ಸಾಗರ ಖಂಡ್ರೆ ಗೆಲುವಿಗೆ ಶ್ರಮಿಸಿದ ತಾಳಂಪಳ್ಳಿಗೆ ಸನ್ಮಾನ

KannadaprabhaNewsNetwork | Published : Jun 8, 2024 12:31 AM

ಸಾರಾಂಶ

ಬಸವಕಲ್ಯಾಣ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಯೋಜಕ ಧನರಾಜ ತಾಳಂಪಳ್ಳಿ ಶ್ರಮವಹಿಸಿ ದುಡಿದಿದಕ್ಕಾಗಿ ಅವರ ಜನಸಂಪರ್ಕ ಕಾರ್ಯಾಲಯದಲ್ಲಿ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಸನ್ಮಾನಿಸಿ ಅಭಿನಂದಿಸಿದರು

ಬಸವಕಲ್ಯಾಣ: ಬೀದರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಯುವ ಮುಖಂಡ ಸಾಗರ ಖಂಡ್ರೆ ಅವರು 1.28ಲಕ್ಷಕ್ಕೂ ಹೆಚ್ಚಿನ ಮತಗಳು ಪಡೆದು ಪ್ರಚಂಡ ಗೆಲವು ಸಾಧಿಸಲು ಜಿಲ್ಲೆಯಲ್ಲಿ ಅನೇಕರು ಶ್ರಮಿಸಿದ್ದು, ಬಸವಕಲ್ಯಾಣ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಯೋಜಕ ಧನರಾಜ ತಾಳಂಪಳ್ಳಿ ಶ್ರಮವಹಿಸಿ ದುಡಿದಿದಕ್ಕಾಗಿ ಅವರ ಜನಸಂಪರ್ಕ ಕಾರ್ಯಾಲಯದಲ್ಲಿ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಸನ್ಮಾನಿಸಿ ಅಭಿನಂದಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ತಾಳಂಪಳ್ಳಿ, ಬಸವಕಲ್ಯಾಣ ವಿಧಾನ ಸಭಾ ಕ್ಷೇತ್ರಕ್ಕೆ ಕೆಪಿಸಿಸಿ ವತಿಯಿಂದ ಸಂಯೋಜಕರಾಗಿ ನೇಮಿಸಿ ಸಾಗರ ಈಶ್ವರ ಖಂಡ್ರೆರನ್ನು ಗೆಲ್ಲಿಸಲು ಶ್ರಮಿಸಬೇಕು ಎಂದು ಸೂಚಿಸಲಾಗಿತ್ತು. ಅದರಂತೆ ಪಕ್ಷದ ಪ್ರಮುಖರು, ಆಯಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೊಂದಿಗೆ ಸಮನ್ವಯದಿಂದ ಕೆಲಸ ಮಾಡಿ ಬೀದರ ಲೋಕಸಭಾ ಕ್ಷೇತ್ರದಿಂದ ಸಾಗರ ಖಂಡ್ರೆರನ್ನು ಬಸವಕಲ್ಯಾಣ ಕ್ಷೇತ್ರದಿಂದ 9ಸಾವಿರಕ್ಕೂ ಅಧಿಕ ಮತ ಲೀಡ್ ನೀಡಿದ್ದೇವೆ ಎಂದರು.

ಕಾಂಗ್ರೆಸ ಜಿಲ್ಲಾ ಉಪಾಧ್ಯಕ್ಷ ಅರ್ಜುನ ಕನಕ ಮಾತನಾಡಿ, ಧನರಾಜ ತಾಳಂಪಳ್ಳಿ ಶ್ರಮ ಹಾಗೂ ಕಾರ್ಯಕರ್ತರ ಪ್ರಯತ್ನದ ಫಲವಾಗಿ ಸಾಗರ ಖಂಡ್ರೆ ಹೆಚ್ಚಿನ ಮತಗಳಿಂದ ಜಯಶಾಲಿಯಾಗಿದ್ದಾರೆ. ಆದ್ದರಿಂದ ಧನರಾಜ ತಾಳಂಪಳ್ಳಿ ಅವರಿಗೆ ಅಭಿನಂದನೆಗಳು ಸಲ್ಲಿಸುತ್ತೇನೆ ಎಂದು ಹೇಳಿದರು.

ಪ್ರಮುಖರಾದ ಮನೋಹರ ಮೈಸೆ, ಬಂಡೆಪ್ಪ ಮೇತ್ರೆ, ರಾಜನ ಚೌಧರಿ ಮತ್ತಿತರರು ಮಾತನಾಡಿ ಅಭಿನಂದಿಸಿದರು. ನಂತರ ಸಿಹಿ ಹಂಚಿ ಪಟಾಕಿ ಸಿಡಿಸುವುದರೊಂದಿಗೆ ಸಾಗರ ಖಂಡ್ರೆಯವರ ಗೆಲುವಿನ ವಿಜಯೋತ್ಸವ ನಡೆಯಿತು.

ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ಸದಾನಂದ ಹಳ್ಳೆ, ಪ್ರಮುಖರಾದ ನಾರಾಯಣ ಗೊಣೆ, ಪಾಶಾಮಿಯ್ಯಾ, ಅಬ್ದುಲ ವಹೀದ, ಗುರು ದುರ್ಗೆ, ಅಬ್ದುಲ ಅಜೀಮ, ಯಾಯಾ ಪಾಷಾ, ವಿಠ್ಠಲರೆಡ್ಡಿ, ಸಂಜು ಲಾಡೆ, ಕವಿರಾಜ, ಶುಭಂ ಸ್ವಾಮಿ ಸೇರದಂತೆ ಅನೇಕರು ಉಪಸ್ಥಿತರಿದ್ದರು.

Share this article