ರಾಮನಗರ: ಕೃಷಿ ಭೂಮಿ ರೈತರ ಹೃದಯ ಇದ್ದಂತೆ. ರಾಜ್ಯ ಸರ್ಕಾರ ಬಿಡದಿ ಟೌನ್ ಶಿಪ್ ಹೆಸರಿನಲ್ಲಿ ರೈತರ ಹೃದಯವನ್ನೇ ಕಸಿದುಕೊಳ್ಳುವ ಕೆಲಸಕ್ಕೆ ಮುಂದಾಗಿದೆ. ಇದಕ್ಕೆ ಅವಕಾಶ ನೀಡದೆ ಬಿಡದಿಯಿಂದ ವಿಧಾನಸೌಧಕ್ಕೆ ಪಾದಯಾತ್ರೆ ನಡೆಸೋಣ ಎಂದು ಅಖಿಲ ಭಾರತ ಕಿಸಾನ್ ಸಭಾ ರಾಷ್ಟ್ರೀಯ ಸಹ ಕಾರ್ಯದರ್ಶಿ ಡಿ.ರವಿಂದ್ರನ್ ಕರೆನೀಡಿದರು.
ಕಳೆದ 438 ದಿನಗಳಿಂದ ರೈತರು ರಾತ್ರಿ ಹಗಲು ಎನ್ನದೆ ಹೋರಾಟ ನಡೆಸುತ್ತಿದ್ದಾರೆ. ಪಂಚೇಂದ್ರಿಯಗಳನ್ನು ಕಳೆದುಕೊಂಡಿರುವ ರಾಜ್ಯ ಸರ್ಕಾರಕ್ಕೆ ರೈತರ ಸಂಕಷ್ಟ ಗೊತ್ತಾಗುತ್ತಿಲ್ಲ. ಈ ಸರ್ಕಾರವನ್ನು ಎಚ್ಚರಿಸಲು ಹೋರಾಟವನ್ನು ಬೈರಮಂಗಲ ವೃತ್ತದಿಂದ ವಿಧಾನಸೌಧಕ್ಕೆ ಸ್ಥಳಾಂತರ ಮಾಡಿ ನ್ಯಾಯ ದಕ್ಕಿಸಿಕೊಳ್ಳೋಣ ಎಂದು ಹೇಳಿದರು.
ಬಿಡದಿಯಿಂದ ವಿಧಾನಸೌಧ ಚಲೋ ಹೋರಾಟದಲ್ಲಿ ಕನಿಷ್ಠ 5 ಸಾವಿರ ರೈತರಾದರು ಭಾಗಿಯಾಗಬೇಕು. ಈಗಾಗಲೇ ಯೋಜನೆ ವಿರೋಧಿಸಿರುವ 3 ಸಾವಿರ ರೈತರಿದ್ದು, ಅವರೊಂದಿಗೆ ನಾವು 2 ಸಾವಿರ ರೈತರನ್ನು ಕರೆತರುತ್ತೇವೆ. ವಿಧಾನಸೌಧದ ಮೆಟ್ಟಿಲು ಇಳಿದು ಬಂದ ರಾಜ್ಯ ಸರ್ಕಾರವೇ ರೈತರ ಎದುರು ಮಂಡಿಯೂರುವಂತೆ ಹೋರಾಟ ನಡೆಸೋಣ ಎಂದು ತಿಳಿಸಿದರು.ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 2013ರ ಭೂ ಸ್ವಾಧೀನ ಕಾಯಿದೆ ಜಾರಿಗೆ ತಂದಿತು. ಆದರೆ, ಅದೇ ಪಕ್ಷದ ರಾಜ್ಯ ಸರ್ಕಾರ ಆ ಕಾಯಿದೆಯನ್ನು ಪಾಲನೆ ಮಾಡುತ್ತಿಲ್ಲ. ರೈತರ ತೀವ್ರ ವಿರೋಧದ ನಡುವೆಯೂ ಸರ್ಕಾರ ಬಿಡದಿ ಟೌನ್ ಶಿಪ್ ಯೋಜನೆ ಹೆಸರಿನಲ್ಲಿ 26 ಹಳ್ಳಿಗಳ ಫಲವತ್ತಾದ ಕೃಷಿ ಭೂಮಿಯನ್ನು ನುಂಗಲು ಹೊರಟಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ರವೀಂದ್ರನ್ ಎಚ್ಚರಿಕೆ ನೀಡಿದರು.
ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ವರಲಕ್ಷ್ಮಿ ಮಾತನಾಡಿ, ಸರ್ಕಾರ ಅಭಿವೃದ್ಧಿ ಹೆಸರಿನಲ್ಲಿ ರೈತರ ಘನತೆ ಮತ್ತು ಸಮಾನತೆಯ ಬದುಕಿಗೆ ಕೊಳ್ಳಿ ಇಡುವ ಕೆಲಸ ಮಾಡುತ್ತಿದೆ. ಅಭಿವೃದ್ಧಿ ಜನರಿಗಾಗಿ ಇರಬೇಕು. ಆದರೆ, ಸರ್ಕಾರ ರೈತರನ್ನು ದೂರವಿಟ್ಟು ಬಂಡವಾಳ ಶಾಹಿಗಳ ಅಭಿವೃದ್ಧಿ ಮಾಡಲು ಹೊರಟಿದೆ ಎಂದು ಟೀಕಿಸಿದರು.
ಕೃಷಿ ಭೂಮಿ ವಶಪಡಿಸಿಕೊಂಡು ನಿರ್ಮಿಸಿದ ಕಾರ್ಖಾನೆಗಳಲ್ಲಿ ರೈತರ ಮಕ್ಕಳಿಗೆ ಉದ್ಯೋಗವೇ ಸಿಗುತ್ತಿಲ್ಲ. ಲೋಕರ್ ಅಂದರೆ ಕೆಲಸ ಕೊಡದ ಪರಿಸ್ಥಿತಿ ಇದೆ. ಕೃಷಿ ಮಾಡಿಕೊಂಡು ಗ್ರಾಮ, ಜಿಲ್ಲೆ, ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅನ್ನದಾತನ ಭೂಮಿ ಕಸಿದುಕೊಂಡು ಆತನನ್ನು ನಿರುದ್ಯೋಗಿ ಮಾಡಿ ಬೀದಿಪಾಲು ಮಾಡಲಾಗುತ್ತಿದೆ. ಇಂತಹ ಅಭಿವೃದ್ಧಿ ಕೇಳಿದವರು ಯಾರೆಂದು ಪ್ರಶ್ನೆ ಮಾಡಿದರು.
ಆ ನೇಗಿಲು, ಸನಿಕೆಗಳು ಮಾತನಾಡಲು ಶುರು ಮಾಡಿದರೆ ನೀವ್ಯಾರು ಉಳಿಯುವುದಿಲ್ಲ ಎಂದು ವರಲಕ್ಷ್ಮಿ ಎಚ್ಚರಿಕೆ ನೀಡಿದರು.
ಬಾಕ್ಸ್ ...............
ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಅಖಿಲ ಭಾರತ ಕಿಸಾನ್ ಸಭಾ ಕಾರ್ಯಕರ್ತರು ಮತ್ತು ರೈತರು ಮೆರವಣಿಗೆ ನಡೆಸಿದರು.
ರಾಜ್ಯಸರ್ಕಾರ ರೈತರ ಪ್ರತಿಭಟನೆಗೆ ಬೆಲೆ ನೀಡದೆ ಸರ್ವಾಧಿಕಾರಿ ರೀತಿಯಲ್ಲಿ ವರ್ತಿಸುತ್ತಿದೆ. ರೈತರನ್ನು ಬೆದರಿಸುತ್ತಾ ಇಡೀ ಸರ್ಕಾರ ಬಲವನ್ನು ದುರುಪಯೋಗ ಪಡಿಸಿಕೊಂಡು ಬಡ ರೈತರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಟೌನ್ ಶಿಪ್ ಯೋಜನೆ ರಿಯಲ್ ಎಸ್ಟೇಟ್ ಹಿತಾಸಕ್ತಿಯ ಕಾರ್ಪೋರೇಟ್ ಭೂ ಕಬಳಿಕೆ ಉದ್ದೇಶವಾಗಿದೆ. ಇದನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ಕೇವಲ ಭೂಮಿಗಾಗಿ ನಡೆಸುತ್ತಿರುವ ಹೋರಾಟವಾಗದೆ ಇಡೀ ದೇಶಧ ಆಹಾರ ಭದ್ರತೆ ಹಾಗೂ ರೈತಾಪಿ ಕೃಷಿ ಉಳಿವಿಗಾಗಿ ಮತ್ತು ಜೀವ ಪರಿಸರ ಸುಸ್ತಿರಕ್ಕಾಗಿ ನಡೆಸುತ್ತಿರುವ ಹೋರಾಟವಾಗಿದೆ. ಸರ್ಕಾರ ಯೋಜನೆ ಕೈಬಿಡುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.29ಕೆಆರ್ ಎಂಎನ್ 1.ಜೆಪಿಜಿ
ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಅಖಿಲ ಭಾರತ ಕಿಸಾನ್ ಸಭಾ ಕಾರ್ಯಕರ್ತರು ಮತ್ತು ರೈತರು ಮೆರವಣಿಗೆ ನಡೆಸಿದರು.