ಗುರುವಾಯನಕೆರೆ: ತಾಲೂಕು ಮಟ್ಟದ ಬಂಟ ಕ್ರೀಡೋತ್ಸವ

KannadaprabhaNewsNetwork | Published : Apr 28, 2025 11:45 PM

ಸಾರಾಂಶ

ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ವತಿಯಿಂದ ತಾಲೂಕು ಯುವ ಬಂಟರ ವಿಭಾಗ, ತಾಲೂಕು ಮಹಿಳಾ ಬಂಟರ ವಿಭಾಗ ಇದರ ಸಂಯುಕ್ತ ಆಶ್ರಯದಲ್ಲಿ ಶನಿವಾರ ಗುರುವಾಯನಕೆರೆ ಶಕ್ತಿನಗರ ನವಶಕ್ತಿ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಬಂಟ ಕ್ರೀಡೋತ್ಸವ ನೆರವೇರಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಬಂಟರ ಕ್ರೀಡೋತ್ಸವದ ಮೂಲಕ ತುಳುನಾಡ ಸಂಸ್ಕೃತಿ, ಸಂಸ್ಕಾರವನ್ನು ಅತ್ಯಂತ ಸುಂದರವಾಗಿ ಅಭಿವ್ಯಕ್ತಗೊಂಡಿದೆ. ಇಂದಿನ ವಾತಾವರಣದಲ್ಲಿ ಜಾತಿ ಜಾತಿಗಳ ಮಧ್ಯೆ ಅಂತರ ಕಾಯ್ದುಕೊಳ್ಳದೆ ಹಿಂದೂ ಸಮಾಜ ಒಂದಾಗಿ ಬದುಕಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ಶಾಸಕ ಹರೀಶ್ ಪೂಂಜ ಹೇಳಿದ್ದಾರೆ.

ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ವತಿಯಿಂದ ತಾಲೂಕು ಯುವ ಬಂಟರ ವಿಭಾಗ, ತಾಲೂಕು ಮಹಿಳಾ ಬಂಟರ ವಿಭಾಗ ಇದರ ಸಂಯುಕ್ತ ಆಶ್ರಯದಲ್ಲಿ ಶನಿವಾರ ಗುರುವಾಯನಕೆರೆ ಶಕ್ತಿನಗರ ನವಶಕ್ತಿ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಬಂಟ ಕ್ರೀಡೋತ್ಸವ ಪಥ ಸಂಚಲನ ಉದ್ಘಾಟಿಸಿ ಅವರು ಮಾತನಾಡಿದರು.

ಪಹಲ್ಗಾಮ್ ನಲ್ಲಿ ನಡೆದ ದಾಳಿಯಲ್ಲಿ ಉಗ್ರರು ಯಾರು ಯಾವ ಜಾತಿ ಎಂದು ಕೇಳಲಿಲ್ಲ. ಕೇವಲ ಧರ್ಮವನ್ನು ಗುರಿಯಾಗಿಸಿ ಹತ್ಯೆ ನಡೆಸಿದ್ದಾರೆ. ಹಾಗಾಗಿ ನಾವೆಲ್ಲ ಜಾತಿ ಬದಿಗೊತ್ತಿ ಹಿಂದೂ ಸಮಾಜವೆಂಬ ಧ್ವಜದಡಿ ನಿಲ್ಲುವ ಅವಶ್ಯಕತೆ ನಮ್ಮ ಮುಂದಿದೆ ಎಂದರು.ಉದ್ಯಮಿ

ಶಶಿಧರ್ ಶೆಟ್ಟಿ ಬರೋಡಾ ಮಾತನಾಡಿ, ಹಿರಿಯರ ಮಾರ್ಗದರ್ಶನದಲ್ಲಿ ಎಲ್ಲರೂ ಒಟ್ಟು ಸೇರುವ ಮೂಲಕ ಬಂಟರ ಸಂಘ ಜಿಲ್ಲೆಗೆ ಮಾದರಿಯಾಗುವ ಕೆಲಸವಾಗಿದೆ ಎಂದರು.

ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘ ಅಧ್ಯಕ್ಷ ಬಿ.ಜಯಂತ ಶೆಟ್ಟಿ ಭಂಡಾರಿಗುಡ್ಡೆ ಅಧ್ಯಕ್ಷತೆ ವಹಿಸಿದ್ದರು.

ಕಾರ್ಕಳ ಉದ್ಯಮಿ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಗುರುವಾಯನಕೆರೆ ವಿಜಯ ಕ್ರಿಡಿಟ್ -ಕೋ ಆಪರೇಟಿವ್ ಸೊಸೈಟಿ ಸ್ಥಾಪಕಾಧ್ಯಕ್ಷ ಎಸ್‌.ಜಯರಾಮ ಶೆಟ್ಟಿ, ಕಾವೂರು ಬಂಟರ ಸಂಘ ಅಧ್ಯಕ್ಷ ಆನಂದ ಶೆಟ್ಟಿ, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಮೂಡುಬಿದ್ರೆ ಬಂಟರ ಮಹಿಳಾ ಘಟಕ ಅಧ್ಯಕ್ಷೆ ಶೋಭಾ ಎಸ್.ಹೆಗ್ಡೆ, ನಿಟ್ಟೆ ಯುನಿವರ್ಸಿಟಿ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕರುಣಾಕರ ಶೆಟ್ಟಿ ಮುಂಡಾಡಿ, ಸಂಘದ ಮಹಿಳಾ ವಿಭಾಗ ಅಧ್ಯಕ್ಷೆ ಜಯಲಕ್ಷ್ಮೀ ಎನ್.ಸಾಮಾನಿ, ಉದ್ಯಮಿ ರಾಜೇಶ್ ಶೆಟ್ಟಿ ನವಶಕ್ತಿ, ವಿಜಯ ಕೋ.ಆ.ಸೊಸೈಟಿ ಅಧ್ಯಕ್ಷ ಅಜಿತ್ ಜಿ.ಶೆಟ್ಟಿ ಯುವ ವಿಭಾಗ ಮತ್ತು ಮಹಿಳಾ ವಿಭಾಗ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ತಾಲೂಕಿನ 9 ವಲಯದಿಂದ ತಯಳುನಾಡ ಆಚಾರ - ವಿಚಾರ, ಸಂಸ್ಕೃತಿ, ಆರಾಧನೆ, ಅನೇಕ ವಿಚಾರಧಾರೆಗಳನ್ನು ಒಳಗೊಂಡ ಪಥ ಸಂಚಲನ ಅದ್ಧೂರಿಯಾಗಿ ಮೂಡಿಬಂತು. ಮಹಿಳೆ ಮತ್ತು ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಕಾರ್ಯಕಾರಿ ಸಮಿತಿ ಉಪಾಧ್ಯಕ್ಷ ಉಮೇಶ್ ಶೆಟ್ಟಿ ಉಜಿರೆ ಸ್ವಾಗತಿಸಿದರು. ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ ವಂದಿಸಿದರು. ಪ್ರಕಾಶ್ ಶೆಟ್ಟಿ ನೊಚ್ಚ, ರವೀಂದ್ರ ಶೆಟ್ಟಿ ಬಳಂಜ ನಿರೂಪಿಸಿದರು.

Share this article