ಕಾವೇರಿ ನದಿಗಿಳಿದು ಭೂಮಿತಾಯಿ ಹೋರಾಟ ಸಮಿತಿ ಪ್ರತಿಭಟನೆ

KannadaprabhaNewsNetwork |  
Published : Sep 13, 2026, 02:15 AM IST
11ಕೆಎಂಎನ್ ಡಿ28 | Kannada Prabha

ಸಾರಾಂಶ

ಕಳೆದ ಎರಡು ತಿಂಗಳ ಹಿಂದೆ ಕಟಾವಿಗೆ ಬಂದ ಬೆಳೆ ಬಾಡುತ್ತಿರುವ ಬಗ್ಗೆ ರೈತರು ಮುಖ್ಯಮಂತ್ರಿ ಬಳಿ ನೀರು ಕೇಳಿ ಮನವಿ ಮಾಡಿದರೂ ರೈತರ ಸಂಕಷ್ಟಗಳಿಗೆ ನೆರವಾಗದ ಮುಖ್ಯಮಂತ್ರಿ ನೀರು ಕೇಳಬೇಡಿ, ಬೆಳೆ ಬೆಳೆಯಬೇಡಿ ಎಂದು ರೈತರಿಗೆ ಉಡಾಫೆ ಉತ್ತರ ನೀಡುತ್ತಾ ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನದಿ ಮೂಲಕ ನಿತ್ಯ 8500 ಕ್ಯುಸೆಕ್ ಅಧಿಕ ನೀರನ್ನು ಹರಿಸುತ್ತಿದ್ದಾರೆ ಎಂದು ಆರೋಪಿಸಿ ಭೂಮಿತಾಯಿ ಹೋರಾಟ ಸಮಿತಿ ಸದಸ್ಯರು ಕಾವೇರಿ ನದಿಗಿಳಿದು ಪ್ರತಿಭಟಿಸಿದರು.

ಪಟ್ಟಣದ ಸ್ನಾನ ಘಟ್ಟದ ಬಳಿ ಸಮಿತಿ ಹಿರಿಯ ರೈತ ಮುಖಂಡ ಕೆ.ಎಸ್.ನಂಜುಡೇಗೌಡ, ಸಮಿತಿ ಅಧ್ಯಕ್ಷ ಬಿಲ್ಲೇನಹಳ್ಳಿ ಕೃಷ್ಣೇಗೌಡ ನೇತೃತ್ವದಲ್ಲಿ ರೈತ ಮುಖಂಡರು, ಕಾರ್ಯಕರ್ತರು ನದಿಗಿಳಿದು ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಕೆ.ಎಸ್ ನಂಜುಂಡೇಗೌಡ ಮಾತನಾಡಿ, ರಾಜ್ಯ ಸರ್ಕಾರ ಸ್ಥಳೀಯ ನಾಲೆಗಳಿಗೆ ನೀರು ಹರಿಸಿ ರೈತರ ಬೆಳೆಗಳನ್ನು ಉಳಿಸಲು ಮುಂದಾಗುತ್ತಿಲ್ಲ. ಬದಲಿಗೆ ಕಾವೇರಿ ನದಿ ನೀರು ಪ್ರಾಧಿಕಾರ ಹೇಳಿದಂತೆ ಪ್ರತಿ ಬಾರಿಯು ತಮಿಳುನಾಡಿಗೆ ನೀರು ಹರಿಸುತ್ತಾ ಬಂದಿದೆ. ಮತ್ತೆ 6 ಸಾವಿರ ಕ್ಯುಸೆಕ್ ನೀರು ಹರಿಸಿ ಎಂದು ಹೇಳುತ್ತಿದ್ದಂತೆ ನೀರು ಹರಿಸಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಎರಡು ತಿಂಗಳ ಹಿಂದೆ ಕಟಾವಿಗೆ ಬಂದ ಬೆಳೆ ಬಾಡುತ್ತಿರುವ ಬಗ್ಗೆ ರೈತರು ಮುಖ್ಯಮಂತ್ರಿ ಬಳಿ ನೀರು ಕೇಳಿ ಮನವಿ ಮಾಡಿದರೂ ರೈತರ ಸಂಕಷ್ಟಗಳಿಗೆ ನೆರವಾಗದ ಮುಖ್ಯಮಂತ್ರಿ ನೀರು ಕೇಳಬೇಡಿ, ಬೆಳೆ ಬೆಳೆಯಬೇಡಿ ಎಂದು ರೈತರಿಗೆ ಉಡಾಫೆ ಉತ್ತರ ನೀಡುತ್ತಾ ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೆಗೌಡ ಮಾತನಾಡಿ, ಜಿಲ್ಲೆಯ ಉಸ್ತುವಾರಿ ಸಚಿವ ಹಾಗೂ ಶಾಸಕರು ರೈತರ ಪರವಾಗಿ ಯಾವುದೇ ಕೆಲಸಗಳ ನಿರ್ವಹಿಸದೆ ತಮ್ಮ ಕ್ಷೇತ್ರಗಳಲ್ಲಿನ ಅಕ್ರಮ ಭೂಮಿ ಒತ್ತುವರಿ ಮಾಡುವರ ಪರ ನಿಂತು ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಮುಂಗಾರು ಬೆಳೆಗಳಿಗೆ ನೀರು ಹರಿಸದೆ ಪ್ರಾಧಿಕಾರದ ಆದೇಶಕ್ಕೆ ತಲೆ ಬಾಗಿ ತಮಿಳುನಾಡಿಗೆ ನೀರು ಹರಿಸುತ್ತಿದೆ. ಸ್ಥಳೀಯ ನಾಲೆಗಳಿಗೆ 4 ಬಾರಿ ಕಟ್ಟು ಪದ್ಧತಿಯಲ್ಲಿ ನೀರು ಹರಿಸುವುದಾಗಿ ಸರ್ಕಾರ ಹೇಳಿದೆ, ಆದರೆ ಸ್ಥಳೀಯ ನಾಲೆಗಳಿಗೆ ನೀರು ನಿಲ್ಲಿಸಿ ರೈತರನ್ನು ಬೀದಿಗೆ ಬರುವಂತೆ ಮಾಡುತ್ತಿದೆ. ಇದೀಗ ಅಣೆಕಟ್ಟೆ ಬರಿದು ಮಾಡಿ ಜನ- ಜಾನುವಾರುಗಳಿಗೆ ಕುಡಿಯುವ ನೀರಿಗೂ ಬರ ಬರುವಂತೆ ರಾಜ್ಯ ಸರ್ಕಾರಗಳು ಮಾಡುತ್ತಿದೆ. ಕೂಡಲೇ ಮುಖ್ಯ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಪ್ರಾಧಿಕಾರದ ಆದೇಶಗಳನ್ನು ಧಿಕ್ಕರಿಸಿ ಜಲಾಶಯದ ಗೇಟುಗಳ ಬಂದ್ ಮಾಡಿ ತಮಿಳುನಾಡಿಗೆ ಬಿಡುವ ನೀರನ್ನು ಸ್ಥಗಿತಗೊಳಿಸಲು ಭೂಮಿತಾಯಿ ಹೋರಾಟ ಸಮಿತಿ ಸದಸ್ಯರು ಒತ್ತಾಯ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಗ್ಗಟ್ಟಿದ್ದರೆ ವಕ್ಫ್ ಸಂಸ್ಥೆಗಳ ಅಭಿವೃದ್ಧಿ ಸಾಧ್ಯ!
ವ್ಯಕ್ತಿ ಜೀವಂತವಾಗಿದ್ದರೂ 5 ವರ್ಷಗಳಿಂದ ಸರ್ಕಾರಿ ದಾಖಲೆಗಳಲ್ಲಿ ಮೃತ!