ಮೈಸೂರಿನಿಂದ ರಂಗನ ತಿಟ್ಟು ಪಕ್ಷಿಧಾಮದವರೆಗೆ ಬೈಸಿಕಲ್ ಜಾಥಾ

KannadaprabhaNewsNetwork | Published : Jun 8, 2024 12:31 AM

ಸಾರಾಂಶ

ಪ್ರಪಂಚದಲ್ಲಿ ನಾವು ಕೇವಲ ನಮ್ಮಲ್ಲಿರುವ ಜೀವವೈವಿದ್ಯಗಳ ಬಗ್ಗೆ ಮಾತ್ರ ಮಾತನಾಡುತ್ತಿದ್ದೇವೆ, ಆದರೆ, ಎಷ್ಟು ಜೀವವೈವಿದ್ಯಗಳು ನಾಶವಾಗುತ್ತಿವೆ ಎಂಬುದರ ಬಗ್ಗೆ ಮಾತನಾಡುತ್ತಿಲ್ಲ. ಹಲವು ಜೀವವೈವಿದ್ಯಗಳು ಅಳಿವಿನ ಅಂಚಿಗೆ ಹೋಗುತ್ತಿವೆ. ವಾತಾವರಣವು ಜೀವಿಗಳಿಗೆ ಬದುಕಲು ಯೋಗ್ಯವಲ್ಲದ ಸ್ಥಿತಿಯೆಡೆಗೆ ಬಹಳ ವೇಗವಾಗಿ ಚಲಿಸುತ್ತಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮೈಸೂರಿನಿಂದ ರಂಗನ ತಿಟ್ಟು ಪಕ್ಷಿಧಾಮದವರೆಗೆ ಬೈಸಿಕಲ್ ಜಾಥಾ ನಡೆಯಿತು.

ಮೈಸೂರು ಶೇಷಾದ್ರಿಪುರಂ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಎಕೋ ಕ್ಲಬ್ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶದಿಂದ ಪರಿಸರದ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಜಾಥಾ ನಡೆಸಲಾಯಿತು. ರಂಗನತಿಟ್ಟು ಪಕ್ಷಿಧಾಮದ ಅರಣ್ಯಾಧಿಕಾರಿ ಸಂತೋಷ್ ಉಗಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪಕ್ಷಿಧಾಮದಲ್ಲಿ ಸುಮಾರು 221 ವೈವಿಧ್ಯದ ಪಕ್ಷಿ ಸಂಕುಲಗಳಿವೆ. ಈ ಪಕ್ಷಧಾಮ ದೇಶದ ಪ್ರಮುಖ ಪಕ್ಷಿಧಾಮಗಳಲ್ಲೊಂದಾಗಿ ಪ್ರಸಿದ್ಧವಾಗಿದೆ ಎಂದರು.

ಪಕ್ಷಿ ಸಂಕುಲಗಳಿಗೆ ಸಂತಾನೋತ್ಪತ್ತಿಗೆ ಅನುಕೂಲವಾದ ವಾತಾವರಣ ಈ ಪ್ರದೇಶದಲ್ಲಿರುವುದರಿಂದ ಪ್ರಪಂಚದ ನಾನಾ ಭಾಗಗಳು, ದೂರದ ದೇಶಗಳಿಂದ ಇಲ್ಲಿಗೆ ಬರುತ್ತವೆ. ಇಲ್ಲಿಗೆ ಪ್ರಸಿದ್ಧ ಪಕ್ಷಿ ತಜ್ಞ ಸಲೀಂ ಅಲಿಯವರು ಭೇಟಿ ನೀಡಿ ಮೈಸೂರು ಅರಸರಿಗೆ ಈ ಸ್ಥಳದ ವಿಶೇಷತೆ ಬಗ್ಗೆ ತಿಳಿಸಿ ಈ ಸ್ಥಳ ಪಕ್ಷಿಧಾಮವಾಗುವಂತೆ ಪ್ರೇರೇಪಿಸಿದ್ದರು. 1994ರಲ್ಲಿ ಈ ಸ್ಥಳ ರಂಗನತಿಟ್ಟು ಪಕ್ಷಿಧಾಮವಾಯಿತು. ಇಲ್ಲಿ ವರ್ಷಪೂರ್ತಿ ನಮಗೆ ಪಕ್ಷಿಗಳು ನೋಡಲು ಸಿಗುತ್ತವೆ ಎಂದರು.

ನಂತರ ಸಂಪನ್ಮೂಲ ವ್ಯಕ್ತಿ ಮನು ಮಾತನಾಡಿ, ಪ್ರಸ್ತುತ ನಾವೆಲ್ಲರೂ ಪರಿಸರ ದಿನವನ್ನು ಬಹಳ ದುಃಖದಿಂದ ಆಚರಿಸುವಂತಾಗಿದೆ. ವಿಶ್ವಸಂಸ್ಥೆಯಿಂದ ವಿಶ್ವ ಪರಿಸರ ದಿನವನ್ನು ಆಚರಿಸಲು ತೀರ್ಮಾನಿಸಿದ ನಂತರವೇ, ಪರಿಸರ ಹೆಚ್ಚು ಮಾಲಿನ್ಯವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಪಂಚದಲ್ಲಿ ನಾವು ಕೇವಲ ನಮ್ಮಲ್ಲಿರುವ ಜೀವವೈವಿದ್ಯಗಳ ಬಗ್ಗೆ ಮಾತ್ರ ಮಾತನಾಡುತ್ತಿದ್ದೇವೆ, ಆದರೆ, ಎಷ್ಟು ಜೀವವೈವಿದ್ಯಗಳು ನಾಶವಾಗುತ್ತಿವೆ ಎಂಬುದರ ಬಗ್ಗೆ ಮಾತನಾಡುತ್ತಿಲ್ಲ. ಹಲವು ಜೀವವೈವಿದ್ಯಗಳು ಅಳಿವಿನ ಅಂಚಿಗೆ ಹೋಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ವಾತಾವರಣವು ಜೀವಿಗಳಿಗೆ ಬದುಕಲು ಯೋಗ್ಯವಲ್ಲದ ಸ್ಥಿತಿಯೆಡೆಗೆ ಬಹಳ ವೇಗವಾಗಿ ಚಲಿಸುತ್ತಿದೆ. ಇನ್ನಾದರೂ ಪರಿಸರದ ಕಾಳಜಿ ಮುಂದಾಗದಿದ್ದರೆ ಭವಿಷ್ಯದಲ್ಲಿ ಇದರ ಕೆಟ್ಟ ಪರಿಣಾಮವನ್ನು ಮುಂದಿನ ಪೀಳಿಗೆಗೆ ಅನುಭವಿಸಬೇಕಾಗುತ್ತದೆ ಎಂದು ವಿಷಾದಿಸಿದರು.

ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ.ರಾಘವೇಂದ್ರ ಬೈಕ್ ಜಾಥಾದ ನೇತೃತ್ವ ವಹಿಸಿದ್ದರು. ಈ ವೇಳೆ ಪಕ್ಷಿಧಾಮದ ಡಿಆರ್‌ಎಫ್‌ಒ ಪುಟ್ಟ ಮಾದೇಗೌಡ, ಪ್ರಾಂಶುಪಾಲೆ ಡಾ.ಸೌಮ್ಯ ಈರಪ್ಪ ಕೆ., ಸಹ ಕಾರ್ಯಕ್ರಮಾಧಿಕಾರಿ ಮುರಳಿ, ಎಕೋ ಕ್ಲಬ್ ಸಂಯೋಜಕ ಗಣಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಸೋನಿಯಾ ಎಸ್, ಎನ್‌ಸಿಸಿ ಅಧಿಕಾರಿ ಲ್ಯೂಟಿನೆಂಟ್ ಕುಮಾರ್ ಆರ್., ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಸೇರಿದಂತೆ ಇತರರು ಇದ್ದರು.

Share this article