ಟೋಲ್ ಶುಲ್ಕ ರದ್ದುಪಡಿಸುವಂತೆ ಭೂಮಿ ತಾಯಿ ಹೋರಾಟ ಸಮಿತಿ ಆಗ್ರಹ

KannadaprabhaNewsNetwork |  
Published : Sep 09, 2025, 01:00 AM IST
8ಕೆಎಂಎನ್ ಡಿ33 | Kannada Prabha

ಸಾರಾಂಶ

ಬೃಂದಾವನಕ್ಕೆ ಹೋಗುವ ಕೆಳಸೇತುವೆ ನಿರ್ಮಾಣಕ್ಕೆ ಖರ್ಚಾದ ಹಣ ಸುಮಾರು 17.21 ಕೋಟಿ ರು. ಆಗಿದ್ದು, ಈತನಕ 15.99 ಕೋಟಿ ರು. ವಸೂಲಿ ಆಗಿದೆ. ನಂತರ 1.44 ಕೋಟಿ ಸಂಗ್ರಹವಾಗಿದೆ. ಸಾರ್ವಜನಿಕರಿಂದ ಟೋಲ್ ಸಂಗ್ರಹದ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ 2024ರಲ್ಲೇ ಸರ್ಕಾರಕ್ಕೆ ಹಿರಿಯ ಅಧಿಕಾರಿಗಳು ಪತ್ರದ ಮೂಲಕ ಮಾಹಿತಿ ನೀಡಿದ್ದು, ಅವರ ಅದೇಶಕ್ಕೆ ನಾವು ಕಾಯುತ್ತಿದ್ದೇವೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಕೆ.ಆರ್.ಸಾಗರ ಬೃಂದಾವನಕ್ಕೆ ತೆರಳುವ ಕೆಳಸೇತುವೆ ಬಳಿ ಕಾವೇರಿ ನೀರಾವರಿ ನಿಗಮದಿಂದ ವಸೂಲಿ ಮಾಡುತ್ತಿರುವ ಟೋಲ್ ಶುಲ್ಕ ರದ್ದು ಪಡಿಸುವಂತೆ ಭೂಮಿ ತಾಯಿ ಹೋರಾಟ ಸಮಿತಿ ನೇತೃತ್ವದಲ್ಲಿ ಸ್ಥಳೀಯ ರೈತರು ಜೊತೆಗೂಡಿ ಕಾವೇರಿ ನೀರಾವರಿ ಕಚೇರಿಗೆ ಆಗಮಿಸಿ ಆಗ್ರಹಿಸಿದರು.

ಕಚೇರಿಗೆ ಭೂಮಿ ತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಮುಖಂಡ ಕೆ.ಎಸ್.ನಂಜುಂಡೇಗೌಡ ನೇತೃತ್ವದಲ್ಲಿ ನೂರಾರು ರೈತರು ಸೋಮವಾರ ತೆರಳಿ ಟೋಲ್ ಶುಲ್ಕ ಸಂಗ್ರಹವಾಗಿರುವ ಬಗ್ಗೆ ಮಾಹಿತಿ ಕೇಳಿದರು.

ಬೃಂದಾವನ ರಸ್ತೆಯಲ್ಲಿ ನಿರ್ಮಿಸಿರುವ ಕೆಳ ಸೇತುವೆ ಹೆಸರಿನಲ್ಲಿ ಇಲ್ಲಿಯ ತನಕ ವಸೂಲಿ ಮಾಡಿರುವ ಟೋಲ್ ಶುಲ್ಕದ ಮಾಹಿತಿ ಕೋರಿದ್ದು, ಇದಕ್ಕೆ ಮಾಹಿತಿ ಹಕ್ಕು ಅಧಿಕಾರಿಗಳು ಸೂಚಿಸಿದಷ್ಟೇ ಹಣ ಸಂದಾಯ ಮಾಡಿದ್ದರೂ ಕೂಡ ಸಮರ್ಪಕವಾಗಿ ಮಾಹಿತಿ ನೀಡಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸೇತುವೆ ನಿರ್ಮಾಣದ ಹಣ ವಸೂಲಾತಿ ಆಗಿ ವರ್ಷ ಕಳೆದರೂ ಕೂಡ ಪ್ರವಾಸಿಗರು ಸೇರಿದಂತೆ ಸಾರ್ವಜನಿಕರ ಬಳಿ ಇನ್ನು ಟೋಲ್ ಶುಲ್ಕ ವಸೂಲಿ ಮಾಡುತ್ತಿರುವುದು ಸರಿಯಲ್ಲ. ಶೀಘ್ರ ಟೋಲ್ ರದ್ದು ಪಡಿಸದಿದ್ದರೆ ಟೋಲ್ ಬಳಿ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

ಅಲ್ಲದೆ ಬೃಂದಾವನದಲ್ಲಿನ ಪಾದಚಾರಿ ಮಾರ್ಗ, ನೀರಿನ ಕಾರಂಜಿಗಳು, ದೀಪಗಳು ಮುರಿದು ಬಿದ್ದಿದ್ದರೂ ಇನ್ನೂ ದುರಸ್ಥಿ ಮಾಡಿಲ್ಲ, ವಾರಕೊಮ್ಮೆ ಸಂಗೀತ ಕಾರಂಜಿ ಕೆಡುತ್ತಿದೆ. ಪ್ರವಾಸಿಗರಿಂದ 100 ರು. ಪಡೆದು ಮೋಸ ಮಾಡುತ್ತಿದ್ದೀರಾ, ದುರಸ್ತಿ ಪಡೆಸಿ ನಮ್ಮ ಹೆಮ್ಮೆಯ ಬೃಂದಾವನದ ಮಾನ ಉಳಿಸಿ ಎಂದರು.

ನಂತರ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಫಾರೂಕ್ ಅಭು ಮಾತನಾಡಿ, ನೀವು ಕೋರಿದ್ದ ಮಾಹತಿಯನ್ನು ನೀಡಲಾಗಿದೆ. ಮಾಹಿತಿ ಹಕ್ಕು ಕಾಯಿದೆಯಡಿ ನಿಮ್ಮ ಸಂಪೂರ್ಣ ಮಾಹಿತಿ ನೀಡಲು ನಾವು ಬದ್ಧರಾಗಿದ್ದೇವೆ. ಇನ್ನೂ ಹೆಚ್ಚಿನ ಮಾಹಿತಿ ಬೇಕಾದರೆ ಕೋಡುತ್ತೇವೆ ಎಂದರು.

ಬೃಂದಾವನಕ್ಕೆ ಹೋಗುವ ಕೆಳಸೇತುವೆ ನಿರ್ಮಾಣಕ್ಕೆ ಖರ್ಚಾದ ಹಣ ಸುಮಾರು 17.21 ಕೋಟಿ ರು. ಆಗಿದ್ದು, ಈತನಕ 15.99 ಕೋಟಿ ರು. ವಸೂಲಿ ಆಗಿದೆ. ನಂತರ 1.44 ಕೋಟಿ ಸಂಗ್ರಹವಾಗಿದೆ. ಸಾರ್ವಜನಿಕರಿಂದ ಟೋಲ್ ಸಂಗ್ರಹದ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ 2024ರಲ್ಲೇ ಸರ್ಕಾರಕ್ಕೆ ಹಿರಿಯ ಅಧಿಕಾರಿಗಳು ಪತ್ರದ ಮೂಲಕ ಮಾಹಿತಿ ನೀಡಿದ್ದು, ಅವರ ಅದೇಶಕ್ಕೆ ನಾವು ಕಾಯುತ್ತಿದ್ದೇವೆ ಎಂದರು.

ಬೃಂದಾವನದಲ್ಲಿ ಅವ್ಯವಸ್ಥೆ ಬಗ್ಗೆ ನಮ್ಮ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ದಸರಾ ಹಿನ್ನಲೆಯಲ್ಲಿ ಹಣ ಬಿಡಗಡೆಯಾದ ಕೂಡಲೆ ಸರಿ ಪಡಿಸುತ್ತೇವೆ ಎಂದು ಭರವಸೆ ನೀಡಿದರು.

ಈ ವೇಳೆ ಭೂಮಿ ತಾಯಿ ಹೋರಾಟ ಸಮಿತಿ ಎಂ.ವಿ.ಕೃಷ್ಣ, ಹೊಂಗಳ್ಳಿ ಮಹದೇವ, ಪುಟ್ಟಮಾದು, ರವಿ ಲಕ್ಷಣ, ರಮೇಶ, ಜಯರಾಂ, ದೇವರಾಜು, ಕೆಂಪೇಗೌಡ ಸೇರಿದಂತೆ ಇತರರು ಇದ್ದರು.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು