ಕುಷ್ಟಗಿಯಲ್ಲಿ ಭೂತಾಯಿಗೆ ಪೂಜೆ ಸಲ್ಲಿಸಿದ ಅನ್ನದಾತರು

KannadaprabhaNewsNetwork |  
Published : Jan 12, 2024, 01:47 AM ISTUpdated : Jan 12, 2024, 04:56 PM IST
ಪೋಟೊ11ಕೆಎಸಟಿ1: ಕುಷ್ಟಗಿ ತಾಲೂಕಿನ ದೋಟಿಹಾಳದ ಹೊಲವಂದರಲ್ಲಿ ರೈತಾಪಿ ಕುಟುಂಬವು ಚರಗ ಚಲ್ಲುವ ಹಬ್ಬದ ಅಂಗವಾಗಿ ಭೋಜನವನ್ನು ಸವಿದರು.ಪೋಟೊ11ಕೆಎಸಟಿ1ಎ: ಕುಷ್ಟಗಿ ತಾಲೂಕಿನ ದೋಟಿಹಾಳದ ಸೀಮಾದ ಆದಿಬಸವಣ್ಣ ದೇವರಿಗೆ ರೈತಾಪಿ ಕುಟುಂಬವು ಪೂಜೆಯನ್ನು ಸಲ್ಲಿಸಿದರು. | Kannada Prabha

ಸಾರಾಂಶ

ಬರದ ನಡುವೆಯೂ ಕುಷ್ಟಗಿ ತಾಲೂಕಿನಲ್ಲಿ ರೈತರು ಸಾಂಪ್ರದಾಯಿಕವಾಗಿ ಎಳ್ಳು ಅಮಾವಾಸ್ಯೆ ಹಬ್ಬ ಆಚರಿಸಿದರು. ಹೊಲಕ್ಕೆ ಹೋಗಿ ಚರಗ ಚೆಲ್ಲಿ, ವಿಶೇಷ ಪೂಜೆ ಸಲ್ಲಿಸಿದರು.

ಕುಷ್ಟಗಿ: ಬರದ ಕರಿನೆರಳಿನಲ್ಲೂ ಈ ವರ್ಷ ರೈತರು ಸಾಂಪ್ರದಾಯಿಕವಾಗಿ ಎಳ್ಳು ಅಮಾವಾಸ್ಯೆ ಆಚರಿಸಿದರು. ಭೂತಾಯಿಗೆ ಶ್ರದ್ಧಾ-ಭಕ್ತಿಯಿಂದ ಚರಗ ಚೆಲ್ಲಿದರು. ಬುತ್ತಿ ಕಟ್ಟಿಕೊಂಡು ಹೊಲಗಳಿಗೆ ಹೋಗಿ ಭೂತಾಯಿಯ ಮಡಿಲಲ್ಲಿ ಕುಳಿತು ಊಟ ಮಾಡಿದರು.

ತಾಲೂಕಿನ ತಾವರಗೇರಾ, ದೋಟಿಹಾಳ, ಮುದೇನೂರು, ಗೋತಗಿ, ಕೇಸೂರು ಸೇರಿದಂತೆ ವಿವಿಧೆಡೆ ರೈತರು ಬೆಳಗ್ಗೆಯೇ ಹಬ್ಬದ ಸಂಭ್ರಮದಲ್ಲಿದ್ದರು. ಎಳ್ಳು ಅಮಾವಾಸ್ಯೆಯು ಅಪ್ಪಟ ರೈತರ ಹಬ್ಬ. 

ಹೊಲದಲ್ಲಿ ಬೆಳೆದು ನಿಂತಿರುವ ಹಿಂಗಾರು ಪೈರುಗಳ ನಡುವೆ ಬನ್ನಿ ಮರ ಇಲ್ಲವೆ ಬನ್ನಿಕಂಟಿ ಹುಡುಕಿ ಅದಕ್ಕೆ ಪೂಜೆ ಸಲ್ಲಿಸುವುದರೊಂದರಿಗೆ ಭೂತಾಯಿಗೆ ಚರಗೆ ಚೆಲ್ಲುವುದು ಈ ಹಬ್ಬದ ವಿಶೇಷವಾಗಿದೆ. 

ಕುಟುಂಬದ ಹೆಣ್ಣುಮಕ್ಕಳು ಜೋಳದ ಹೊಲದಲ್ಲಿ ಬನ್ನಿ ಮರಕ್ಕೆ ಹಾಗೂ ಐದು ಕಲ್ಲುಗಳನ್ನು ಇಟ್ಟು ಪೂಜೆ ಸಲ್ಲಿಸಿ, ಭೂ ಮಾತೆಗೆ ಪೂಜೆಯನ್ನು ಅರ್ಪಿಸಿದರು. 

ಮನೆಯಿಂದ ತಂದಿರುವ ನೈವೇದ್ಯವನ್ನು ಬೆಳೆಗಳಿಗೆ ಚೆಲ್ಲುವ ಮೂಲಕ ಚರಗದ ಹಬ್ಬ ಆಚರಿಸಿದರು.ಈ ಎಳ್ಳು ಅಮಾವಾಸ್ಯೆ ಇನ್ನು 2-3 ದಿನ ಇರುವಾಗಲೆ ರೈತರ ಮನೆಗಳಲ್ಲಿ ಹಬ್ಬದ ತಯಾರಿ ನಡೆಯುತ್ತದೆ. 

ಎಳ್ಳು ಹಚ್ಚಿದ ಸಜ್ಜೆ ಹಾಗೂ ಜೋಳದ ರೊಟ್ಟಿ ತಯಾರಿಸುವುದು, ನಾನಾ ಬಗೆಯ ಚಟ್ನಿಕಾಳು, ಎಳ್ಳು ಹಾಗೂ ಶೇಂಗಾ ಹೋಳಿಗೆ ತಯಾರಿಸಲಾಗುತ್ತದೆ. ಅಮಾವಾಸ್ಯೆಯ ದಿನ ದೊಡ್ಡ ಬುತ್ತಿಯ ಗಂಟು ಕಟ್ಟಿಕೊಂಡು ಕುಟುಂಬದವರೆಲ್ಲರೂ ಹೊಲಕ್ಕೆ ಹೋಗುವ ದೃಶ್ಯ ಕಂಡುಬರುತ್ತದೆ. ಹಿಂದೆ ಶೃಂಗರಿಸಿದ ಎತ್ತಿನ ಬಂಡಿಗಳು ಹೆಚ್ಚು ಕಾಣುತ್ತಿದ್ದವು. 

ಈಗ ವಾಹನಗಳಲ್ಲಿ ಹೋಗುತ್ತಾರೆ. ಹೊಲದಲ್ಲಿ ಕುಟುಂಬ ಸದಸ್ಯರ ಜತೆಗೆ ಭೋಜನ ಸವಿಯುವುದೆಂದರೆ ರೈತರಿಗೆ ಖುಷಿ. ಎಳ್ಳು ಅಮಾವಾಸ್ಯೆಗೆ ಜಾತಿ, ಮತ ಭೇದವಿಲ್ಲ, ಒಕ್ಕಲುತನ ಅವಲಂಬಿಸಿರುವ ಮುಸ್ಲಿಂ ಕುಟುಂಬದವರೂ ಎಳ್ಳು ಅಮಾವಾಸ್ಯೆಯಂದು ಹೊಲಕ್ಕೆ ಹೋಗಿ ಚರಗ ಚೆಲ್ಲುತ್ತಾರೆ.

ಸೀಮಾದೇವರಿಗೆ ಪೂಜೆ: ರೈತರು ತಮ್ಮ ಹೊಲಗಳಲ್ಲಿ ಚರಗ ಚೆಲ್ಲುವ ಪೂರ್ವದಲ್ಲಿ ತಮ್ಮ ಹೊಲದ ಸೀಮೆಯಲ್ಲಿರುವ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಈ ಬಾರಿ ಬೆಳೆನಷ್ಟವಾಗಿದ್ದರೂ ಹಬ್ಬವನ್ನು ಸಾಂಪ್ರದಾಯಕ ಪದ್ಧತಿಯಂತೆ ಆಚರಣೆ ಮಾಡಲಾಗಿದೆ ಎಂದು ರೈತರಾದ ಅಮರೇಶ ತಾರಿವಾಳ, ಬಸವರಾಜ ಕಡಿವಾಲ, ನಾಗರಾಜ ಶೆಟ್ಟರ ಹೇಳುತ್ತಾರೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ