವೈಎಸ್‌ಪಿ ರುದ್ರಪ್ಪ ಉಜ್ಜಪ್ಪ, ಶಿವಮೊಗ್ಗ ಎಡಿಸಿ ವಿ. ಅಭಿಷೇಕ್, ತಹಸೀಲ್ದಾರ್ ಎಂ.ಪಿ.ಕವಿರಾಜ್, ನ್ಯಾಮತಿ ಪೊಲೀಸ್ ಠಾಣೆಯ ಪಿಐ. ಎನ್.ಎಸ್.ರವಿ, ಹರೀಶ್ ನಾಯ್ಕ, ವಾಗೀಶ್ ಲಮಾಣಿ, ಮಾರುತಿ ನಾಯ್ಕ, ಸುರೇಂದ್ರ ನಾಯ್ಕ, ವಿವಿಧ ಇಲಾಖೆಗಳ ಮುಖ್ಯಸ್ಥರು ಮತ್ತಿತರರಿದ್ದರು.
- - -
-ಚಿತ್ರ:
ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದ ಭಾಯಾಗಡ್ ಕ್ಷೇತ್ರದಲ್ಲಿ ನಡೆದ ಸೇವಾಲಾಲ್ ಜಯಂತ್ಯುತ್ಸವದ 3ನೇ ದಿನವಾದ ಭಾನುವಾರ ಮಹಾಭೋಗ್ ಕಾರ್ಯಕ್ರಮದಲ್ಲಿ ಮುಖಂಡರು ಪೂಜೆ ಸಲ್ಲಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.