ಬಿಡದಿ ಟೌನ್‌ಶಿಪ್: ನರೇಂದರ್ ಸಮಿತಿಯಿಂದ ವಸ್ತುಸ್ಥಿತಿ ಪರಿಶೀಲನೆ

KannadaprabhaNewsNetwork |  
Published : Oct 19, 2026, 01:15 AM IST
 | Kannada Prabha

ಸಾರಾಂಶ

ರಾಮನಗರ: ಸಮಗ್ರ ಉಪನಗರ (ಟೌನ್‌ಶಿಪ್) ಯೋಜನೆಗೆ ಸಂಬಂಧಿಸಿದಂತೆ ವಸ್ತುಸ್ಥಿತಿ ಅರಿತು ವರದಿ ಸಲ್ಲಿಸಲು ರಾಜ್ಯ ಸರ್ಕಾರ ನೇಮಿಸಿರುವ ಪರಿಶೀಲನಾ ಸಮಿತಿ ಸದಸ್ಯರು ಯೋಜನಾ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು

ರಾಮನಗರ: ಸಮಗ್ರ ಉಪನಗರ (ಟೌನ್‌ಶಿಪ್) ಯೋಜನೆಗೆ ಸಂಬಂಧಿಸಿದಂತೆ ವಸ್ತುಸ್ಥಿತಿ ಅರಿತು ವರದಿ ಸಲ್ಲಿಸಲು ರಾಜ್ಯ ಸರ್ಕಾರ ನೇಮಿಸಿರುವ ಪರಿಶೀಲನಾ ಸಮಿತಿ ಸದಸ್ಯರು ಯೋಜನಾ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ನಿವೃತ್ತ ನ್ಯಾಯಾಧೀಶ ಗುರುನಾಥನ್ ನರೇಂದರ್ ನೇತೃತ್ವದ ಸಮಿತಿ ಸದಸ್ಯರು ಬಿಡದಿ ಹೋಬಳಿಯ ಬನ್ನಿಗಿರಿ, ಭೈರಮಂಗಲ ಹಾಗೂ ಹೊಸೂರು ಗ್ರಾಮಗಳಿಗೆ ಭೇಟಿ ನೀಡಿ ಸ್ಥಳೀಯ ಆಸ್ಪತ್ರೆ, ಕೆರೆಗಳು ಮತ್ತು ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡಗಳನ್ನು ವೀಕ್ಷಿಸಿದರು.

ಭೈರಮಂಗಲದ ಕಲುಷಿತ ಕೆರೆ, ಕಾಲುವೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಮಿತಿ ಸದಸ್ಯರು ಆಸ್ಪತ್ರೆಯ ಕೊಠಡಿಗಳು ಮತ್ತು ಶೌಚಾಲಯಗಳ ನಿರ್ವಹಣೆ ಪರಿಶೀಲಿಸಿದರು. ಪ್ರತಿದಿನ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹಾಗೂ ಔಷಧಗಳ ದಾಸ್ತಾನು ಕುರಿತು ವೈದ್ಯರಿಂದ ಮಾಹಿತಿ ಪಡೆದರು. ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಭೇಟಿ ನೀಡಿ, ಪ್ರತಿದಿನ ಸಂಗ್ರಹವಾಗುವ ಹಾಲಿನ ಪ್ರಮಾಣ ಹಾಗೂ ಗ್ರಾಮದಲ್ಲಿರುವ ಜಾನುವಾರುಗಳ ಸಂಖ್ಯೆಯ ವಿವರಗಳನ್ನು ಕಲೆಹಾಕಿದರು.

ಕುಡಿಯುವ ನೀರಿನ ಬನ್ನಿಗಿರಿ ಗ್ರಾಮದ ತೂಬಿನಕೆರೆ ಹಾಗೂ ಹೊಸೂರು ಗ್ರಾಮದ ಕೆರೆಯನ್ನು ವೀಕ್ಷಿಸಿದ ಸಮಿತಿ ಸದಸ್ಯರು, ತೂಬಿನಕೆರೆಯಲ್ಲಿನ ಸ್ವಚ್ಛತೆಯ ಕೊರತೆ ಕಂಡು ಬೇಸರ ವ್ಯಕ್ತಪಡಿಸಿದರು. ಕೆರೆಯಲ್ಲಿ ಸ್ವಚ್ಛತೆ ಕಾಪಾಡಿ, ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳುವಂತೆ ಭೈರಮಂಗಲ ಗ್ರಾಪಂ ಪಿಡಿಒ ಉಮೇಶ್ ಅವರಿಗೆ ಸೂಚಿಸಿದರು.

ರೈತರ ಅಹವಾಲು ಆಲಿಸದಿದ್ದಕ್ಕೆ ಆಕ್ರೋಶ:

ಟೌನ್ ಶಿಪ್ ಯೋಜನೆಯಿಂದ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿರುವ ರೈತರ ಜಮೀನುಗಳಿಗೆ ಸಮಿತಿ ಸದಸ್ಯರು ಭೇಟಿ ನೀಡದೆ, ಅವರ ಮನವಿಗಳನ್ನೂ ಸ್ವೀಕರಿಸದೆ ವಾಪಸ್‌ ತೆರಳಿದ್ದಾರೆ ಎಂದು ಕೆಲ ರೈತರು ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮಗಳ ವಸ್ತುಸ್ಥಿತಿ ಪರಿಶೀಲಿಸುವಾಗ ರೈತರ ಸಮಸ್ಯೆಗಳನ್ನು ಆಲಿಸಿ ಅವರ ಜಮೀನುಗಳ ಪರಿಸ್ಥಿತಿಯನ್ನೂ ಪರಿಶೀಲಿಸಬೇಕಿತ್ತು ಎಂದು ಅವರು ಒತ್ತಾಯಿಸಿದರು.

ಸಮಿತಿಯ ಸದಸ್ಯರಾದ ಎಸ್. ರಂಗನಾಥ್, ಪ್ರಸನ್ನಕುಮಾರ್, ಜಿಬಿಡಿಎ ಅಧಿಕಾರಿ ಪ್ರದೀಪ್, ರಾಮನಗರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗಯ್ಯ, ಪಿಡಿಒ ಉಮೇಶ್ ಹಾಗೂ ರೈತ ಮುಖಂಡರಾದ ಪ್ರಕಾಶ್, ನಾಗರಾಜು, ಅಶ್ವಥ್ ಮತ್ತಿತರರು ಇದ್ದರು.

(ಫೋಟೋ ಕ್ಯಾಪ್ಷನ್‌)

ನಿವೃತ್ತ ನ್ಯಾಯಾಧೀಶ ಗುರುನಾಥನ್ ನರೇಂದರ್ ನೇತೃತ್ವದ ಪರಿಶೀಲನಾ ಸಮಿತಿ ಸದಸ್ಯರು ಬಿಡದಿ ಹೋಬಳಿಯ ಯೋಜನಾ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರಸೀಕೆರೆಯಲ್ಲಿ ಬೀದಿ ವ್ಯಾಪಾರದ ವಿಚಾರಕ್ಕೆ ಗಲಾಟೆ
ಗ್ಯಾರಂಟಿಗಾಗಿ ರೈತರ ಸಾಲಮನ್ನಾ, ಹಳೇ ಪಿಂಚಣಿ ಜಾರಿಯಿಲ್ಲ: ಬಿಕೆ ಹರಿಪ್ರಸಾದ್‌