13ರಂದು ಭೂಮಿಪೂಜೆ, ಶಿಲಾನ್ಯಾಸ ಕಾರ್ಯಕ್ರಮ

KannadaprabhaNewsNetwork |  
Published : Apr 08, 2026, 03:30 AM IST
ಜಯಪ್ರಕಾಶ್ ಜಿ.ಕೆ. ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. | Kannada Prabha

ಸಾರಾಂಶ

ತಾಲೂಕಿನ ಶೇಜವಾಡದಲ್ಲಿರುವ ಪಂಚ ಆತ್ಮಲಿಂಗ ಕ್ಷೇತ್ರಗಳಲ್ಲಿ ಒಂದಾದ ಐತಿಹಾಸಿಕ ಶ್ರೀ ಶೆಜ್ಜೇಶ್ವರ ದೇವಸ್ಥಾನದ ನೂತನ ಶಿಲಾಮಯ ಪ್ರಾಸಾದ ನಿರ್ಮಾಣಕ್ಕೆ ಸಿದ್ಧತೆ ಭರದಿಂದ ಸಾಗಿದೆ.

ಶ್ರೀ ಶೆಜ್ಜೇಶ್ವರ ದೇವಸ್ಥಾನದ ನೂತನ ಶಿಲಾಮಯ ಪ್ರಾಸಾದ ನಿರ್ಮಾಣಕ್ಕೆ ಸಿದ್ಧತೆ

ಕನ್ನಡಪ್ರಭ ವಾರ್ತೆ ಕಾರವಾರ

ತಾಲೂಕಿನ ಶೇಜವಾಡದಲ್ಲಿರುವ ಪಂಚ ಆತ್ಮಲಿಂಗ ಕ್ಷೇತ್ರಗಳಲ್ಲಿ ಒಂದಾದ ಐತಿಹಾಸಿಕ ಶ್ರೀ ಶೆಜ್ಜೇಶ್ವರ ದೇವಸ್ಥಾನದ ನೂತನ ಶಿಲಾಮಯ ಪ್ರಾಸಾದ ನಿರ್ಮಾಣಕ್ಕೆ ಸಿದ್ಧತೆ ಭರದಿಂದ ಸಾಗಿದ್ದು, ಏ. 13ರಂದು ಬೆಳಗ್ಗೆ 11.50ಕ್ಕೆ ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತೀ ಸ್ವಾಮೀಜಿ ಅಮೃತ ಹಸ್ತಗಳಿಂದ ಭೂಮಿ ಪೂಜೆ ಮತ್ತು ಶಿಲಾನ್ಯಾಸ ಕಾರ್ಯಕ್ರಮ ನೆರವೇರಲಿದೆ ಎಂದು ದೇವಸ್ಥಾನ ವ್ಯವಸ್ಥಾಪನಾ ಹಾಗೂ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಜಯಪ್ರಕಾಶ್ ಜಿ.ಕೆ. ತಿಳಿಸಿದರು. ನಗರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅಂದು ಧಾರ್ಮಿಕ ವಿಧಿವಿಧಾನಗಳು ಬೆಳಗ್ಗೆ 7 ಗಂಟೆಯಿಂದಲೇ ಗೋಕರ್ಣದ ತಂತ್ರಿಗಳಾದ ಗಜಾನನ ಭಟ್ಟ ಹಿರೇ ಹಾಗೂ ಗಣಪತಿ ಭಟ್ಟ ಹಿರೇ ನೇತೃತ್ವದಲ್ಲಿ ಆರಂಭಗೊಳ್ಳಲಿದ್ದು, ಮಧ್ಯಾಹ್ನ 12.30ಕ್ಕೆ ಜಗದ್ಗುರುಗಳ ಆಶೀರ್ವಚನ ನಡೆಯಲಿದೆ. ಹಳೆಯ ದೇವಾಲಯದ ಶೇ. 80ರಷ್ಟು ತೆರವು ಕಾರ್ಯಾಚರಣೆ ಮುಗಿದಿದ್ದು, ಫೆಬ್ರವರಿ ತಿಂಗಳಿನಲ್ಲಿ ಬಾಲಾಲಯ ಪ್ರತಿಷ್ಠಾಪನೆಯನ್ನು ಕೂಡ ಶಾಸ್ತ್ರೋಕ್ತವಾಗಿ ನೆರವೇರಿಸಲಾಗಿದೆ ಎಂದರು.

ದೇವಸ್ಥಾನದ ಪ್ರಧಾನ ಅರ್ಚಕ ಮಂದಾರ ಭಟ್ಟ ಮಾತನಾಡಿ, ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮೊದಲು ಕೇವಲ ₹5-6 ಕೋಟಿ ಬಜೆಟ್ ಅಂದಾಜಿಸಲಾಗಿತ್ತು, ಆದರೆ ಶಾಸಕ ಸತೀಶ್ ಕೃಷ್ಣ ಸೈಲ್ ಸಂಪೂರ್ಣ ಶಿಲಾಮಯ ಹಾಗೂ ತಾಮ್ರದ ಛಾವಣಿ ಹೊಂದಿರುವ ಬೃಹತ್ ದೇವಸ್ಥಾನ ನಿರ್ಮಾಣದ ಸಂಕಲ್ಪ ಮಾಡಿದರು. ಇವರ ಸತತ ಪ್ರಯತ್ನದಿಂದಾಗಿ ಶಾಸಕರ ನಿಧಿ, ಮುಖ್ಯಮಂತ್ರಿಗಳ ನಿಧಿ ಹಾಗೂ ಮುಜರಾಯಿ ಇಲಾಖೆಯ ಅನುದಾನ ಸೇರಿದಂತೆ ದೇವಸ್ಥಾನದ ಅಭಿವೃದ್ಧಿಗೆ ಒಟ್ಟು ₹17 ಕೋಟಿ ಅನುದಾನ ಒದಗಿಸಲಾಗಿದೆ. ಇದರ ಜೊತೆಗೆ ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರದಿಂದ ದೇವಸ್ಥಾನಕ್ಕೆ ಸೇರಿದ ಐತಿಹಾಸಿಕ ವರುಣ ಕೆರೆಯ ಅಭಿವೃದ್ಧಿಗಾಗಿ ₹2 ಕೋಟಿ ಮೀಸಲಿಡಲಾಗಿದ್ದು, ಒಟ್ಟಾರೆ ಸುಮಾರು ₹19 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ದೇವಸ್ಥಾನದ ಕಾಮಗಾರಿಯನ್ನು ಮುಂದಿನ 18ರಿಂದ 24 ತಿಂಗಳೊಳಗೆ ಪೂರ್ಣಗೊಳಿಸುವ ಗುರಿಯನ್ನು ಸಮಿತಿ ಹೊಂದಿದೆ ಎಂದು ಮಾಹಿತಿ ನೀಡಿದರು.ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಮೀರ ನಾಯ್ಕ, ಶಾಸಕ ಸತೀಶ್ ಸೈಲ್ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾಗಿದ್ದಾರೆ. ಈ ಪುಣ್ಯಕಾರ್ಯದಲ್ಲಿ ಶಿರವಾಡ ಗ್ರಾಮಸ್ಥರು ಕೂಡ ಕೈಜೋಡಿಸಿದ್ದು, ಪ್ರತಿ ಮನೆಯಿಂದ ₹11,000 ದೇಣಿಗೆ ನೀಡುತ್ತಿದ್ದಾರೆ ಹಾಗೂ ದೇವಸ್ಥಾನದ 26 ಕಂಬಗಳ ನಿರ್ಮಾಣಕ್ಕೂ ದಾನಿಗಳು ಮುಂದೆ ಬಂದಿದ್ದಾರೆ. ದೇವಸ್ಥಾನದ ಪ್ರಧಾನ ಅರ್ಚಕರು ಹಾಗೂ ದಾನಿ ವೀರೇಂದ್ರ ನಾಯಕ್ ದೇವಸ್ಥಾನ ಹಾಗೂ ಕೆರೆ ಅಭಿವೃದ್ಧಿಗೆ ಉಚಿತವಾಗಿ ಜಾಗ ಹಸ್ತಾಂತರಿಸಿದ್ದಾರೆ. ಮುಂಬರುವ ದಿನಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ನೆರವಿನೊಂದಿಗೆ ದೇವಸ್ಥಾನದ ಬಳಿ ಯಾತ್ರಿ ನಿವಾಸ ನಿರ್ಮಿಸುವ ಯೋಜನೆಯೂ ಇದೆ ಎಂದು ತಿಳಿಸಿದರು.

ದೇವಸ್ಥಾನ ಸಮಿತಿ ಸದಸ್ಯರಾದ ಎಲ್.ಕೆ. ನಾಯ್ಕ, ಕುಮಾರ ಶೇಜವಾಡಕರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯಪಾಲರ ವಜಾಕ್ಕೆ ಆಗ್ರಹಿಸಿ ಕರವೇ ಪ್ರತಿಭಟನೆ
ವಿಶೇಷಚೇತನ ಮಕ್ಕಳಿಗೆ ಜಿಲ್ಲಾಡಳಿತದಿಂದ ಸೌಲಭ್ಯ ಕಲ್ಪಿಸಲು ಕ್ರಮ: ಡಿಸಿ ಕವಿತಾ ಎಸ್‌. ಮನ್ನಿಕೇರಿ