ಸಂಡೂರು: ಯು.ಭೂಪತಿ "ವಿಜಯನಗರದ ಉಕ್ಕು ನಮ್ಮೆಲ್ಲರ ಹಕ್ಕು " ಎನ್ನುವ ಹೋರಾಟ ಮಾಡಿ, ಕಾರ್ಮಿಕರ ಹಾಗೂ ಶೋಷಿತರ ಧ್ವನಿಯಾಗಿದ್ದವರು ಎಂದು ಶಾಸಕಿ ಈ.ಅನ್ನಪೂರ್ಣ ತುಕಾರಾಂ ತಿಳಿಸಿದರು.
1985ರಲ್ಲಿ ರಾಜಕೀಯ ಪಲ್ಲಟಗಳಾದ ಸಂದರ್ಭದಲ್ಲಿ ತಮ್ಮ 25ನೇ ವಯಸ್ಸಿನಲ್ಲಿ ಸಂಡೂರು ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದ ಯು.ಭೂಪತಿ ವಿಧಾನಸಭೆಯಲ್ಲಿ ಕಾರ್ಮಿಕರ ಪರ ವಿಚಾರಗಳನ್ನು ಚರ್ಚಿಸುತ್ತಿದ್ದರು. ಸಚಿವರಾದ ಸಂತೋಷ್ ಲಾಡ್, ಸಂಸದ ಈ. ತುಕಾರಾಂ ಸೇರಿದಂತೆ ಹಲವು ರಾಜಕಾರಣಿಗಳಿಗೆ ಗುರುವಾಗಿದ್ದರು. ಅವರು ಜನರ ಕಷ್ಟಗಳಿಗೆ ಸ್ಪಂದಿಸುವ ಮಾತೃಹೃದಯಿಯಾಗಿದ್ದರು ಎಂದರು.
ಕುರುಗೋಡಿನ ಸಹಾಯಕ ಪ್ರಾಧ್ಯಾಪಕ ಡಾ.ತಿಪ್ಪೇರುದ್ರ ಸಂಡೂರು ಭಾವ ಬೆಳಗು ಕೃತಿಯ ಕುರಿತು ಮಾತನಾಡಿ, ಭಾವಬೆಳಗು ಕೃತಿಯು ತಾಯಿ, ಜ್ಞಾನ, ಸ್ತ್ರೀ ಸಂವೇದನೆ, ಕನ್ನಡ ನಾಡು-ನುಡಿ ಹೀಗೆ ಹಲವು ವಸ್ತು ವಿಷಯಗಳನ್ನೊಳಗೊಂಡ ಕವನ ಸಂಕಲನವಾಗಿದೆ. ಕವಿಮನದ ಭಾವನೆಗಳಿಗೆ ಅಕ್ಷರ ರೂಪದ ಬೆಳಕನ್ನು ನೀಡಿ, ಕನ್ನಡ ಸಾರಸ್ವತ ಲೋಕಕ್ಕೆ ಉತ್ತಮವಾದ ಕೃತಿಯೊಂದನ್ನು ನೀಡಿದ ಕೊಟ್ಟಿಗೆ ಕರಿಬಸಮ್ಮನವರ ಕಾರ್ಯ ಅಭಿನಂದನೀಯವಾಗಿದೆ ಎಂದರು.ಯು. ಭೂಪತಿ ಸ್ಮಾರಕ ಟ್ರಸ್ಟ್ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಪ್ರಾಸ್ತಾವಿಕವಾಗಿ ಮಾತನಾಡಿ, ಭೂಪತಿಯವರ ಚಿಂತನೆಗಳು, ಆಶಯಗಳು, ಹೋರಾಟದ ಮನೋಭಾವವನ್ನು ಸಮಾಜಕ್ಕೆ ತಿಳಿಸುವ ಉದ್ದೇಶದಿಂದ ಟ್ರಸ್ಟ್ ಸ್ಥಾಪಿಸಲಾಗಿದೆ. ಟ್ರಸ್ಟ್ ವತಿಯಿಂದ ಕವಿಗೋಷ್ಠಿ, ವಿಚಾರ ಸಂಕಿರಣ, ಪುಸ್ತಕ ಬಿಡುಗಡೆ, ಕಾರ್ಯಾಗಾರಗಳು ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್. ಅಕ್ಕಿ, ಚಳ್ಳಕೆರೆಯ ನಿವೃತ್ತ ಪ್ರಾಧ್ಯಾಪಕ ಪ್ರೊ.ಜಿ. ಶರಣಪ್ಪ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ಅಳ್ಳಾಪುರದ ವೀರೇಶ್ ವಹಿಸಿದ್ದರು. ಉಪಾಧ್ಯಕ್ಷೆ ನಿಂಗಮ್ಮ, ಟ್ರಸ್ಟ್‌ನ ಮಲ್ಲಿಕಾರ್ಜುನಗೌಡ, ಅಭಿಮನ್ಯು ಭೂಪತಿ, ಪಂಪಾಪತಿ, ಮುಖಂಡರಾದ ಜಿ. ಏಕಾಂಬರಪ್ಪ, ಶಿಕ್ಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.ಸಂಡೂರು ತಾಲೂಕಿನ ತೋರಣಗಲ್ಲಿನ ಗ್ರಾಪಂ ಸಂಭಾಂಗಣದಲ್ಲಿ ಯು.ಭೂಪತಿ ಸ್ಮಾರಕ ಟ್ರಸ್ಟ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಶಾಸಕಿ ಅನ್ನಪೂರ್ಣ ತುಕಾರಾಂ ಕೊಟ್ಟಿಗೆ ಕರಿಬಸಮ್ಮ ರಚಿಸಿದ ಭಾವಬೆಳಗು ಕವನ ಸಂಕಲನ ಬಿಡುಗಡೆ ಮಾಡಿದರು.