ಕನ್ನಡಪ್ರಭ ವಾರ್ತೆ ರಾಮನಗರಬಿಡದಿ ಪಟ್ಟಣದ ಮುಖ್ಯರಸ್ತೆಯ ಮಾದರಿಯಲ್ಲಿಯೇ 23 ವಾರ್ಡುಗಳಲ್ಲಿಯೂ ರಸ್ತೆ ಹಾಗೂ ಫುಟ್‌ಪಾತ್ ಒತ್ತುವರಿ ಜಾಗ ತೆರವುಗೊಳಿಸುವ ಸಂಬಂಧ ಸೋಮವಾರ ನಡೆದ ಬಿಡದಿ ಪುರಸಭೆ ವಿಶೇಷ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಯಿತು.ಬಿಡದಿ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಹರಿಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಬಿಡದಿ ಪಟ್ಟಣದ ಮುಖ್ಯರಸ್ತೆಯ ಫುಟ್‌ಪಾತ್ ಒತ್ತುವರಿ ತೆರವು ವಿಚಾರದ ಚರ್ಚೆ ವೇಳೆ ಸ್ಥಾಯಿ ಸಮಿತಿ ಅಧ್ಯಕ್ಷ ಲೋಹಿತ್ ಕುಮಾರ್ ರವರು ಒತ್ತುವರಿ ತೆರವು ಟೌನಿಗೆ ಸೀಮಿತಗೊಳಿಸದೆ 23 ವಾರ್ಡುಗಳಲ್ಲೂ ಕಾರ್ಯಾಚರಣೆ ನಡೆಸಬೇಕು. ದಾಖಲಾತಿಗಳನ್ನು ಪರಿಶೀಲಿಸಿ ಒತ್ತುವರಿ ತೆರವು ಮಾಡೋಣ ಸಲಹೆ ನೀಡಿದರು. ಇದಕ್ಕೆ ಧ್ವನಿಗೂಡಿಸಿದ ವಿಪಕ್ಷ ನಾಯಕ ಸಿ.ಉಮೇಶ್ ರವರು, 23 ವಾರ್ಡುಗಳಲ್ಲಿಯೂ ಸರ್ಕಾರಿ ಜಾಗ ಒತ್ತುವರಿಯಾಗಿದ್ದರೆ ತೆರವು ಮಾಡಲೇಬೇಕು. ಕೇವಲ ಬರೀ ಬಾಯಿ ಮಾತಿನಲ್ಲಿ ಹೇಳಿದರೆ ಸಾಲದು. ನಿಮ್ಮ ಸಲಹೆಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಸಭೆಯಲ್ಲಿಯೇ ರೆಜ್ಯುಲೇಷನ್ ಮಾಡೋಣ ಎಂದು ಹೇಳಿದರು.ಪಟ್ಟಣದಲ್ಲಿ ಒತ್ತುವರಿ ತೆರವು ಮಾಡಿ ಗ್ರಾಮೀಣ ಪ್ರದೇಶ ಹೊಂದಿರುವ ವಾರ್ಡುಗಳಲ್ಲಿ ಕಾರ್ಯಾಚರಣೆ ನಡೆಸದಿದ್ದರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಆದ್ದರಿಂದ ಸಭೆಯಲ್ಲಿಯೇ 23 ವಾರ್ಡುಗಳಲ್ಲಿನ ಒತ್ತುವರಿ ತೆರವುಗೊಳಿಸಲು ತೀರ್ಮಾನ ಮಾಡುವಂತೆ ಸದಸ್ಯ ರಾಕೇಶ್ ಸಲಹೆ ನೀಡಿದರು. ಉಳಿದ ಆಡಳಿತ ಪಕ್ಷದ ಸದಸ್ಯರು ಈಗ ಒತ್ತುವರಿ ತೆರವು ಮಾಡಿರುವ ರಸ್ತೆಯನ್ನು ಅಭಿವೃದ್ಧಿ ಪಡಿಸಿ, ಆನಂತರ ಕಾರ್ಯಾಚರಣೆ ಮುಂದುವರೆಸುವ ಬಗ್ಗೆ ತೀರ್ಮಾನಿಸೋಣ ಎಂದು ಹೇಳಿ ಚರ್ಚೆ ನಿಲ್ಲಿಸಿದರು.ಸದಸ್ಯ ಸಿ.ಉಮೇಶ್, ಮುಖ್ಯರಸ್ತೆಯಲ್ಲಿ ಗುಣಮಟ್ಟದ ರಸ್ತೆ, ಚರಂಡಿ, ಬೀದಿ ದೀಪ ಅಳವಡಿಸಬೇಕಿದೆ. ಇದಕ್ಕಾಗಿ ಪಟ್ಟಣವನ್ನು ಒಳಗೊಂಡಿರುವ 7 ರಿಂದ 18ನೇ ವಾರ್ಡುಗಳಿಗೆ 20 ಲಕ್ಷ ರುಪಾಯಿ ಅನುದಾನವನ್ನು ಹೆಚ್ಚುವರಿಯಾಗಿಯೇ ನೀಡುವಂತೆ ಸಲಹೆ ನೀಡಿದರೆ, ಮತ್ತೊಬ್ಬ ಸದಸ್ಯ ನಾಗರಾಜ್ , ಅಭಿವೃದ್ಧಿ ವಿಚಾರದಲ್ಲಿ ಪಕ್ಷಪಾತ ಮಾಡುವುದೇ ಬೇಡ. ಆ ವಾರ್ಡುಗಳಿಗೆ 20 ಲಕ್ಷ ಇಲ್ಲದಿದ್ದರೆ 40 ಲಕ್ಷ ರುಪಾಯಿಯೇ ನೀಡಿ ಎಂದು ಹೇಳಿ ಬೆಂಬಲ ವ್ಯಕ್ತಪಡಿಸಿದರು.ಕೆಇಬಿ ಕಚೇರಿ ರಸ್ತೆ ವಿಚಾರ ಪ್ರಸ್ತಾಪವಾದಾಗ ಸಿ.ಉಮೇಶ್ ರವರು, ಕಾರ್ಖಾನೆಗಳ ಟೌನ್ ಶಿಪ್ ನಿರ್ಮಾಣದ ಕಾರಣ ಪುರಸಭೆಗೆ ಬಿಡದಿ ಕೈಗಾರಿಕೆಗಳಿಂದ ಬರುತ್ತಿದ್ದ ತೆರಿಗೆ ಕಡಿತಗೊಳ್ಳಲಿದ್ದು, ಪರ್ಯಾಯ ಆದಾಯ ಮೂಲ ಕಂಡುಕೊಳ್ಳಬೇಕಿದೆ. ಹೀಗಾಗಿ ಕೆಇಬಿ ಕಚೇರಿ ರಸ್ತೆಯಲ್ಲಿ ಅಂಗಡಿ ಮಳಿಗೆ ನಿರ್ಮಿಸುವ ಸಂಬಂಧ ಶಾಸಕರು, ಪುರಸಭೆ ಅಧ್ಯಕ್ಷರು ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಹೇಳಿದರು.ಮುಖ್ಯರಸ್ತೆಯ ಅಭಿವೃದ್ಧಿ ವಿಚಾರ ಪ್ರಸ್ತಾಪವಾದಾಗ ಸದಸ್ಯ ಸಿ.ಉಮೇಶ್ , ಬಿಡದಿ ಪಟ್ಟಣದ ಅಭಿವೃದ್ಧಿಗೆ ನಾವು ಅಡ್ಡಗಾಲು ಹಾಕುವುದಿಲ್ಲ. ಪುರಸಭೆ ಅನುದಾನದಲ್ಲಿ ಅಭಿವೃದ್ಧಿ ಕೈಗೊಳ್ಳೋಣ. ಒಂದು ವೇಳೆ ಪುರಸಭೆಯಿಂದ ಅನುದಾನ ಕೊಡಲು ಸಾಧ್ಯವಾಗದಿದ್ದರೆ ಶಾಸಕರಿಂದ ಅಗತ್ಯ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಲಾಗು ವುದು ಎಂದು ಸಭೆಯ ಗಮನ ಸೆಳೆದರು.ಬಿಡದಿ ಮುಖ್ಯ ರಸ್ತೆ ಒತ್ತುವರಿ ತೆರವು ಮಾಡಿದ ಬಳಿಕ ಅಳತೆ ಕಾರ್ಯ ಮಾಡಿ ಎಲ್ಲರಿಗೂ ಒಂದೇ ನ್ಯಾಯ ಕೊಡಬೇಕು. ಸರ್ಕಾರದ ಸ್ವತ್ತನ್ನು ಉಳಿಸ ಬೇಕಾದದ್ದು, ಅಧಿಕಾರಿಗಳು ಮತ್ತು ನಮ್ಮಗಳ ಆದ್ಯ ಕರ್ತವ್ಯ. ಅಳತೆ ಮಾಡುವಾಗ ಒತ್ತುವರಿ ಮಾಡಿರುವ ಪ್ರಭಾವಿಗಳಿಗೆ ರಿಯಾಯಿತಿ ನೀಡಿರುವುದು ಸಹ ಕಂಡು ಬಂದಿದೆ. ಇದು ಸರಿಯಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ರಾಕೇಶ್ ಸಾರ್ವಜನಿಕರಿಗೆ ತೊಂದರೆ ಆಗದಂತೆ ಅವರ ಮನವೊಲಿಸಿ ಕೆಲಸ ಮಾಡುವ ಪ್ರಯತ್ನ ಮಾಡೋಣ ಎಂದು ಹೇಳಿದರು.
ಸದಸ್ಯ ದೇವರಾಜು ಮಾತನಾಡಿ, ಎಸ್‌ಎಫ್ ಸಿ ಅನುದಾನದಲ್ಲಿ ಕಾಮಗಾರಿ ಬದಲಾವಣೆ ಮಾಡಿ ಕೆಲಸ ಮಾಡುತ್ತಿದ್ದಾರೆ. ತಿಮ್ಮಪ್ಪನ ಕೆರೆಗೆ ಗ್ಯಾಸ್ ಲೈನ್‌ನವರು ಪುರಸಭೆಗೆ ಕಟ್ಟಿದ ಅನುದಾನವಾಗಿದೆ. ಇದರಲ್ಲಿ ಶಾಸಕ ಎಚ್.ಸಿ. ಬಾಲಕೃಷ್ಣ ಮತ್ತು ಸಂಸದರ ಪಾತ್ರ ವೇನೂ ಇಲ್ಲ. ಇದರಲ್ಲಿ ಪುರಸಭೆಯ ಎಲ್ಲ ಸದಸ್ಯರ ಶ್ರಮವಿದೆ. ವಿಪಕ್ಷದವರು ಇಲ್ಲದಿದ್ದರೆ ನಾವು ಕೆಲಸ ಮಾಡುತ್ತೇವೆ ಎಂದು ಛೇಡಿಸಿದರು.ಇದರಿಂದ ಅಸಮಾಧಾನಗೊಂಡ ಸಿ.ಉಮೇಶ್, ವಿಪಕ್ಷದವರು ಇಲ್ಲದಿದ್ದರು ಕೆಲಸ ಮಾಡುತ್ತೇವೆ ಎನ್ನುವುದಾದರೆ ಮುಂದಿನ ಸಭೆಗಳಿಗೆ ನಾವ್ಯಾರು ಬರುವುದಿಲ್ಲ. ಕೆಲಸ ಮಾಡಿ ತೋರಿಸೋಣ ಎಂದು ತಿರುಗೇಟು ನೀಡಿದರು. ಆಗ ಮಧ್ಯ ಪ್ರವೇಶಿಸಿದ ರಾಕೇಶ್ ಮತ್ತು ನಾಗರಾಜ್ ಸದಸ್ಯರು ಪಕ್ಷಪಾತ ಮರೆತು ಕೆಲಸ ಮಾಡಿದಾಗ ಮಾತ್ರ ಬಿಡದಿ ಪಟ್ಟಣ ಅಭಿವೃದ್ಧಿಯಾಗಲು ಸಾಧ್ಯವೆಂದು ಹೇಳಿ ದೇವರಾಜು ಮತ್ತು ಉಮೇಶ್ ಅವರನ್ನು ಸಮಾಧಾನ ಪಡಿಸಿದರು.ಪಾದಚಾರಿ ಮಾರ್ಗದಲ್ಲಿ ನಿಲ್ಲಿಸುವ ವಾಹನಗಳನ್ನು ಟೋಯಿಂಗ್ ಮಾಡಲು ಬಾಡಿಗೆ ಆಧಾರದ ಮೇಲೆ ಪೋಲೀಸ್ ಠಾಣೆಗೆ ತಾತ್ಕಾಲಿಕವಾಗಿ ನೀಡುವ ಬಗ್ಗೆಯೂ ಚರ್ಚೆ ನಡೆಸಿದ ಸೋಮಶೇಖರ್, ಸಿ.ಉಮೇಶ್, ರಮೇಶ್ ರವರು, ಮೊದಲು ಪೇ ಪಾರ್ಕಿಂಗ್ ವ್ಯವಸ್ಥೆ ಮತ್ತು ರಸ್ತೆ ಅಭಿವೃದ್ಧಿಯಾಗಲಿ. ಆನಂತರ ಟೋಯಿಂಗ್ ವಾಹನ ನೀಡೋಣ ಎಂದು ಸಲಹೆ ನೀಡಿದರು.ವಿಶೇಷ ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಎಸ್.ಲೋಹಿತ್ ಕುಮಾರ್, ಮುಖ್ಯಾಧಿಕಾರಿ ರಮೇಶ್ ಸೇರಿದಂತೆ ಸದಸ್ಯರು, ಅಧಿಕಾರಿಗಳು ಭಾಗವಹಿಸಿದ್ದರು.
...ಬಾಕ್ಸ್ ....ಸಭೆಗೆ ತಡವಾಗಿ ಬಂದ ಅಧ್ಯಕ್ಷ, ಉಪಾಧ್ಯಕ್ಷಬಿಡದಿ ಪುರಸಭೆ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ನಿಗದಿಯಾಗಿದ್ದ ವಿಶೇಷ ಸಭೆಗೆ ಕಾಂಗ್ರೆಸ್ ಸದಸ್ಯರು ಸರಿಯಾದ ಸಮಯಕ್ಕೆ ಹಾಜರಾಗಿ ಮುಖ್ಯಾಧಿಕಾರಿ, ಅಧಿಕಾರಿಗಳು ಕಾದು ಕುಳಿತಿದ್ದರು. ಆದರೆ, ಜೆಡಿಎಸ್ ಬೆಂಬಲಿತ ಅಧ್ಯಕ್ಷರು, ಉಪಾಧ್ಯಕ್ಷರ ಆದಿಯಾಗಿ ಎಲ್ಲ ಸದಸ್ಯರು ಒಂದು ಗಂಟೆ ವಿಳಂಬವಾಗಿ ಅಂದರೆ 12 ಗಂಟೆಗೆ ಆಗಮಿಸಿದರು. ಆಗ ಮಾಜಿ ಶಾಸಕರು ಸಭೆ ಕರೆದಿದ್ದರಿಂದ ತಡವಾಯಿತು ಎಂದು ಹೇಳಿದ ಮಾತಿಗೆ ಮುಂದಿನ ಪುರಸಭೆಯ ಸಭೆಗಳನ್ನು ಅಲ್ಲೇ ಮಾಡಿ ಎಂದು ಸದಸ್ಯ ಸಿ.ಉಮೇಶ್ ಆದಿಯಾಗಿ ಕಾಂಗ್ರೆಸ್ ಸದಸ್ಯರು ಹೇಳುವ ಮೂಲಕ ಜೆಡಿಎಸ್ ಸದಸ್ಯರ ಕಾಲೆಳೆದರು.---- 28ಕೆಆರ್ ಎಂಎನ್ 1.ಜೆಪಿಜಿಬಿಡದಿ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಹರಿಪ್ರಸಾದ್ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಯಿತು.----