ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ಅವರ ಬದುಕಿನ ಸಾಧನೆ, ಕೃತಿಗಳ ಕೊಡುಗೆ, ಭಾಷಾಂತರ, ಮತ್ತು ಸಮಾಜಮುಖಿ ಚಿಂತನೆಯನ್ನು ಇಂದಿನ ಯುವ ಸಾಹಿತಿಗಳಿಗೆ ಪ್ರೇರಣೆಯಾಗಿ ನಿಲ್ಲುತ್ತವೆ. ಇಂದು ಅವರ ಅಗಲಿಕೆ ಕನ್ನಡ ನಾಡಿಗೆ ಮಾತ್ರವಲ್ಲದೇ ಇಡೀ ಸಾಹಿತತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಶಾಸಕ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ಅವರ ಶ್ರದ್ಧಾಂಜಲಿ ಹಿನ್ನಲೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. 94ನೇ ವಯಸ್ಸಿನಲ್ಲಿಯೂ ಅತ್ಯಂತ ಸರಳ ಸಜ್ಜನಕೆ ವ್ಯಕ್ತಿತ್ವವನ್ನು ಹೊಂದಿದ್ದರು. ಹಲವು ಬಾರಿ ಸಿಎಂರನ್ನು ಭೇಟಿಯಾಗಲು ವಿಧಾನಸಭೆಗೆ ಬಂದಾಗ ನಾನು ಅವರೊಂದಿಗೆ ಸ್ವಲ್ಪ ಸಮಯ ಕಳೆದಿದ್ದು, ಅವರ ಸಾಹಿತ್ಯದ ಹಿರಿಮೆ, ಮೃದು ಸ್ವಭಾವಕ್ಕೆ ಬೆರಗಾಗಿದ್ದೇನೆ. ಎಸ್.ಎಲ್.ಭೈರಪ್ಪ ಅವರ ಬರಹಗಳು ಸಮಾಜವನ್ನು ಪ್ರತಿಬಿಂಬಿಸುವ ಮತ್ತು ಪ್ರಶ್ನಿಸುವ ಶಕ್ತಿಯನ್ನು ಹೊಂದಿವೆ. ಮಾತ್ರವಲ್ಲದೇ ಅನೇಕ ಕೃತಿಗಳು ಭಾರತದ ವಿವಿಧ ಭಾಷೆಗಳು ಮತ್ತು ಇಂಗ್ಲೀಷಗೆ ಅನುವಾದಗೊಂಡಿವೆ. ಕನ್ನಡ ಸಾಹಿತ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ದವರಲ್ಲಿ ಅವರು ಒಬ್ಬರು. ಕನ್ನಡ ಭಾಷೆಯ ಶ್ರೇಷ್ಠತೆಯನ್ನು ಹೆಚ್ಚಿಸಿದವರಲ್ಲಿ ಭೈರಪ್ಪ ಅಪ್ರತಿಮ ಸಾಹಿತಿಯಾಗಿದ್ದರು ಎಂದು ಸ್ಮರಿಸಿದರು.ಮುದ್ದೇಬಿಹಾಳ ಪಟ್ಟಣದಲ್ಲೊಂದು ಸಾಹಿತ್ಯ ಭವನ ನಿರ್ಮಿಸಬೇಕು ಎಂಬ ಬೇಡಿಕೆ ಬಹುದಿನಗಳಿಂದ ಸಾಹಿತಿಗಳ ಬಹುದಿನಗಳ ಬೇಡಿಕೆಯಾಗಿದೆ. ಕಾರಣಾಂತಗಳಿಂದ ಇಷ್ಟು ದಿನ ಸಾಧ್ಯವಾಗಿರಲಿಲ್ಲ. ಸದ್ಯ ನಮ್ಮ ಸರ್ಕಾರ ಒಂದಿಷ್ಟು, ಅನುದಾನ ಕೊಟ್ಟಿದೆ. ಪಟ್ಟಣದಲ್ಲಿ ಒಂದು ಸಾಹಿತ್ಯಾತ್ಮಕ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಎಸ್.ಎಲ್.ಭೈರಪ್ಪನವರ ಸ್ಮರಣಾರ್ಥ ಅತ್ಯಾಧುನಿಕ ಗುರುಭವನ ನಿರ್ಮಿಸಿ ಅವರ ಹೆಸರನ್ನೇ ಗುರುಭವನಕ್ಕೆ ಇಡಲು ತಿರ್ಮಾನಿಸಿದ್ದೇನೆ. ಎಲ್ಲ ಸಾಹಿತಿಗಳ ಅಭಿಪ್ರಾಯದಂತೆ ಮುನ್ನಡೆಯಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.ಈ ವೇಳೆ ಹಿರಿಯ ಸಾಹಿತಿಗಳಾದ ಪ್ರೊ.ಬಿ.ಎಂ.ಹಿರೇಮಠ, ಅಶೋಕ ಮಣಿ, ಆರ್.ಜಿ.ಕಿತ್ತೂರ, ತಾಲೂಕು ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಸೇರಿ ಸಾಹಿತಿಗಳು ಭೈರಪ್ಪನವರ ಸಾಧನೆ ಮತ್ತು ಅವರ ಸಾಹಿತ್ಯ ಸೇವೆಯನ್ನು ಸ್ಮರಿಸಿದರು. ಸಾಹಿತಿಗಳಾದ ಬಸವರಾಜ ನಾಲತವಾಡ, ಶಿಕ್ಷಕ ಪ್ರಭುಗೌಡ ರಾರಡ್ಡಿ, ಶಿವಪುತ್ರ ಅಜಮನಿ, ಸುರೇಶ ಹರನಾಳ, ಪ್ರಕಾಶ ನರಗುಂದ, ವೈ.ಎಚ್.ವಿಜಯಕರ, ಎ.ಆರ್.ಮುಲ್ಲಾ, ಎಂ.ಎಂ.ಬೆಳಗಲ್ಲ, ಸಿದ್ದನಗೌಡ ಬಿಜ್ಜೂರ, ಬಸವರಾಜ ಬೇವಿನಗಿಡದ, ಎನ್.ಆರ್.ಕೋರಿ, ಪರುಶುರಾಮ ನಾಲತವಾಡ, ಸದಾಶಿವ ಮಠ, ಹರೀಶ ಬೇವೂರ, ಹುಸೇನ ಮುಲ್ಲಾ ಸೇರಿದಂತೆ ಹಲವರು ಹಾಜರಿದ್ದರು.