ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಮುದಾಯ ರಾಜಮಹಾರಾಜರ ಕಾಲದಿಂದಲೂ ಪಲ್ಲಕ್ಕಿ, ಮೇಣೆ ಹೊರುವ ವೃತ್ತಿಯಲ್ಲಿ ಬಂದವರಾಗಿದ್ದು, ನಾವು ನಿಜವಾದ ಭೋವಿ ಸಮಾಜದವರಾಗಿದ್ದು, ವಡ್ಡರ ಸಮಾಜ ನಮ್ಮ ಜಾತಿಯನ್ನು 2002ರಲ್ಲಿ ಹೈಜಾಕ್ ಮಾಡಿ ಭೋವಿ ವಡ್ಡರ ಪೀಠ ಸ್ಥಾಪಿಸಿಕೊಂಡಿದ್ದಾರೆ. ಈಗ ನಮ್ಮದೇ ಆದ ಪೀಠ ಸ್ಥಾಪನೆ ಮಾಡಲು ಚಿಂತನೆ ನಡೆಸಿದ್ದೇವೆ ಎಂದು ಹೇಳಿದರು.
ಇತ್ತೀಚೆಗೆ ಬೆಳಗಾವಿ ಅಧಿವೇಶನ ವೇಳೆ ನಮ್ಮ ಸಮುದಾಯ ನಡೆಸುತ್ತಿದ್ದ ಪ್ರತಿಭಟನೆ ವೇದಿಕೆಗೆ ಆಗಮಿಸಿದ ಸಚಿವ ಶಿವರಾಜ್ ತಂಗಡಗಿ ಅವರು ಭೋವಿ ಬೇರೆ ವಡ್ಡರ ಬೇರೆ ಎಂದು ಹೇಳಿದ್ದಾರೆ. ಅವರ ಜಾತಿ ಪ್ರಮಾಣ ಪತ್ರವೂ ಸಹಿತ ವಡ್ಡರ ಎಂದು ಇದೆ. ಆದರೆ ಭೋವಿ ಪದವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಆರೋಪಿಸಿದರು.ವಡ್ಡರ ಜನಾಂಗದ ಎಲ್ಲ ಉಪ ಜಾತಿಗಳಿಗೆ ಭೋವಿ ಎಂದು ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ತಾಲೂಕು ಅಧಿಕಾರಿಗಳು ನೀಡುತ್ತಿದ್ದಾರೆ. ಇದರಿಂದ ಭೋವಿ ಸಮಾಜದವರಿಗೆ ಜಾತಿ ಪ್ರಮಾಣ ಪತ್ರ ಮತ್ತು ಜಾತಿ ಸಿಂಧುತ್ವ ಪ್ರಮಾಣ ಪತ್ರ ಪಡೆಯುವಲ್ಲಿ ಗೊಂದಲ ಉಂಟಾಗುತ್ತಿದ್ದು, ಭೋವಿ ಮತ್ತು ವಡ್ಡರ ಜನಾಂಗ ಬೇರೆ ಬೇರೆಯಾಗಿದ್ದು ಪ್ರವರ್ಗ-1ರಲ್ಲಿ ಬರುವ ಬಂಡಿವಡ್ಡರ, ಗಿರಣಿವಡ್ಡರ ಮತ್ತು ತುಡುಗುವಡ್ಡರ ಜನರಿಗೆ ಭೋವಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುತ್ತಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದು, ಈಗಾಗಲೇ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಆದರೂ ಯಾವುದೇ ಕ್ರಮವಾಗಿಲ್ಲ. ನ್ಯಾಯಾಲಯದ ಮೂಲಕ ನ್ಯಾಯ ಕೇಳುತ್ತೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಕೆ.ಜಿ. ಕುಮಾರಸ್ವಾಮಿ, ಪ್ರಧಾನ ಕಾರ್ಯದದರ್ಶಿ ಯಮನಪ್ಪ ಭೋವಿ, ಪುಂಡಲೀಕ ಭೋವಿ, ಮುತ್ತು ಭೋವಿ, ಬೇಲೂರಪ್ಪ ಭೋವಿ ಮತ್ತಿತರರಿದ್ದರು.